Advertisement

ಬಂಗಾರು ತಿರುಪತಿ ದೇಗುಲಕ್ಕೆ ಬೇಕು ಕಾಯಕಲ್ಪ

12:37 PM Apr 25, 2019 | Suhan S |

● ಆರ್‌.ಪುರುಷೋತ್ತಮ್‌ರೆಡ್ಡಿ

Advertisement

ಬೇತಮಂಗಲ: ಹೋಬಳಿ ವ್ಯಾಪ್ತಿಯ ಬಂಗಾರು ತಿರುಪತಿ ಗುಟ್ಟಹಳ್ಳಿಯ ಏಕಾಂತ ಶ್ರೀನಿವಾಸ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣ. ತಮಿಳುನಾಡು, ಆಂಧ್ರದಿಂದ ಪ್ರವಾಸಿಗರು ಬರುತ್ತಾರೆ. ಆದರೆ, ಜಿಲ್ಲಾಡಳಿತ ಮತ್ತು ಮುಜರಾಯಿ ಇಲಾಖೆ ಮೂಲ ಸೌಕರ್ಯ ಒದಗಿಸುವಲ್ಲಿ ವಿಫ‌ಲವಾಗಿದೆ.

ತಿರುಮಲಕ್ಕೆ ಹೋಗಿ ದರ್ಶನ ಮಾಡಲು ಸಾಧ್ಯವಾಗದವರು ಬೇತಮಂಗಲದಿಂದ 3 ಕಿ.ಮೀ. ಇರುವ ಈ ಬಂಗಾರು ತಿರುಪತಿ ದೇವಸ್ಥಾನಕ್ಕೆ ಬರುತ್ತಾರೆ. 300 ಎಕರೆಯಲ್ಲಿರುವ ದೇವಾಲಯದಲ್ಲಿ ಏಕಾಂತ ಶ್ರೀನಿವಾಸಸ್ವಾಮಿ ನೆಲೆಸಿದ್ದು, ಮತ್ತೂಂದು ಬೆಟ್ಟದಲ್ಲಿ ಅಲುವೇಲು ಮಂಗಮ್ಮ ದೇವಾಲಯವಿದೆ. ಮೊದಲು ಶ್ರೀನಿವಾಸನ ದರ್ಶನ ಪಡೆದು ನಂತರ ಅಲುವೇಲು ಮಂಗಮ್ಮನ ದರ್ಶನ ಪಡೆಯುತ್ತಾರೆ. ಬೆಟ್ಟದ ತಪ್ಪಲಲ್ಲಿ ಗರುಡ ಹಾವನ್ನು ಹೊತ್ತಿರುವ ಪ್ರತಿಮೆ ಪ್ರವಾಸಿಗರನ್ನು ಅಕರ್ಷಿಸುತ್ತದೆ.

ದೇವಾಲಯದ ಇತಿಹಾಸ: ದೇಶದ 108 ವೆಂಕಟೇಶ್ವರ ದೇಗುಲಗಳಲ್ಲಿ ಬಂಗಾರು ತಿರುಪತಿ ಗುಟ್ಟಹಳ್ಳಿ ದೇವಾಲಯವೂ ಒಂದು. ಚಿನ್ನದ ಗಣಿ ಪ್ರದೇಶದಲ್ಲಿ ಉದ್ಭವಗೊಂಡಿರುವುದರಿಂದ ಬಂಗಾರು ತಿರುಪತಿ ಎಂದು ಹೆಸರು ಬಂದಿದೆ. ಗುಟ್ಟಹಳ್ಳಿಯಲ್ಲಿ ಬೃಗಮಹರ್ಷಿ ಮುನಿಗಳು ತಪಸ್ಸು ಮಾಡಿದ ಸ್ಥಳವೂ ಹೌದು. ಮುನಿಗಳ ತಪ್ಪಸ್ಸಿನ ಶಕ್ತಿಯಿಂದ ಮಹರ್ಷಿ ಪಾದದಲ್ಲಿ ಜ್ಞಾನಮಯ ಕಣ್ಣು ಉದ್ಭಗೊಂಡು ನಂತರ ಮೂರನೇ ಕಣ್ಣಿನಿಂದ ಏಕಾಂತ ಶ್ರೀನಿವಾಸ್‌ನ ದರ್ಶನ ಮಾಡುತ್ತಿದ್ದರು. ಈಗಲೂ ಭಕ್ತರು ಕಿಟಕಿ ಮೂಲಕ ದರ್ಶನ ಮಾಡುತ್ತಾರೆ. ಇದಕ್ಕಾಗಿ ಆರು ಕಿಟಕಿ(ಕಿಂಡಿ)ಗಳನ್ನು ಅಳವಡಿಸಲಾಗಿದೆ.

