Advertisement

ಬಂಜಾರಾ ಸಮಾಜದಿಂದ “ಸಂಸ್ಕೃತಿ’ಪೋಷಣೆ  

07:03 PM Mar 07, 2021 | Team Udayavani |

ಚಿತ್ರದುರ್ಗ: ಬಂಜಾರಾ ಸಂಸ್ಕೃತಿಯ ಜತೆಗೆ ಸಾಗುವ ಸಮುದಾಯವಾಗಿದೆ ಎಂದು ಡಾ| ಶ್ರೀ ಶಿವಮೂರ್ತಿ ಮುರುಘಾ ಶರಣರು ಹೇಳಿದರು.

Advertisement

ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸಾಹಿತಿ ಕೆ.ಮಂಜುನಾಥ್‌ ನಾಯಕ್‌ ಅವರ ಸಂಶೋತ “ಸಿಂಧು  ಗೋರ್‌ ಬಂಜಾರಾ’ ಸಂಶೋಧನಾ ಗ್ರಂಥ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.

ಬಂಜಾರಾ ಸಮುದಾಯದ ಉಡುಗೆ ಜಾನಪದ ಶೈಲಿಯ ವಿಶೇಷ ವಿನ್ಯಾಸದಿಂದ ಕೂಡಿದೆ. ಅದಕ್ಕೆ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ. ಅವರು ವಾಸ ಮಾಡುವ ಸ್ಥಳ ಸಾಂಸ್ಕೃತಿಕ ಪರಿಸರವಾಗಿರುತ್ತದೆ. ಭಾರತ ಸಂಸ್ಕೃತಿಗಳ ದೇಶ. ಹಲವಾರು ಜಾತಿ, ಸಾವಿರಾರು ಜನಾಂಗಗಳಿಗೆ ಉಗಮಸ್ಥಾನವಾಗಿದೆ. ಸಾಂಸ್ಕೃತಿಕ ಪರಿಸರ ಇರುವ ಕಾರಣ ಹಿಂದೂಸ್ಥಾನ ಸಾಂಸ್ಕೃತಿಕ ಸ್ಥಾನವಾಗಿದೆ ಎಂದು ಬಣ್ಣಿಸಿದರು.

ಸಂಶೋಧಕರು ಒಂದು ರೀತಿ ಅಜ್ಞಾತವಾಸಿಗಳು ಆಗಿದ್ದಾರೆ. ಸಂಶೋಧನೆ ವೇಳೆ ದೇಶದ ವಿವಿಧ ರಾಜ್ಯಗಳಿಗೆ ಪ್ರಯಾಣ ಬೆಳೆಸಬೇಕಾದ ಸಂದರ್ಭ ಎದುರಾಗುತ್ತದೆ. ಸಂಶೋಧನಾ ಕಾರ್ಯ ಕಷ್ಟದ ಕೆಲಸವಾಗಿದೆ. ಏನೇ ಎದುರಾದರೂ ಧೈರ್ಯ, ಸ್ಥೆ çರ್ಯದಿಂದ ಸಾಗುವ ಇವರ ಕಾರ್ಯ ಮೆಚ್ಚಿಕೊಳ್ಳುವಂಥದ್ದು ಎಂದರು. ಸಂಶೋಧನಾ ಗ್ರಂಥ “ಸಿಂಧು ಗೋರ್‌ ಬಂಜಾರಾ’ ಕೃತಿಯು ಎರಡು ಭಾಗಗಳನ್ನು ಒಳಗೊಂಡಿದೆ. ಮೊದಲ ಭಾಗದಲ್ಲಿ ಜನರ ಸಂಸ್ಕೃತಿ ಬೆಳೆದು ಬಂದ ಹಾದಿಗೆ ಒತ್ತು ನೀಡಲಾಗಿದೆ. ಬಂಜಾರರ ಮೂಲ ಸಿಂಧೂ ನದಿಯ ಕಣಿವೆಯಲ್ಲಿದೆ ಎಂಬುದನ್ನು ಉಲ್ಲೇಖೀಸಲಾಗಿದೆ ಎಂದರು.

ಸಂಶೋಧಕರಾದ ಬಿ. ರಾಜಶೇಖರಪ್ಪ ಮಾತನಾಡಿ, ಸಾಹಿತಿ ಕೆ. ಮಂಜುನಾಥ್‌ ನಾಯಕ್‌ ಅವರ ಕೃತಿ ಓದುಗರನ್ನು ಉತ್ತಮ ರೀತಿಯಲ್ಲಿ ಓದಿಸಿಕೊಂಡು ಹೋಗುತ್ತದೆ. ಅಪರೂಪದ ಹಿನ್ನೆಲೆಯಲ್ಲಿ ಈ ಸಮುದಾಯವನ್ನು ಚಿತ್ರಣದ ಮೂಲಕ ವಿಶೇಷವಾಗಿ ಕಟ್ಟಿಕೊಡುವಲ್ಲಿ ಸಫಲರಾಗಿದ್ದಾರೆ ಎಂದು ಹೇಳಿದರು.

