ನಂಜನಗೂಡು: ಸ್ಥಳೀಯರಿಗಿಲ್ಲದ ಮೂಲ ಭೂತ ಸೌಲಭ್ಯಗಳಾದ ಆಧಾರ್, ಪಡಿತರ ಚೀಟಿ, ಭಾಗ್ಯಲಕ್ಷ್ಮೀ ಬಾಂಡ್ ಸಹ ಬಾಂಗ್ಲಾದ ವಲಸಿಗರಿಗೆ ಸುಲಭವಾಗಿ ಸಿಗುತ್ತದೆ ಎಂಬ ವಿಷಯ ತಾಲೂಕು ಪಂಚಾಯಿತಿಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮತ್ತೆ ಮಾರ್ಧನಿಸಿತು.
ತಾಪಂ ಆವರಣದಲ್ಲಿ ನಡೆದ ಸಭೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಶಿವಣ್ಣ ವಿಷಯ ಪ್ರಾಸ್ತಾಪಿಸಿ 4 ಸಭೆಗಳಿಂದ ಕೇಳುತ್ತಿದ್ದೇನೆ. ಸ್ಥಳೀಯರಿಗೆ ಸುಲಭವಾಗಿ ಸಿಗದ ಮತದಾನದ ಹಕ್ಕು, ಪಡಿತರ ಚೀಟಿ, ಆಧಾರ ವಲಸಿಗರಿಗೆ ಸಿಕ್ಕಿದ್ದು ಹೇಗೆ? ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಎಷ್ಟು ಜನ ವಲಸಿಗರಿಗೆ ಮೂಲಭೂತ ಸೌಲಭ್ಯಗಳನ್ನು ಅಕ್ರಮವಾಗಿ ನೀಡಲಾಗಿದೆ ಎಂದು ಪ್ರಶ್ನಿಸಿದ್ದಕ್ಕೆ ಉತ್ತರಿಸಲು ಅಧಿಕಾರಿಗಳು ತಡಬಡಾಯಿಸಿದರು.
ಸೌಲಭ್ಯಗಳನ್ನು ದಾಖಲೆ ಇಲ್ಲದೆ ನೀಡಲಾಗುವುದಿಲ್ಲ ಎಂಬ ಆಹಾರ ಇಲಾಖೆ ಅಧಿಕಾರಿ ರಾಜೇಂದ್ರ ಪ್ರಸಾದ್ ಹಾಗೂ ಮಂಜುನಾಥ ಅವರನ್ನು ಗ್ರೇಡ್ 2 ತಹಶೀಲ್ದಾರ್ ಚಿಗರಿ ಬೆಂಬಲಿಸಿದರು. ಆಗ ಮಧ್ಯ ಪ್ರವೇಶಿಸಿದ ತಾಪಂ ಸದಸ್ಯ ಸಿದ್ದರಾಜೇಗೌಡ ಹಾಗೂ ಅಧ್ಯಕ್ಷ ಮಹದೇವಪ್ಪ ತಾಲೂಕು ಕಚೇರಿಯಲ್ಲಿ ಹಣ ನೀಡಿದರೆ ಏನು ಬೇಕಾದರೂ ಸಿಗುತ್ತದೆ ಎಂದು ಕಂದಾಯ ಇಲಾಖೆಯನ್ನು ತೀವ್ರವಾಗಿ ಟೀಕಿಸಿದರು.
ಇಲ್ಲಿನ ಕೈಗಾರಿಕಾ ವಲಯದ ಪಾದರಕ್ಷೆ, ಪ್ಲೆ„ ಉಡ್, ಹಾಗೂ ಗ್ರಾನೆಟ್ ಕಾರ್ಖಾನೆಗಳಲ್ಲಿ ಸಹಸ್ರಾರು ಬಾಂಗ್ಲಾ ದೇಶಿಯರು ಅಕ್ರಮವಾಗಿ ವಾಸವಾಗಿದ್ದಾರೆ ಎಂದ ಶಿವಣ್ಣ, ತುರ್ತಾಗಿ ಪೊಲೀಸ್ ಹಾಗೂ ಕಂದಾಯ ಅಧಿಕಾರಿಗಳ ನೇತೃತ್ವದ ಸಮಿತಿ ರಚಿಸಿ, ಕೆಲಸಗಾರರ ಮೂಲ ಪತ್ತೆ ಹಚ್ಚಿ ಅವರಿಗೆ ನೀಡಿರುವ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ರದ್ದು ಗೊಳಿಸಿ ಎಂದರು.
ನಮ್ಮಲ್ಲಿ ವಾಸವಿಲ್ಲ ಎಂದು ಪಿಡಿಒ ಶರಾ ಬರೆದರೆ, ತಾಲೂಕು ಮಟ್ಟದ ಅಧಿಕಾರಿಗಳು ಅಲ್ಲೆ ಅವರು ವಾಸವಿದ್ದಾರೆ ಎಂದು ದೃಢೀಕರಣ ಪತ್ರ ನೀಡುತ್ತಾರೆ. ಇದು ಹೇಗೆ ಸಾಧ್ಯ ಎಂದ ಅಧ್ಯಕ್ಷ ಮಹದೇವಪ್ಪ ಹಾಗೂ ಸದಸ್ಯ ಸಿದ್ದರಾಜೇಗೌಡ, ಇಲಾಖೆಯ ಕಾರ್ಯವೈಖರಿ ಕುರಿತು ಆಕ್ರೋಶ ವ್ಯಕ್ತ ಪಡಿಸಿದರು.
ಕಾನೂನು ಕ್ರಮಕ್ಕೆ ಅವಕಾಶವಿಲ್ಲ: ಹುಣಸನಾಳು ಗ್ರಾಮದಲ್ಲಿ ಅಂಗನವಾಡಿ ಸಹಾಯಕಿ ಆಹಾರ ಸಾಮಗ್ರಿಗಳನ್ನು ಅಕ್ರಮವಾಗಿ ಸಾಗಿಸುತ್ತಿರುವುದನ್ನು ಪತ್ತೆ ಹಚ್ಚಿದ್ದು, ಏನು ಕ್ರಮ ಕೈಗೊಳ್ಳಲಾಗಿದೆ ಎಂದು ಅಧ್ಯಕ್ಷರ ಪ್ರಶ್ನೆಗೆ ಉತ್ತರಿಸಿದ ಸಿಡಿಪಿಒ ಇಲಾಖೆ ಅಧಿಕಾರಿ ಸರೋಜಮ್ಮ, ಅವರಿಗೆ ನೋಟಿಸ್ ನೀಡಲಾಗಿದೆ. ಅವರ ಮೇಲೆ ಕಾನೂನು ಕ್ರಮಕ್ಕೆ ಅವಕಾಶವಿಲ್ಲ ಎಂದು ಜಾರಿಕೆಯ ಉತ್ತರ ನೀಡಿದರು. ಇದನ್ನು ಒಪ್ಪದ ತಾಪಂ ಇಒ ಅಧಿಕಾರಿ ರೇವಣ್ಣ ಕಾನೂನಿನಲ್ಲಿ ಅವಕಾಶವಿದೆ ಕ್ರಮ ಕೈಗೊಳ್ಳಿ ಎಂದರು.