Advertisement
ಅಮ್ಮ ತನ್ನ ಪಾಡಿಗೆ ತಾನು ಯಾವುದೋ ಹಾಡನ್ನು ಗುನುಗುತ್ತಾ, ಅಡುಗೆ ಮನೆಯಲ್ಲಿದ್ದಾಗ ಆಕೆಯ ಹಾಡಿಗೆ ಸಾಥ್ ಕೊಡುವುದು ಬಳೆಯ ಸದ್ದು. ಆಕೆ ಗಡಿಬಿಡಿಯಲ್ಲಿ ಕೆಲಸ ಮಾಡುತ್ತಿರುವಾಗ, ಕೈ ತುಂಬಾ ನಲಿಯುವ ಗಾಜಿನ ಬಳೆಗಳು ಕಿಣಕಿಣ ಸದ್ದು ಮಾಡೋದನ್ನು ಕೇಳ್ಳೋಕೇ ಚಂದ. ಬಳೆಯ ಸದ್ದಿನಿಂದಲೇ ಅಮ್ಮ ಎಲ್ಲಿದ್ದಾಳೆ, ಯಾವ ಕೆಲಸ ಮಾಡುತ್ತಿದ್ದಾಳೆ ಅಂತ ಹೇಳಿ ಬಿಡಬಹುದು.
Related Articles
ಹಿಂದೆಲ್ಲಾ, ಕೈಗೆ ಬಳೆ ಇಡಿಸಿಕೊಳ್ಳುವುದು ಒಂದು ಸಂಭ್ರಮದ ವಿಚಾರವಾಗಿತ್ತು. ಮನೆಯಲ್ಲಿ ಎಷ್ಟೇ ಕಡುಬಡತನವಿದ್ದರೂ ಹೆಣ್ಣುಮಕ್ಕಳ ಕೈಯಲ್ಲಿ ಸದಾ ಗಾಜಿನ ಬಳೆಗಳು ರಾರಾಜಿಸುತ್ತಿದ್ದವು. ಈಗಿನಂತೆ, ಬೆಳಗ್ಗೆ ಬಳೆ ಧರಿಸಿ, ಸಂಜೆ ಅದನ್ನು ತೆಗೆದಿಡುವ ಪದ್ಧತಿಯಿರಲಿಲ್ಲ. ಒಂದು ಬಾರಿ ಕೈಗೆ ಬಳೆ ಇಡಿಸಿಕೊಂಡರೆ, ಅದು ಒಡೆಯುವವರೆಗೂ ಕೈಯಲ್ಲೇ ಇರುತ್ತಿತ್ತು. ಊರಿನ ಸಂತೆಯಲ್ಲಿ, ವರ್ಷಕ್ಕೊಮ್ಮೆ ನಡೆಯುವ ಜಾತ್ರೆಯಲ್ಲಿ ಇರುತ್ತಿದ್ದ ಬಳೆಗಾರ/ ಬಳೆಗಾರ್ತಿಯ ಸುತ್ತ ಹೆಂಗಳೆಯರ ಗುಂಪುಗಟ್ಟಿರುತ್ತಿದ್ದರು. ಎಲ್ಲರಿಗೂ, ಹಸಿರು, ಕೆಂಪು ಬಳೆಗಳಿಂದ ಕೈ ಅಲಂಕರಿಸಿಕೊಳ್ಳುವ ತವಕ. ಸರದಿಯಲ್ಲಿ ಕಾದು, ಅವನಿಗೆ ಕೈ ನೀಡಿ, ನೋವಾಗದಂತೆ ಬಳೆ ಇಡಿಸಿಕೊಳ್ಳುವುದೇ ಹೆಣ್ಮಕ್ಕಳ ಪಾಲಿಗೆ ಜಾತ್ರೆಗಿಂತಲೂ ದೊಡ್ಡ ಸಂಭ್ರಮ.
