Advertisement

ಸ್ವಂತ ಮಕ್ಕಳನ್ನು ಕೆರೆಗೆ ತಳ್ಳಿದ್ದ ಬ್ಯಾಂಕ್‌ ಮ್ಯಾನೇಜರ್‌

02:55 PM Sep 23, 2017 | |

ಪುತ್ತೂರು : ಏಳು ವರ್ಷಗಳ ಹಿಂದೆ ಪಾಣಾಜೆ ಗ್ರಾಮದ ಅರ್ಧ ಮೂಲೆಯಲ್ಲಿ ತನ್ನಿಬ್ಬರು ಮಕ್ಕಳನ್ನು, ತುಮಕೂರಿನಲ್ಲಿ ನಾದಿನಿ, ಅತ್ತೆಯನ್ನು ಪುತ್ತೂರು ಮೂಲದ ಬ್ಯಾಂಕ್‌ ಮ್ಯಾನೇಜರ್‌ ಹತ್ಯೆ ಮಾಡಿದ ಪ್ರಕರಣ ಇಡೀ ಜಿಲ್ಲೆಯನ್ನೇ ತಲ್ಲಣಗೊಳಿಸಿತ್ತು. ಸ್ವಂತ ಮಕ್ಕಳನ್ನು ಕೊಂದ ಪ್ರಕರಣಕ್ಕೆ ಆರೋಪಿಗೆ ಪುತ್ತೂರು ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿತ್ತು. ಪುತ್ತೂರಿನಲ್ಲಿ ಜಿಲ್ಲಾ ನ್ಯಾಯಾಲಯ ಸ್ಥಾಪನೆಯಾದ ಬಳಿಕ ವಿಧಿಸಿದ ಪ್ರಥಮ ಮರಣದಂಡನೆ ಶಿಕ್ಷೆಯೂ ಇದಾಗಿತ್ತು. ಈ ತೀರ್ಪನ್ನು ಈಗ ಹೈಕೋರ್ಟ್‌ ಎತ್ತಿ ಹಿಡಿದಿದೆ.

Advertisement

ರಾಷ್ಟ್ರೀಕೃತ ಬ್ಯಾಂಕ್‌ ಒಂದರಲ್ಲಿ ತುಮಕೂರು ಜಿಲ್ಲೆಯ ಸೋಲಾಪುರ ಶಾಖೆಯಲ್ಲಿ ಮ್ಯಾನೇಜರ್‌ ಆಗಿದ್ದ ರಮೇಶ್‌ ನಾಯ್ಕ ತನ್ನ ಪತ್ನಿಯ ಸೋದರಿ ಸವಿತಾಳ ಮೇಲೆ ಕಣ್ಣಿಟ್ಟಿದ್ದ. ಆಕೆ ಪ್ರೇಮ ವಿವಾಹ ಮಾಡಿಕೊಳ್ಳಲು ಮುಂದಾದಾಗ ಸಿಟ್ಟಿಗೆದ್ದು ತುಮಕೂರಿನಲ್ಲಿದ್ದ ಆಕೆ ಮತ್ತು ಅತ್ತೆ ಸರಸ್ವತಿ ಅವರನ್ನೂ 2010ರ ಜೂನ್‌ 14ರಂದು ಕೊಲೆ ಮಾಡಿದ್ದ. 

2 ದಿನಗಳ ಅನಂತರ ಮಂಗಳೂರಿಗೆ ಬಂದು ತನ್ನಿಬ್ಬರು ಮಕ್ಕಳಾದ ಭುವನ್‌ ರಾಜ್‌ (10) ಮತ್ತು ಕೃತ್ತಿಕಾ (4)ರನ್ನು ಪಾಣಾಜೆಯ ಅರ್ಧಮೂಲೆಯಲ್ಲಿ ಕೆರೆಗೆ ತಳ್ಳಿ ಹತ್ಯೆ ಮಾಡಿದ್ದ.