ತೂಗು ಸೇತುವೆ ಬೇಕಿದೆ: ಏಕಾಂತ ಶ್ರೀನಿವಾಸನ ಬೆಟ್ಟದಿಂದ ಪದ್ಮಾವತಿ ಅಮ್ಮನ ದರ್ಶನ ಪಡೆಯಬೇಕಾದರೆ ಭಕ್ತರು 500ಕ್ಕೂ ಹೆಚ್ಚು ಮೆಟ್ಟಿಲು ಹತ್ತಬೇಕಿದೆ. ಹಿರಿಯ ನಾಗರಿಕರು ಮೆಟ್ಟಿಲು ಹತ್ತಲು ಬಹಳ ಕಷ್ಟಪಡುತ್ತಾರೆ. ಹೀಗಾಗಿ ಎರಡು ದೇಗುಲಗಳಿಗೆ ತೂಗು ಸೇತುವೆ ನಿರ್ಮಾಣ ಮಾಡಿದರೆ ಅನುಕೂಲವಾಗುತ್ತದೆ ಎಂದು ದೇಗುಲ ಸಮಿತಿ ಸದಸ್ಯರು ಅಭಿಪ್ರಾಯ ತಿಳಿಸಿದರು.

Advertisement

ವಸತಿ ಸೌಲಭ್ಯವಿಲ್ಲ: ದೂರದಿಂದ ಊರುಗಳಿಂದ ಬರುವ ಭಕ್ತರಿಗೆ ವಸತಿ ಸೌಲಭ್ಯವಿಲ್ಲ, ಸರ್ಕಾರ ಈ ದೇಗುಲವನ್ನು ಎ ದರ್ಜೆಗೆ ಏರಿಸಿದ್ದರೂ ಮೂಲ ಸೌಕರ್ಯ ಒದಗಿಸಿಲ್ಲ, ವಸತಿ ನಿಲಯಕ್ಕೆ ಮುಜಾರಾಯಿ ಇಲಾಖೆ ಇಒ ಮರಿರಾಜ್‌ಗೆ ಪ್ರಸ್ತಾವನೆ ಸಲ್ಲಿಸಿದ್ದು, ಸರ್ಕಾರ ಕಡತವನ್ನು ಯಾವ ಮೂಲೆಗೆ ಎಸೆದಿದೆಯೋ ಗೊತ್ತಿಲ್ಲ.

ಪಾರ್ಕ್‌, ಪಾರ್ಕಿಂಗ್‌ ಸೌಕರ್ಯವಿಲ್ಲ: ದೂರದಿಂದ ಬರುವ ಭಕ್ತರ ವಾಹನಗಳ ನಿಲುಗಡೆ ಸೂಕ್ತ ಜಾಗವಿಲ್ಲ, ದೇವಾಲಯದ ಆವರಣದಲ್ಲಿ ಎಲ್ಲಂದರಲ್ಲಿ ನಿಲುಗಡೆ ಮಾಡಬೇಕಿದೆ. ಇನ್ನು ದೇಗುಲಕ್ಕೆ ಬರುವ ಪ್ರವಾಸಿಗರನ್ನು ಆಕರ್ಷಿಸಲು ಉದ್ಯಾನ ಬೇಕಿದೆ. 300 ಎಕರೆ ಜಾಗವಿದ್ದು, ಸುಸಜ್ಜಿತ ಪಾರ್ಕ್‌ ನಿರ್ಮಿಸಬಹುದಿದೆ. ದೇಗುಲಕ್ಕೆ ಕೆರೆ ಇದ್ದು, ಅಭಿವೃದ್ಧಿಪಡಿಸಿ ಬೋಟಿಂಗ್‌ ವ್ಯವಸ್ಥೆ ಮಾಡಿದರೆ ಇನ್ನಷ್ಟು ಪ್ರವಾಸಿಗರನ್ನು ಅಕರ್ಷಣೆ ಮಾಡಬಹುದೆಂದು ಭಟ್ರಕುಪ್ಪ ವೆಂಕಟೇಶಪ್ಪ ಹೇಳುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next