Advertisement

ಸವಿದವರೇ ಬಲ್ಲರು ಬಂಗುಡೆ ಪುಳಿ ಮುಂಚಿ ರುಚಿಯ!

10:34 AM Mar 13, 2020 | Sriram |

ಮೀನು ಎಂದರೆ ಖಾದ್ಯಪ್ರಿಯರ ಬಾಯಲ್ಲಿ ನೀರೂರತ್ತದೆ. ಅದರಲ್ಲೂ ಸೀ ಫುಡ್ ಗಳನ್ನು ಇಷ್ಟಪಡುವವರು ವೈವಿಧ್ಯಮಯ ಮೀನುಗಳ ಸವಿಯನ್ನು ಸವಿಯಲು ಬಯಸುತ್ತಾರೆ. ನಮ್ಮ ಕರಾವಳಿ ಭಾಗದಲ್ಲಿ ಸಿಗುವ ವೈವಿಧ್ಯಮಯ ಮೀನಿನ ಖಾದ್ಯಗಳ ಪೈಕಿ ‘ಬಂಗುಡೆ ಪುಳಿಮುಂಚಿ’ಗೆ ಮತ್ಸ್ಯಪ್ರಿಯರ ಬಾಯಲ್ಲಿ ನೀರೂರಿಸುವ ಸಾಮರ್ಥ್ಯವಿದೆ. ಪುಳಿಮುಂಚಿ ತುಳುವಿನ ಶಬ್ದವಾಗಿದ್ದು ಇದಕ್ಕೆ ಕನ್ನಡದಲ್ಲಿ ‘ಹುಳಿ ಮತ್ತು ಮೆಣಸು’ ಎಂದು ಅರ್ಥವಿದೆ.

Advertisement

ಹುಣೆಸೆ ಹುಳಿ ಮತ್ತು ಒಣಮೆಣಸನ್ನು ಪ್ರಧಾನ ಸಾಮಾಗ್ರಿಗಳನ್ನಾಗಿ ಬಳಸಿಕೊಂಡು ಮಾಡುವ ಖಾದ್ಯಕ್ಕೆ ಪುಳಿಮುಂಚಿ ಎಂದು ಹೆಸರು.

ಹಾಗಾದರೆ ಬನ್ನಿ ಬಂಗುಡೆ ಪುಳಿಮುಂಚಿ ಮಾಡುವ ವಿಧಾನವನ್ನು ತಿಳಿದುಕೊಳ್ಳೋಣ

ಬೇಕಾಗುವ ಸಾಮಗ್ರಿಗಳು
ಬಂಗುಡೆ ಮೀನು 5ರಿಂದ 7, ಈರುಳ್ಳಿ 3 ,ಹಸಿ ಶುಂಠಿ ಸ್ವಲ್ಪ, ಹಸಿ ಮೆಣಸಿನ ಕಾಯಿ 5, ಟೊಮೆಟೊ 4, ತೆಂಗಿನ ಎಣ್ಣೆ 4 ಚಮಚ, ಕೊತ್ತಂಬರಿ ಸೊಪ್ಪು ಸ್ವಲ್ಪ, ಕರಿಬೇವು ,ಹುಣಸೆ ಹುಳಿ, ತೆಂಗಿನ ತುರಿ 1/4 ಕಪ್‌, ಒಣಮೆಣಸಿನ ಕಾಯಿ 12 ರಿಂದ 14 ,ಕೊತ್ತಂಬರಿ ಬೀಜ 1 ಚಮಚ, ಅರಿಶಿನ ಪುಡಿ 2 ಚಿಟಿಕೆ, ಬೆಳ್ಳುಳ್ಳಿ ಬೀಜ 5, ಜೀರಿಗೆ-ಮೆಂತೆ ಮಿಶ್ರಣ 1 ಚಮಚ, ರುಚಿಗೆ ತಕ್ಕಷ್ಟು ಉಪ್ಪು.

ತಯಾರಿಸುವ ವಿಧಾನ
ಮೀನುಗಳನ್ನು ಚೆನ್ನಾಗಿ ತೊಳೆದು ತುಂಡುಗಳನ್ನಾಗಿ ಮಾಡಿಕೊಳ್ಳಿ. ತೆಂಗಿನ ತುರಿ,ಒಣಮೆಣಸು,ಕೊತ್ತಂಬರಿ ಬೀಜ ಮತ್ತು ಅರಿಶಿನ ಪುಡಿ ಇವೆಲ್ಲವನ್ನು ಮಿಕ್ಸ್‌ ಗೆ ಹಾಕಿ ಸ್ವಲ್ಪ ನೀರು ಸೇರಿಸಿ ರುಬ್ಬಿರಿ.