ರಮೇಶ ನಾಯ್ಕ ಮೂಲತಃ ಪಾಣಾಜೆಯ ಅರ್ಧಮೂಲೆಯವನು. ಆತನಿಗೆ ಪುತ್ತೂರಿನಿಂದ ವಿವಾಹವಾಗಿತ್ತು. ಪತಿ-ಪತ್ನಿ ಇಬ್ಬರೂ ಬೇರೆ ಬೇರೆ ಬ್ಯಾಂಕ್‌ಗಳಲ್ಲಿ ಉದ್ಯೋಗದಲ್ಲಿದ್ದರು. ರಮೇಶ ನಾಯ್ಕ ಸೋಲಾಪುರದಲ್ಲಿ ಮ್ಯಾನೇಜರ್‌ ಆಗಿದ್ದ. ತುಮಕೂರಿನಲ್ಲಿ ತನ್ನ ಅತ್ತೆ, ನಾದಿನಿ ಸವಿತಾ ಅವರ ಮನೆಯಲ್ಲಿ ವಾಸ ಮಾಡುತ್ತಿದ್ದ. ರಮೇಶ್‌ ನಾಯ್ಕನ ಮಡದಿ ಸುಂದರಿ ಮಂಗಳೂರಿನಲ್ಲಿ ಬ್ಯಾಂಕ್‌ ಉದ್ಯೋಗಿಯಾಗಿದ್ದರಿಂದ ಆಕೆ, ಇಬ್ಬರು ಮಕ್ಕಳೊಂದಿಗೆ ಮಂಗಳೂರಿನಲ್ಲೇ ವಾಸವಿದ್ದರು.

ನಾದಿನಿ ಮೇಲಿನ ಮೋಹ
ನಾದಿನಿ ಸವಿತಾಳನ್ನು ಇಷ್ಟ ಪಟ್ಟಿದ್ದ ಆರೋಪಿ ರಮೇಶ ನಾಯ್ಕ, ಆಕೆ ತನ್ನ ಸಹೋದ್ಯೋಗಿ ಮೋಹನ್‌ ಎಂಬಾ ತನನ್ನು ಪ್ರೀತಿಸಿ ಮದುವೆ ಯಾಗಲು ಸಿದ್ಧಳಾದಾಗ ಆಕ್ಷೇಪಿಸಿದ್ದ. ಆದರೆ ಮನೆಯವರು ಸೊಪ್ಪು ಹಾಕದ ಕಾರಣ ಕುಪಿತಗೊಂಡ ರಮೇಶ್‌, ತುಮಕೂರಿಗೆ ತೆರಳಿ ಸವಿತಾಳನ್ನು ಕೊಲೆ ಮಾಡಿ, ಶವವನ್ನು ನೀರಿನ ಟ್ಯಾಂಕ್‌ಗೆ ಎಸೆದಿದ್ದ. ತಡೆಯಲು ಬಂದ ಅತ್ತೆ ಸರಸ್ವತಿ ಅವರನ್ನೂ ಹತ್ಯೆ ಮಾಡಿದ್ದ.

Advertisement

ಮಕ್ಕಳನ್ನು ಕೆರೆಗೆ ತಳ್ಳಿದ್ದ
ತುಮಕೂರಿನಿಂದ ಪರಾರಿಯಾಗಿ ಮಂಗಳೂರಿಗೆ ಬಂದ ರಮೇಶ್‌, ಮಧ್ಯಾಹ್ನ ಶಾಲೆ ಬಿಟ್ಟು ಬಂದ ಭುವನ್‌ರಾಜ್‌ (10) ಮತ್ತು ಮನೆಯಲ್ಲಿದ್ದ ಕೃತ್ತಿಕಾ (4) ಅವರನ್ನು ಐಸ್‌ ಕ್ರೀಂ ಕೊಡಿಸುವುದಾಗಿ ಹೇಳಿ ಬಾಡಿಗೆ ಕಾರಲ್ಲಿ ಪಾಣಾಜೆಗೆ ಕರೆ ತಂದಿದ್ದ. ಅಲ್ಲಿಗೆ ಬರುವಾಗ ಸಂಜೆ ಆಗಿತ್ತು. ಅರ್ಧಮೂಲೆಯಲ್ಲಿ ತಾನು ಈ ಹಿಂದೆ ಮಾರಾಟ ಮಾಡಿದ್ದ ಜಮೀನಿನ ಪಕ್ಕದ ತೋಟಕ್ಕೆ ಮಕ್ಕಳನ್ನು ಕರೆದೊಯ್ದು ಕೆರೆಗೆ ಅವರನ್ನು ತಳ್ಳಿ ಹತ್ಯೆ ಮಾಡಿದ್ದ. ಬಳಿಕ ಪುತ್ತೂರಿನ ವಸತಿಗೃಹವೊಂದರಲ್ಲಿ ಬಿಡಾರ ಹೂಡಿದ್ದ.

