Advertisement

ಸಕಲ ಕ್ಷೇತ್ರದಲ್ಲೂ ಬಂಜಾರರು ಬೆಳೆಯಲಿ

05:18 AM Feb 16, 2019 | |

ಕಲಬುರಗಿ: ಬಂಜಾರಾ ಸಮುದಾಯ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಇನ್ನು ಬೆಳೆಯಬೇಕಿದೆ ಎಂದು ಚಿಂಚೋಳಿ ಕ್ಷೇತ್ರದ ಶಾಸಕ ಡಾ| ಉಮೇಶ ಜಾಧವ್‌ ಹೇಳಿದರು.

Advertisement

ಡಾ| ಎಸ್‌.ಎಂ. ಪಂಡಿತ ರಂಗಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಂತ ಸೇವಾಲಾಲ ಮಹಾರಾಜರ 280ನೇ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಡಾ| ಬಿ.ಆರ್‌. ಅಂಬೇಡ್ಕರ್‌, ಸಂತ ಸೇವಾಲಾಲರ ಸಿದ್ಧಾಂತಗಳು ಒಂದೇ ಆಗಿವೆ. ಸೇವಾಲಾಲ ಮಹಾರಾಜರು ಸಮಾಜದ ಉನ್ನತಿಗಾಗಿ ಅನೇಕ ಕೊಡುಗೆ ನೀಡಿದ್ದಾರೆ ಎಂದರು.

ನೀವು ಬದುಕಿ ಇನ್ನೊಬ್ಬರನ್ನು ಬದುಕಲು ಬಿಡಿ ಎನ್ನುವ ಸಿದ್ಧಾಂತವನ್ನು ಬಂಜಾರಾ ಸಮುದಾಯ ನಂಬಿದೆ. ಮಂದಿರ, ಮಸೀದಿ ಒಡೆದರೂ ಸಹಿಸಿಕೊಳ್ಳಬಹುದು. ಆದರೆ, ಯಾರ ಮನಸು ಒಡೆಯಬೇಡಿ ಎನ್ನುವ ಆಶಯದೊಂದಿಗೆ ಬಂಜಾರಾ ಸಮುದಾಯ ಬದುಕುತ್ತಿದೆ ಎಂದು ಹೇಳಿದರು. 

ಸರ್ಕಾರದಿಂದ ಸಂತ ಸೇವಾಲಾಲರ ಜಯಂತಿ ಆಚರಣೆಗೆ ಅನೇಕ ವರ್ಷಗಳಿಂದ ಬೇಡಿಕೆ ಇತ್ತು. ಕಳೆದ ವರ್ಷ ಸಿದ್ದರಾಮಯ್ಯ ಜಯಂತಿ ಆಚರಣೆ ಜಾರಿಗೆ ತಂದರು. ಹೀಗಾಗಿ ಅವರನ್ನು ಬಂಜಾರಾ ಸಮುದಾಯ ಹಾಗೂ ನಾನು ಸಾಯೋವರೆಗೂ ಮರೆಯೋದಿಲ್ಲ ಎಂದರು.

ಲಂಬಾಣಿ ಸಮುದಾಯದ ಮುಖಂಡ ಸುಭಾಷ ರಾಠೊಡ ಮಾತನಾಡಿ, ಸಂತ ಸೇವಾಲಾಲ ಮಹಾರಾಜರು 1739ರಲ್ಲಿ ಜನಿಸಿದರು. ಅಂದಿನ ಕಾಲದಲ್ಲಿಯೇ ಅವರು ಧಾರ್ಮಿಕವಾಗಿ, ಆಧ್ಯಾತ್ಮಿಕವಾಗಿ ಚಿಂತನೆ ಮಾಡಿದ್ದರು. ಭಾರತವಲ್ಲದೇ ಜಗತ್ತಿನ ಕಲ್ಯಾಣಕ್ಕಾಗಿ, ಮನುಕುಲದ
ಉದ್ಧಾರಕ್ಕಾಗಿ, ನಿಸರ್ಗದ ಉನ್ನತಿಗಾಗಿ ಭೂಮಿಯನ್ನು ಕಾಪಾಡಿ ಎಂದು ನುಡಿದ ಮಹನೀಯರಾಗಿದ್ದರು ಎಂದರು. ಜಿಪಂ ಸಿಇಒ ಡಾ| ಪಿ.ರಾಜಾ, ಸೇವಾಲಾಲ ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ರೇವುನಾಯಕ ಬೆಳಮಗಿ, ಪಾಲಿಕೆ ಸದಸ್ಯೆ ಲತಾ ರವಿ ರಾಠೊಡ ಮಾತನಾಡಿದರು.