Advertisement

ಮಸಾಲೆ ನುಣ್ಣಗಾಗುತ್ತಾ ಬರುವಾಗ ಈರುಳ್ಳಿ,ಬೆಳ್ಳುಳ್ಳಿ ಮತ್ತು ಜೀರಿಗೆ-ಮೆಂತೆ ಮಿಶ್ರಣ ಇವುಗಳನ್ನು ಸೇರಿಸಿ ರುಬ್ಬಿರಿ.ಮಸಾಲೆ ನುಣ್ಣಗಾದ ಮೇಲೆ ಒಂದು ಪಾತ್ರೆಗೆ ಹಾಕಿರಿ.ನಂತರ ಹುಣಸೆ ಹುಳಿಯನ್ನು ಸ್ವಲ್ಪ ನೀರಲ್ಲಿ ನೆನೆಹಾಕಿರಿ. ಸ್ವಲ್ಪ ಹೊತ್ತಿನ ನಂತರ ಹಿಚಿಕಿ ದಪ್ಪ ರಸ ತೆಗೆಯಿರಿ.

ತದನಂತರ ಒಂದು ಹದ ಗಾತ್ರದ ಪಾತ್ರೆಗೆ ತೆಂಗಿನ ಎಣ್ಣೆ ಹಾಕಿ ಕಾದ ನಂತರ ಹೆಚ್ಚಿದ ಈರುಳ್ಳಿಯನ್ನು ಹಾಕಿ ಸ್ವಲ್ಪ ಹುರಿಯಿರಿ. ಹಸಿಮೆಣಸಿನ ಕಾಯಿ,ಹಸಿ ಶುಂಠಿ ಮತ್ತು ಕರಿಬೇವನ್ನು ಹಾಕಿ ಹುರಿಯಿರಿ.ಈರುಳ್ಳಿ ಕಂದು ಬಣ್ಣ ಬರುವ ತನಕ ಹುರಿದು ಅದಕ್ಕೆ ರುಬ್ಬಿಟ್ಟ ಮಸಾಲೆಯನ್ನು ಸೇರಿಸಿ,ಮಂದ ಉರಿಯ ಮೇಲೆ 10 ನಿಮಿಷಗಳ ಕಾಲ ಕಾಯಲು ಬಿಡಿ.

ನಂತರ ಸ್ವಲ್ಪ ನೀರು ಹಾಕಿ,ರುಚಿಗೆ ಉಪ್ಪು,ಹುಳಿ ರಸ ಮತ್ತು ಟೊಮೆಟೊ ಸೇರಿಸಿ ಮಗುಚಿರಿ.ಮಂದ ಉರಿಯ ಮೇಲೆ ಮಸಾಲೆ ಕುದಿಯುತ್ತ ಚೆನ್ನಾಗಿ ದಪ್ಪಗಾದ ಕೂಡಲೇ ,ತೊಳೆದಿಟ್ಟ ಮೀನಿನ ತುಂಡುಗಳನ್ನು ಸೇರಿಸಿರಿ.

ಮಸಾಲೆಯಲ್ಲಿ ಮೀನಿನ ತುಂಡುಗಳನ್ನು ಚೆನ್ನಾಗಿ ಬೆರಸಿರಿ.ಮೀನಿನ ತುಂಡುಗಳ ಮೇಲೆ ಮಸಾಲೆಯು ಗಟ್ಟಿಯಾಗಿ ಕೂರಬೇಕು.ರುಚಿ ನೋಡಿ ಬೇಕಿದ್ದರೆ ಉಪ್ಪು ಅಥವಾ ಹುಳಿ ಸೇರಿಸಿ,ಸಣ್ಣ ಉರಿಯ ಮೇಲೆ ಒಂದೆರಡು ಕುದಿ ಬರಿಸಿ ಮೀನಿನ ತುಂಡುಗಳು ಬೆಂದ ಮೇಲೆ ಪಾತ್ರೆ ಕೆಳಗಿಳಿಸಿರಿ.ಕೊತ್ತಂಬರಿ ಸೊಪ್ಪು ಹಾಕಿರಿ,ಬಿಸಿ-ಬಿಸಿಯಾದ ಬಂಗುಡೆ ಮೀನಿನ ಪುಳಿ ಮುಂಚಿ ಸವಿಯಲು ಸಿದ್ದವಾಗಿದೆ.

ಮುಂಚಿನ ದಿನವೇ ಈ ಪುಳಿ ಮುಂಚಿ ಮಾಡಿಟ್ಟು ಮರುದಿನ ಊಟಕ್ಕೆ ಬಳಸಬಹುದು. ಯಾಕೆಂದರೆ ಮೀನಿನ ತುಂಡುಗಳು ಉಪ್ಪು,ಹುಳಿ,ಖಾರವನ್ನು ಚೆನ್ನಾಗಿ ಸೆಳೆದುಕೊಳ್ಳುವುದರಿಂದ ಮರುದಿನ ಪುಳಿ ಮುಂಚಿ ಹೆಚ್ಚು ರುಚಿಯಾಗುವುದು.

Advertisement

Udayavani is now on Telegram. Click here to join our channel and stay updated with the latest news.

Next