ಸಂಪರ್ಕಕಕ್ಕೆ ಸಿಗಲಿಲ್ಲ
ತುಮಕೂರಿನಲ್ಲಿ ತನ್ನ ತಂಗಿ ಅಥವಾ ತಾಯಿ ಸಂಪರ್ಕಕ್ಕೆ ಸಿಗದ ಕಾರಣ ಗಾಬರಿಗೊಂಡ ಸುಂದರಿ ಅವರಿಗೆ, ತಮ್ಮ ಪತಿ ರಮೇಶ್‌, ತುಮಕೂರಿಗೆ ಬಂದಿದ್ದ ಸುದ್ದಿ ತಿಳಿಯುತ್ತದೆ. ಆಕೆ ಮಂಗಳೂರಿನ ಮನೆಗೆ ಬಂದಾಗ, ಮಕ್ಕಳನ್ನೂ ಕರೆದು ಕೊಂಡು ಹೋಗಿದ್ದಾನೆ ಎಂಬುದು ಗೊತ್ತಾಗುತ್ತದೆ. ಆತನ ಮೊಬೈಲ್‌ಗೆ ಕರೆ ಮಾಡಿದರೆ, ಅದು ಸ್ವಿಚ್ಡ್ ಆಫ್‌ ಆಗಿತ್ತು. ಆಮೇಲೆ ಬಾಡಿಗೆ ಕಾರಿನ ಚಾಲಕನನ್ನು ಸಂಪರ್ಕಿಸಿದಾಗ ರಮೇಶ ನಾಯ್ಕ ಅರ್ಧಮೂಲೆಗೆ ಬಂದ ಸಂಗತಿ ಬೆಳಕಿಗೆ ಬಂದಿತ್ತು. ಇದೇ ವೇಳೆ ರಮೇಶ್‌ ನಾಯ್ಕನಿಂದ, ಆತನ ಪತ್ನಿಯ ಮೊಬೈಲ್‌ಗೆ, ‘ನಾವೆಲ್ಲ ಒಂದು ಕಡೆ ಸ್ವರ್ಗ ಸೇರಿದ್ದೇವೆ. ನೀನು ನೀರು ಇರುವ ಬಾವಿಯನ್ನು ನೋಡಿ ಹಾರು’ ಎಂಬ ಸೂಚನೆಯಿರುವ ಸಂದೇಶ ಕಳುಹಿಸುತ್ತಾನೆ.

ಆರೋಪಿ ಬಂಧನ
ಈ ವೇಳೆಗಾಗಲೇ ಮಾಹಿತಿ ಸಿಕ್ಕಿ ಗ್ರಾಮಾಂತರ ಠಾಣೆಯ ಆಗಿನ ಸಿಪಿಐ ಬಿ.ಕೆ. ಮಂಜಯ್ಯ ಮತ್ತು ತಂಡ ಆರೋಪಿಯನ್ನು ವಸತಿಗೃಹದಲ್ಲಿ ಬಂಧಿಸಿತು. ವಿಚಾರಣೆ ನಡೆದು, ಅತ್ತೆ ಹಾಗೂ ನಾದಿನಿಯನ್ನು ಹತ್ಯೆ ಮಾಡಿದ ಆರೋಪದಲ್ಲಿ ತುಮಕೂರು ನ್ಯಾಯಾಲಯ 2012ರಲ್ಲಿ ಆರೋಪಿ ರಮೇಶ ನಾಯ್ಕಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಸ್ವಂತ ಮಕ್ಕಳನ್ನು ಕೊಂದ ಪ್ರಕರಣಕ್ಕೆ ಸಂಬಂಧಿಸಿ 2013ರಲ್ಲಿ ಪುತ್ತೂರು ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿ, ತೀರ್ಪು ನೀಡಿತ್ತು.

ಮೊದಲ ಗಲ್ಲು ಪ್ರಕರಣ
ದ.ಕ. ಜಿಲ್ಲೆಯ ಇತಿಹಾಸದಲ್ಲಿ ಈ ಮರಣ ದಂಡನೆ ಮೂರನೆಯದ್ದಾಗಿತ್ತು. ರಿಪ್ಪರ್‌ ಚಂದ್ರನಿಗೆ ನೀಡಲಾದ ಮರಣದಂಡನೆ ಮೊದಲನೆ ಯದ್ದು. ವಾಮಂಜೂರಿನಲ್ಲಿ ಸಂಬಂಧಿಕರು ನಾಲ್ವರನ್ನು ಹತ್ಯೆ ಮಾಡಿದ ಉಪ್ಪಿನಂಗಡಿ ಪೆರಿಯಡ್ಕದ ಪ್ರವೀಣ ಸಫಲ್ಯಗೆ ಮರಣ ದಂಡನೆಯನ್ನು ಜಿಲ್ಲಾ ನ್ಯಾಯಾಲಯ ವಿಧಿಸಿತ್ತು. ಪುತ್ತೂರು ನ್ಯಾಯಾಲಯದ 101 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ಮರಣದಂಡನೆ ಶಿಕ್ಷೆ ವಿಧಿಸಿತ್ತು. ಇದೀಗ ಹೈಕೋರ್ಟ್‌ ಈ ತೀರ್ಪನ್ನು ಎತ್ತಿ ಹಿಡಿದಿದೆ.

ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next