Advertisement
ಇನ್ನು, ಮನೆಮನೆಗೆ ಬರುವ ಬಳೆಗಾರರು ಕೇವಲ ಬಳೆ ಮಾರುವವರಷ್ಟೇ ಆಗಿರಲಿಲ್ಲ, ಊರೂರಿನ ನಡುವೆ ಸಂಬಂಧ ಬೆಳೆಸುವ ವಕ್ತಾರರೂ ಆಗಿದ್ದರು. ಬಳೆಗಾರ ತಾನು ಊರೊಳಗಡೆ ಬರುವುದನ್ನು ಹೆಂಗಳೆಯರು ಗುರುತಿಸಲೆಂದು, “ಬಳೆ ಬೇಕವ್ವಾ ಬಳೆ, ಅಂದಚೆಂದದ ಬಳೆ, ಬಳೆ ಬೇಕವ್ವಾ ಬಳೆ’ ಎಂದು ಹೆಗಲಿಗೆ ಬಳೆಗಳ ಗೊಂಚಲನ್ನು ನೇತು ಹಾಕಿಕೊಂಡು ಬರುತ್ತಿದ್ದ. ಮಾಡುತ್ತಿದ್ದ ಕೆಲಸವನ್ನೆಲ್ಲ ಅರ್ಧಕ್ಕೇ ಬಿಟ್ಟು, ಹೆಂಗಳೆಯರು ಬಳೆ ಕೊಳ್ಳಲು ಓಡುತ್ತಿದ್ದರು. ಆತನ ಕೂಗು ಕೇಳಿಸುತ್ತಿದ್ದಂತೆಯೇ ಮನೆಯ ಅಂಗಳದಲ್ಲಿ ಚಾಪೆ ಹಾಸಿ, ಪಕ್ಕದಲ್ಲಿ ಕುಡಿಯಲು ಬಿಂದಿಗೆ ನೀರಿಟ್ಟು, ಬೀದಿಯ ಹೆಂಗಸರೆಲ್ಲಾ ಕೂಡುತ್ತಿದ್ದರು. ಬಳೆ ತೊಡಿಸಿ ಕೊಳ್ಳುವವರೆಗೆ ಎಲ್ಲಾ ಸೇರಿ, “ಭಾಗ್ಯದ ಬಳೆಗಾರ ಹೋಗಿ ಬಾ ನನ್ನ ತವರಿಗೆ’ ಎಂದು ಹಾಡು ಹೇಳುತ್ತಾ, ಬಳೆಗಾರನಿಂದ ಯಕ್ಕಾ-ತಂಗಿ, ಯವ್ವಾ-ಮಗಳ! ಎಂದು ಹೇಳಿಸಿಕೊಂಡು ಖುಷಿ ಪಡುತ್ತಿದ್ದರು. ಅಂಚೆ, ದೂರವಾಣಿಗಳ ಕಾಲಕ್ಕಿಂತಲೂ ಮೊದಲು, ತವರೂರಿನ ಸಮಾಚಾರವನ್ನು ಬಿತ್ತರಿಸುವವನೂ ಬಳೆಗಾರನೇ ಆಗಿದ್ದ.
ಬದಲಾದ ಬಳೆಗಳುಕಾಲ ಕಳೆದಂತೆ ಬಳೆಯ ವಿನ್ಯಾಸ, ಸ್ವರೂಪ ಬದಲಾಯಿತು. ಗಾಜಿನ ಬಳೆಗಳ ಬದಲು, ವಿವಿಧ ಲೋಹಗಳ ಬಳೆಗಳು ಮಾರುಕಟ್ಟೆಗೆ ಬಂದವು. ಕೈ ತುಂಬಾ ಗಾಜಿನ ಬಳೆ ಧರಿಸುವ ಸಂಪ್ರದಾಯ ಮರೆಯಾಗಿ, ಬ್ರೇಸ್‌ಲೆಟ್‌ನ ಟ್ರೆಂಡ್ ಶುರುವಾಯಿತು. ಮಣಿ, ಪಂಚಲೋಹ, ಬಂಗಾರ, ಬೆಳ್ಳಿ, ಪಚ್ಚೆ, ತಾಮ್ರ, ಗಾಜು, ಲೆದರ್, ದಂತ, ಮರ ಹೀಗೆ ಅನೇಕ ವಸ್ತುಗಳಿಂದ ತಯಾರಿಸಲ್ಪಟ್ಟ ಆಕರ್ಷಕ ಬಳೆ ಮತ್ತು ಬ್ರೇಸ್‌ಲೆಟ್‌ಗಳು ತರುಣಿಯರ ಮನ ಸೆಳೆದವು. ಕಿಣಿಕಿಣಿ ಕಿರಿಕಿರಿ