Advertisement

ಸೇವಾಲಾಲ್‌, ಭೀಮಾನಾಯಕ್‌ ಸಮುದಾಯದ ಸಾಂಸ್ಕೃತಿಕ ವೀರರಾಗಿದ್ದಾರೆ. ಇವರ ದೇವರ ಆರಾಧನೆಯೂ ವಿಶಿಷ್ಟವಾಗಿದೆ. ಪ್ರಾಚೀನ ಸಾಂಸ್ಕೃತಿಕ ಹಿನ್ನೆಲೆಯುಳ್ಳ ಜನಾಂಗ ಬಂಜಾರಾ. ಬಂಜಾರಾದ ಸಂಸ್ಕೃತಿಯು ಕೃತಿಯಲ್ಲಿ ಅಡಕವಾಗಿದೆ. ಉತ್ತರ ಮತ್ತು ದಕ್ಷಿಣ ಭಾರತದಲ್ಲಿ ಗೋ ಸಂರಕ್ಷಣೆ ಮಾಡುತ್ತಾ ಕಷ್ಟ ಪಟ್ಟು ವೃತ್ತಿ ಜೀವನ ಸಾಗಿಸುವ ಕುರಿತು ಕೃತಿಯಲ್ಲಿ ದಾಖಲಿಸಿದ್ದಾರೆ. ನಿಜಕ್ಕೂ ವಿಶೇಷ ಸಂಶೋಧನಾ ಕೃತಿ ಎಂದು ಬಣ್ಣಿಸಿದರು.

ಕೃತಿಕಾರ ಸಾಹಿತಿ ಕೆ. ಮಂಜುನಾಥ್‌ ನಾಯಕ್‌ ಮಾತನಾಡಿ, ಬಂಜಾರಾ ಜನಾಂಗದ ಸ್ಥಿತಿಗತಿ, ಸಂಸ್ಕಾರ, ಸಂಸ್ಕೃತಿ ಹಾಗೂ ಅವರ ವಿಭಿನ್ನ ನೆಲೆಯನ್ನು ಕುರಿತು ಹಿರಿಯರಿಂದ ಮಾಹಿತಿ ಪಡೆದು ಬಹಳಷ್ಟು ಶ್ರಮವಹಿಸಿ ಸಂಶೋಧನಾ ಗ್ರಂಥ ಹೊರತರಲಾಗಿದೆ ಎಂದು ಹೇಳಿದರು.

ಚಳ್ಳಕೆರೆಯ ಮಕ್ಕಳ ತಜ್ಞ ಡಾ| ಚಂದ್ರನಾಯ್ಕ ಮಾತನಾಡಿ, ಬಂಜಾರಾ ಜನಾಂಗಕ್ಕೆ ಲಿಪಿ ಇಲ್ಲ. ಹಾಗಾಗಿ ಸ್ವತಃ ನಾವೇ ಜನಾಂಗದ ಪರಂಪರೆ, ಇತಿಹಾಸ, ಹಿನ್ನೆಲೆ, ಸಂಸ್ಕೃತಿಯ ಕುರಿತು ದಾಖಲಿಸುವ ಅಗತ್ಯವಿದೆ. ಪುರಾತನ ಪರಂಪರೆ ಹೊಂದಿರುವ ಲಂಬಾಣಿ ಜನಾಂಗದ ವೈಶಿಷ್ಟತೆ ಕುರಿತು ಇನ್ನೂ ಅನೇಕ ಗ್ರಂಥಗಳು ಹೊರಬರಲಿ ಎಂದು ಆಶಿಸಿದರು.

ಕುರುಡಿಹಳ್ಳಿ ಶಿವಸಾಧು ಮಹಾರಾಜ್‌, ಬಂಜಾರಾ ಗುರುಪೀಠದ ನಂದಾಮಸಂದ್‌ ಸೇವಾಲಾಲ್‌ ಸ್ವಾಮೀಜಿ, ಬಂಜಾರಾ ಗುರುಪಿಠದ ಕಾರ್ಯಾಧ್ಯಕ್ಷ ಬಿ.ರಾಜಾನಾಯ್ಕ, ಇಂಗಳದಾಳ್‌ ಗ್ರಾಪಂ ಅಧ್ಯಕ್ಷ ಯು. ವೆಂಕಟೇಶ್‌ ನಾಯ್ಕ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next