ಗದಗ: ಇತ್ತೀಚಿನ ದಿನಗಳಲ್ಲಿ ನಾನಾ ಕಾರಣಗಳಿಂದಾಗಿ ಅನೇಕ ಸಹಕಾರಿ ಸಂಘಗಳು ಸೇರಿದಂತೆ ರಾಷ್ಟ್ರೀಕೃತ ಬ್ಯಾಂಕ್ ಗಳು ನಷ್ಟದ ಹಾದಿಯಲ್ಲಿ ಸಾಗುತ್ತಿವೆ. ಆದರೆ, ಮಹಿಳೆಯರೇ ಕಟ್ಟಿದ ಸೌಭಾಗ್ಯ ಮಹಿಳಾ ಸೌಹಾರ್ದ ಸಹಕಾರಿ ಬ್ಯಾಂಕ್ ಇಂದು ಹೆಮ್ಮರವಾಗಿ ಬೆಳೆದಿದೆ. ವಾರ್ಷಿಕ ಕೋಟ್ಯಂತರ ರೂ. ವಹಿವಾಟು ನಡೆಸುವುದರೊಂದಿಗೆ ಮಹಿಳೆಯರ ಸ್ವಾವಲಂಬಿ ಜೀವನಕ್ಕೆ ಬೆನ್ನೆಲುಬಾಗಿ ನಿಂತಿದಿದೆ.
ನಗರದ ಚಾರ್ಟೆಡ್ ಅಕೌಂಟೆಂಟ್ ಆನಂದ ಪೋತ್ನೀಸ್ ಅವರ ಪತ್ನಿ ವೀಣಾ ಎ. ಪೋತ್ನೀಸ್ ಜಾನಕಿ ಮಲ್ಲಾಪುರ, ನಂದಾ ಬಿ. ಹುಲಕೋಟಿ ಹಾಗೂ ಮತ್ತಿತರರ ಪ್ರಯತ್ನದಿಂದ 1998ರಲ್ಲಿ ಸೌಭಾಗ್ಯ ಮಹಿಳಾ ಸೌಹಾರ್ದ ಸಹಕಾರಿ ಬ್ಯಾಂಕ್ ನಿಯಮಿಯತ ಸ್ಥಾಪನೆಗೊಂಡಿದ್ದು, ಕಳೆದ ಎರಡು ದಶಕಗಳಿಂದ ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ ಕಾರ್ಯನಿರ್ವಹಿಸುತ್ತಿದೆ.
ಕೋಟ್ಯಂತರ ರೂ. ವಹಿವಾಟು: 1998ರಲ್ಲಿ 2 ಸಾವಿರ ಶೇರುಗಳಿಂದ ಆರಂಭಗೊಂಡ ಸೌಭಾಗ್ಯ ಮಹಿಳಾ ಬ್ಯಾಂಕ್ ಇದೀಗ 4,500 ಶೇರುದಾರರನ್ನು ಹೊಂದಿದೆ. ಬ್ಯಾಂಕ್ ಆರಂಭದಲ್ಲಿದ್ದ 100 ರೂ. ಇದ್ದ ಒಂದು ಶೇರಿನ ಬೆಲೆ ಈಗ 500 ರೂ.ಗೆ ತಲುಪಿದೆ. 4000 ಎಸ್‌ಬಿ ಖಾತೆಗಳನ್ನು ಹೊಂದಿದೆ. ಆರ್‌ಡಿ, ಎಫ್‌ಡಿ, ಸಿಎ ಸೇರಿದಂತೆ ಮತ್ತಿತರೆ ಪ್ರಕಾರದ ಖಾತೆಗಳು ಹೊಂದಿದೆ. ಸಾಮಾನ್ಯವಾಗಿ ಸೌಹಾರ್ದ ಬ್ಯಾಂಕ್‌ಗಳು ನೀಡುವ ಸೇವೆಗಳನ್ನೇ ಗ್ರಾಹಕರಿಗೆ ಒದಗಿಸುತ್ತಿದೆ. ಗದಗ ತಾಲೂಕಿನ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ವೇತನ, ಅನೇಕ ಸರಕಾರಿ ನಿವೃತ್ತ ಹಿರಿಯ ನಾಗರಿಕರು ಪಿಂಚಣಿಯನ್ನೂ ಇದೇ ಬ್ಯಾಂಕ್ ನಿಂದ ಪಡೆದುಕೊಳ್ಳುತ್ತಿದ್ದಾರೆ.