ಗಾಜಿನ ಬಳೆ ಧರಿಸಿ ಕೆಲಸ ಮಾಡೋಕಾಗುತ್ತಾ? ಅದರ ಕಿಣಿ ಕಿಣಿ ಸದ್ದಿನಿಂದ ಆಫೀಸಲ್ಲಿ ಎಲ್ಲರಿಗೂ ಡಿಸ್ಟರ್ಬ್ ಆಗುತ್ತೆ, ಗಾಜು ಒಡೆದು, ಕೈಗೆ ಗಾಯವಾಗಬಹುದು… ಎಂಬಿತ್ಯಾದಿ ಕಾರಣಗಳಿಂದ ಇಂದಿನ ಯುವತಿಯರು ಫ್ಯಾನ್ಸಿ ಬಳೆಗಳಿಗೆ ಜೈ ಅಂದಿದ್ದಾರೆ. ಕೆಲಸಕ್ಕೆ, ಕಾಲೇಜಿಗೆ ಹೋಗುವಾಗ ಒಂದು ಕೈಗೆ ವಾಚ್ ಹಾಗೂ ಇನ್ನೊಂದು ಕೈಗೆ ದಪ್ಪನೆಯ ಬಳೆ ಅಥವಾ ಬ್ರೇಸ್‌ಲೆಟ್ ಸಾಕು. ಗಾಜಿನ ಬಳೆ ಏನಿದ್ದರೂ, ಹಬ್ಬ ಹರಿದಿನಗಳಲ್ಲಿ, ಮದುವೆ ಇನ್ನಿತರ ಸಮಾರಂಭಗಳಲ್ಲಿ ಧರಿಸುವುದಕ್ಕೆ ಸರಿ ಅನ್ನೋದು ಅವರ ಅಭಿಪ್ರಾಯ. ಹಲವು ನಂಬಿಕೆಗಳು
ಸ್ತ್ರೀ ಕುಲದ ಶುಭ ಸಂಕೇತಗಳಾದ ಬಳೆಗಳನ್ನು ಲಕ್ಷ್ಮೀ ದೇವಿಯ ಸ್ವರೂಪವೆಂದು ಕರೆಯುತ್ತಾರೆ. ಬಳೆಯ ಸದ್ದಿನಿಂದ ಮನೆಯಲ್ಲಿನ ನಕಾರಾತ್ಮಕತೆ ದೂರಾಗಿ, ಸಕಾರಾತ್ಮಕ ಶಕ್ತಿ ತುಂಬಿಕೊಳ್ಳುತ್ತದಂತೆ. ಕೆಂಪು ಬಳೆ ಶಕ್ತಿಯ ಸಂಕೇತವಾದರೆ, ಹಸಿರು ಬಳೆ ಯಶಸ್ಸು ಮತ್ತು ಸಮೃದ್ಧಿಯ ಬಿಂಬಗಳಾಗಿವೆ. ನೀಲಿ ಬಳೆ ಬುದ್ಧಿವಂತಿಕೆ, ಹಳದಿ ಸಂತೋಷವನ್ನು ಮತ್ತು ಬಿಳಿ ಹೊಸ ಪರ್ವವನ್ನು ಸೂಚಿಸುತ್ತದೆ. ವಿಶ್ವ ಮೆಚ್ಚಿದ ಬಳೆ
ಬಳೆಯನ್ನು ಕೇವಲ ಭಾರತದಲ್ಲಿ ಮಾತ್ರವಲ್ಲದೆ, ನೆರೆಯ ರಾಷ್ಟ್ರಗಳಾದ ಪಾಕಿಸ್ತಾನ, ಬಾಂಗ್ಲಾ ದೇಶಗಳ ಮಹಿಳೆಯರೂ ಧರಿಸುತ್ತಾರೆ. ಬೇರೆ ಬೇರೆ ಪ್ರದೇಶಗಳ ಬಳೆಯ ಬಣ್ಣ, ವಿನ್ಯಾಸ, ಆಕಾರ, ಸಂಪ್ರದಾಯದಲ್ಲಿ ಭಿನ್ನತೆ ಇದೆ. ಪಂಜಾಬ್‌ನಲ್ಲಿ ಸಿಖ್ ಮಹಿಳೆಯರು ಕೆಂಪು ಬಣ್ಣದ ಪ್ಲಾಸ್ಟಿಕ್ ಹಾಗೂ ದಂತದ ಬಳೆಗಳನ್ನು ಧರಿಸುತ್ತಾರೆ. ರಾಜಸ್ಥಾನದಲ್ಲಿ, ಕೆಂಪು ಮತ್ತು ಹಸಿರು ಬಳೆಗಳನ್ನು ಮದುವೆ ಸಮಾರಂಭದಲ್ಲಿ ತೊಡುತ್ತಾರೆ. ಪತಿಯ ಶ್ರೇಯಸ್ಸಿಗೆ ತಮ್ಮ ಜೀವನದ ಕೊನೆಯವರೆಗೂ ದಂತದ ಬಳೆಗಳನ್ನು ಹಾಕಿಕೊಳ್ಳುವುದು ಅಲ್ಲಿನ ವಾಡಿಕೆ. ಬಳೆ, ಮುತ್ತೈದೆತನದ ಸಂಕೇತ ಎನ್ನುವುದು ಎಲ್ಲೆಡೆ ಇರುವ ನಂಬಿಕೆ. – ಮಹಾನಂದಾ ಚಿಕ್ಕೋಡಿ