ಢಾಕಾ: ಕೋವಿಡ್ ಸೋಂಕಿಗೆ ತುತ್ತಾಗಿದ್ದ ಬಾಂಗ್ಲಾ ದೇಶದ ರಕ್ಷಣಾ ಕಾರ್ಯದರ್ಶಿ ಅಬ್ದುಲ್ಲಾ ಅಲ್ ಮೊಹ್ಸಿನ್ ಚೌಧರಿ ಸೋಮವಾರ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.
ಚೌಧರಿ ಢಾಕಾದ ಸಂಯೋಜಿತ ಮಿಲಿಟರಿ ಆಸ್ಪತ್ರೆ (ಸಿಎಂಎಚ್) ಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ ಮೃತಪಟ್ಟರು ಎಂದು ರಕ್ಷಣಾ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಸೆಲೀನಾ ಹಕ್ ಹೇಳಿದ್ದಾರೆ.
ಕೋವಿಡ್ ಪಾಸಿಟಿವ್ ಬಂದ ಬಳಿಕ ಅವರನ್ನು ಮೇ 29ರಂದು ಸಿಎಂಎಚ್‌ಗೆ ದಾಖಲಿಸಲಾಗಿತ್ತು. ಆರೋಗ್ಯ ಸ್ಥಿತಿ ಹದೆಗೆಟ್ಟ ಹಿನ್ನೆಲೆ ಜೂನ್ 6ರಂದು ಅವರನ್ನು ತೀವ್ರ ನಿಗಾ ಘಟಕಕ್ಕೆ ದಾಖಲಿಸಲಾಯಿತು. ಜೂನ್ 18ರಂದು ವೆಂಟಿಲೇಟರ್ ಅಳವಡಿಸಲಾಯಿತು ಎಂದು ಕಾರ್ಯದರ್ಶಿಯ ಆಡಳಿತಾಧಿಕಾರಿ ಭಸಾನಿ ಮಿರ್ಜಾ ತಿಳಿಸಿದ್ದಾರೆ.
ರಕ್ಷಣಾ ಕಾರ್ಯದರ್ಶಿಯಾಗಿ ನಿಯೋಜನೆ
ಚೌಧರಿ 2020ರ ಜನವರಿಯಲ್ಲಿ ರಕ್ಷಣಾ ಕಾರ್ಯದರ್ಶಿಯಾಗಿ ನಿಯೋಜನೆಗೊಂಡಿದ್ದರು. ಜೂನ್ 14 ರಂದು ಸರಕಾರ ಅವರಿಗೆ ರಕ್ಷಣಾ ಸಚಿವಾಲಯದ ಹಿರಿಯ ಕಾರ್ಯದರ್ಶಿ ಹುದ್ದೆಗೆ ಭಡ್ತಿ ನೀಡಿತ್ತು.
ಸೋಮವಾರ ಬೆಳಗ್ಗೆಯವರೆಗೆ ಬಾಂಗ್ಲಾ ದೇಶದಲ್ಲಿ ಒಟ್ಟು 1,37,787 ಕೋವಿಡ್ ಪ್ರಕರಣಗಳು ದಾಖಲಾಗಿದೆ, 1,738 ಸಾವು ಸಂಭವಿಸಿವೆ.