ಶೇ. 95ರಷ್ಟು ಮಹಿಳೆಯರಿಗೆ ಸಾಲ!: ಇದು ಮಹಿಳೆಯರಿಂದಲೇ ಆರಂಭಗೊಂಡಿರುವ ಬ್ಯಾಂಕ್ ಇದಾಗಿದ್ದರಿಂದ ಸಾಲ ಸೌಲಭ್ಯದಲ್ಲಿ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಪ್ರತೀ ವರ್ಷ ಸರಾಸರಿ 9 ಕೋಟಿ ರೂ. ಗಳಷ್ಟು ಸಾಲ ನೀಡುತ್ತಿದೆ. ಇದರಲ್ಲಿ ಶೇ. 95ರಷ್ಟು ಮಹಿಳಾ ಗ್ರಾಹಕರಿಗೆ ಸಾಲ ನಿಡಲಾಗುತ್ತಿದ್ದು, ಶೇ. 5ರಷ್ಟು ಮಾತ್ರ ಪುರುಷರಿಗೆ ಸಾಲ ನೀಡಲಾಗುತ್ತಿದೆ. ಮಹಿಳೆಯರಿಗೆ ಸಾಲ ನೀಡುವುದರಿಂದ ಅವರು ಸಣ್ಣ- ಪುಟ್ಟ ವ್ಯಾಪಾರ ಆರಂಭಿಸುತ್ತಾರೆ. ಅವರ ಕುಟುಂಬದ ಆರ್ಥಿಕ ಸ್ಥಿತಿ ಸುಧಾರಣೆಯಾಗಲಿದ್ದು, ನೀಡಿದ ಸಾಲ ಸದ್ವಿನಿಯೋಗವಾಗುತ್ತದೆ ಎಂಬುದು ಬ್ಯಾಂಕಿನ ಆಡಳಿತ ಮಂಡಳಿಯ ಬಲವಾದ ನಂಬಿಕೆ.
ಹೀಗಾಗಿ ಬ್ಯಾಂಕ್ ಸ್ಥಾಪನೆಯಾದಾಗಿನಿಂದ ಈ ವರೆಗೆ ಯಾವ ವರ್ಷವೂ ಸಾಲ ಮಂಜೂರಾತಿಯಲ್ಲಿ ಶೇ. 5ಕ್ಕಿಂತ ಹೆಚ್ಚು ಪುರುಷರಿಗೆ ಸಾಲ ನೀಡಿಲ್ಲ. ಬ್ಯಾಂಕ್‌ನ ನಿರೀಕ್ಷೆಯಂತೆ ಸಾಲ ಪಡೆದಿರುವ ಮಹಿಳೆಯರಲ್ಲಿ ಬಹುತೇಕರು ಹಣ್ಣು ಮತ್ತು ತರಕಾರಿ ಅಂಗಡಿ, ಚಹ ಅಂಗಡಿ, ಕಿರಣಿ ಅಂಗಡಿಗಳನ್ನು ನಡೆಸುತ್ತಿದ್ದಾರೆ. ಇನ್ನೂ ಕೆಲವರು ಮಕ್ಕಳ ಶಿಕ್ಷಣ, ಆರೋಗ್ಯ ಹಾಗೂ ಮತ್ತಿತರೆ ಕಾರಣಗಳಿಗೆ ಸಾಲ ಪಡೆದಿದ್ದರೂ ಶೇ. 90ರಷ್ಟು ಸಾಲ ಮರುಪಾವತಿಯಾಗುತ್ತಿದೆ ಎನ್ನುತ್ತಾರೆ ಬ್ಯಾಂಕಿನ ಅಧಿಕಾರಿಗಳು.