Advertisement

ಬೆಡಸೂರ ಪರ್ವತಲಿಂಗ ಪರಮೇಶ್ವರ ಮಹಾರಾಜರು, ಮುಗಳನಾಗಾಂವ ಜೇಮಸಿಂಗ್‌ ಮಹಾರಾಜರು, ಗೊಬ್ಬುರವಾಡಿ ಪೂಜ್ಯ ಬಳಿರಾಮ ಮಹಾರಾಜರು, ಕೆಸರಟಗಿ ಭಾಗವಂತಿದೇವಿ ವರಪುತ್ರಿ ಮಾತಾ ಲತಾದೇವಿ ಸಾನ್ನಿಧ್ಯ ವಹಿಸಿದ್ದರು. ಜಿಪಂ ಅಧ್ಯಕ್ಷೆ ಸುವರ್ಣಾ ಹಣಮಂತರಾಯ ಮಲಾಜಿ, ಸಹಾಯಕ ಆಯುಕ್ತ ರಾಹುಲ್‌ ತುಕಾರಾಮ ಪಾಂಡ್ವೆ ಹಾಗೂ ಸಮುದಾಯ ಗಣ್ಯರು ಪಾಲ್ಗೊಂಡಿದ್ದರು. ಶಿವಾನಂದ ಅಣಜಿಗಿ ನಿರೂಪಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ ಮರಬನಳ್ಳಿ ಸ್ವಾಗತಿಸಿದರು. ಇದಕ್ಕೂ ಮುನ್ನ ಸಂತ ಸೇವಾಲಾಲ ಮಹಾರಾಜರ ಭಾವಚಿತ್ರದ ಭವ್ಯ ಮೆರವಣಿಗೆ ವಿವಿಧ ಜಾನಪದ ಕಲಾ ತಂಡಗಳೊಂದಿಗೆ ನೆಹರು ಗಂಜ್‌ನ ನಗರೇಶ್ವರ ಬಾಲವಿಕಾಸ ಮಂದಿರದಿಂದ ಜಗತ್‌ ವೃತ್ತ ಮೂಲಕ ಎಸ್‌.ಎಂ ಪಂಡಿತ ರಂಗಮಂದಿರ ವರೆಗೆ ನಡೆಯಿತು.

ಸಚಿವರು-ಅಧಿಕಾರಿಗಳ ಗೈರಿಗೆ ಅಸಮಾಧಾನ
ಸಂತ ಸೇವಾಲಾಲ ಮಹಾರಾಜರ ಜಯಂತಿ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಉಸ್ತುವಾರಿ ಪ್ರಿಯಾಂಕ್‌ ಖರ್ಗೆ, ಜಿಲ್ಲೆಯ ಇತರ ಶಾಸಕರು, ಜಿಲ್ಲಾಧಿಕಾರಿಗಳು, ಪ್ರಾದೇಶಿಕ ಆಯುಕ್ತರು ಗೈರಾಗಿದ್ದರು. ಈ ಬಗ್ಗೆ ಶಾಸಕ ಡಾ| ಉಮೇಶ ಜಾಧವ್‌ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದರು. ನಮ್ಮ ಕಾರ್ಯಕ್ರಮಕ್ಕೆ ಸಚಿವರು, ಹಿರಿಯ ಅಧಿಕಾರಿಗಳು ಗೈರಾದರೆ ಮನಸಿಗೆ ನೋವು ಆಗುತ್ತೆ. ಎಲ್ಲರೂ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರೆ ನಮ್ಮ ಸಮುದಾಯವನ್ನು ಗಣನೆಗೆ ತೆಗೆದುಕೊಂಡಿದ್ದಾರೆ ಎನ್ನುವ ಸಂದೇಶ ರವಾನೆಯಾಗುತ್ತಿತ್ತು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next