ಬಹುತೇಕ ಮಹಿಳಾ ಸಿಬ್ಬಂದಿ: ಸೌಭಾಗ್ಯ ಮಹಿಳಾ ಸೌಹಾರ್ದ ಸಹಕಾರಿ ಬ್ಯಾಂಕ್‌ನಲ್ಲಿ ಹೆಸರೇ ಸೂಚಿಸುವಂತೆ ಬಹುತೇಕ ಎಲ್ಲ ಹುದ್ದೆಗಳಿಗೆ ಮಹಿಳೆಯರಿಗೆ ಮೀಸಲಾಗಿವೆ. ಬ್ಯಾಂಕ್‌ನ ಒಟ್ಟು ಏಳು ಹುದ್ದೆಗಳ ಪೈಕಿ ಪರಿಚಾರಕ ಹಾಗೂ ತಾಂತ್ರಿಕ ಹುದ್ದೆಗಳನ್ನು ಹೊರತು ಪಡಿಸಿದರೆ, ವ್ಯವಸ್ಥಾಪಕರು, ಕ್ಯಾಷಿಯರ್, ಕ್ಲರ್ಕ್ ಸೇರಿದಂತೆ ಐದು ಹುದ್ದೆಗಳನ್ನೇ ಮಹಿಳೆಯರೇ ಯಶಸ್ವಿಯಾಗಿ ನಿಭಾಯಿಸುತ್ತಿದ್ದಾರೆ. ಹೀಗಾಗಿ 22 ವರ್ಷಗಳ ಹಿಂದೆ 25 ಲಕ್ಷ ರೂ.ಗಳೊಂದಿಗೆ ಆರಂಭಗೊಂಡಿದ್ದ ಸೌಭಾಗ್ಯ ಮಹಿಳಾ ಸೌಹಾರ್ದ ಬ್ಯಾಂಕ್ ಇದೀಗ 50 ರೂ. ಆರ್.ಡಿ. ಠೇವಣಿ, ಎಪ್‌ಡಿ ಇತರೆ ಠೇವಣಿಳು ಸೇರಿದಂತೆ 20 ಕೋಟಿ ರೂ. ಹೊಂದಿದ್ದು, 11 ಕೋಟಿ ರೂ. ಸಾಲ ನೀಡಿದ್ದು, ಪ್ರತಿನಿತ್ಯ 10ರಿಂದ 15 ಲಕ್ಷ ರೂ. ವ್ಯವಹಾರ ಸೇರಿದಂತೆ ವಾರ್ಷಿಕ 24 ಕೋಟಿ ರೂ. ವಹಿವಾಟು ನಡೆಸುತ್ತಿರುವುದು ಶ್ಲಾಘನೀಯ. ಉತ್ತಮ ಆಡಳಿತ, ಪ್ರಾಮಾಣಿಕ ಸೇವೆಯೊಂದಿಗೆ ಯಶಸ್ಸಿನ ಹಾದಿಯನ್ನು ಮುನ್ನಡೆಯುವ ಮೂಲಕ ಸೌಭಾಗ್ಯ ಮಹಿಳಾ ಬ್ಯಾಂಕ್ ಇತರೆ ಸಹಕಾರಿ ಬ್ಯಾಂಕ್‌ಗಳಿಗೆ ಮಾದರಿಯಾಗಿದೆ.
ಈ ಬ್ಯಾಂಕ್ ಆರಂಭದಿಂದ ಇಲ್ಲೇ ಕೆಲಸ ಮಾಡುತ್ತಿದ್ದೇನೆ. ಆರಂಭದಲ್ಲಿ ಕ್ಲರ್ಕ್ ಆಗಿದ್ದ ನಾನು ಕಳೆದ ಐದಾರು ವರ್ಷಗಳಿಂದ ವ್ಯವಸ್ಥಾಪಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಆಡಳಿತ ಮಂಡಳಿಯಲ್ಲಿ ಸಂಪೂರ್ಣ ಮಹಿಳೆಯರೇ ಇರುವುದರಿಂದ ಮಹಿಳಾ ಗ್ರಾಹಕರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಇದು ಮಹಿಳೆಯರಿಂದ ಮಹಿಳೆಯರೆಗಾಗಿಯೇ ಇರುವ ಬ್ಯಾಂಕ್. –
ಬಿ.ಎಂ. ಹಂಡಿ, ಸೌಭಾಗ್ಯ ಮಹಿಳಾ ಸೌಹಾರ್ದ ಸಹಕಾರಿ ಬ್ಯಾಂಕ್
-ವೀರೇಂದ್ರ ನಾಗಲದಿನ್ನಿ