Advertisement

ಹುಲಿ ಕುಣಿತಕ್ಕೆ ಬಂಗಾರಸ್ವಾಮಿಯ ಮೆರುಗು

06:11 PM Oct 12, 2020 | Suhan S |

ಚಿಕ್ಕಮಗಳೂರು: ಮಲೆನಾಡು ಅನೇಕ ಜಾನಪದ ಕಲೆಗಳ ಬೀಡು. ಅದರಲ್ಲಿ ಹುಲಿವೇಷ ಕಲೆಯೂ ಒಂದಾಗಿದ್ದು, ತಮ್ಮ ಹುಲಿ ಕುಣಿತದಿಂದಲೇ ಜಿಲ್ಲೆಯಲ್ಲಿ ಪ್ರಸಿದ್ಧಿ ಪಡೆದವರು ಹುಲಿಬಂಗಾರಸ್ವಾಮಿ. ಇವರನ್ನು ಹುಲಿ ಬಂಗಾರಣ್ಣ ಅಂತಲೇ ಜನ ಪ್ರೀತಿಯಿಂದ ಕರೆಯುತ್ತಾರೆ.

Advertisement

1946ರಲ್ಲಿ ಚಿಕ್ಕಮಗಳೂರು ನಗರದ ಮಾರ್ಕೆಟ್‌ ರಸ್ತೆ ಶಾಂತಿನಗರದಲ್ಲಿ ಮಲ್ಲಪ್ಪ ರಾಜಮ್ಮ ದಂಪತಿಯ 2ನೇ ಪುತ್ರರಾಗಿ ಬಂಗಾರಸ್ವಾಮಿ ಅವರು ಜನನಿಸಿದರು. ಕಡುಬಡ ಕುಟುಂಬದಲ್ಲಿ ಜನಿಸಿದ ಇವರು ಚಿಕ್ಕವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡರು. ತಾಯಿ ಮತ್ತು ಅಣ್ಣ ಶ್ರೀನಿವಾಸ್‌ನೆರಳಿನಲ್ಲಿ ಬೆಳೆದ ಇವರು ತಮ್ಮ 9ನೇ ವರ್ಷದಲ್ಲಿ ಹುಲಿವೇಷಕ್ಕೆ ಆಕರ್ಷಿತರಾಗಿ ಹುಲಿವೇಷ ಹಾಕಲು ಪ್ರಾರಂಭಿಸಿದರು.

ಅಯ್ಯಪ್ಪಸ್ವಾಮಿ ಉತ್ಸವ, ಕಾಮನಹಬ್ಬ, ಮೊಹರಂ, ಗಣೇಶ ಹಬ್ಬ, ಚಾಮುಂಡೇಶ್ವರಿ ಉತ್ಸವ, ಸರ್ಕಾರಿ ಕಾರ್ಯಕ್ರಮ, ಅರಣ್ಯ ಇಲಾಖೆ ಆಯೋಜಿಸುವ ವನ್ಯಜೀವಿ ಸಪ್ತಾಹ ಇಂತಹ ವಿಶೇಷ ಸಂದರ್ಭದಲ್ಲಿ ತಮ್ಮ ಹುಲಿವೇಷ ಕುಣಿತದಿಂದ ಕಾರ್ಯಕ್ರಮಕ್ಕೆ ಮೆರಗು ತಂದು ಕೊಡುತ್ತಿದ್ದರು.

ಹುಲಿ ಬಂಗಾರಸ್ವಾಮಿ ಅವರ ಹುಲಿ ಕುಣಿತ ನೋಡಲು ಸಾವಿರಾರು ಜನರು ಜಮಾಯಿಸಿ ಹುಲಿಕುಣಿತವನ್ನು ಕಣ್ತುಂಬಿಕೊಳ್ಳುತ್ತಿದ್ದರು. ಸದ್ಯ 75 ವರ್ಷ ವಯಸ್ಸಿನ ಹುಲಿ ಬಂಗಾರಸ್ವಾಮಿ ಅವರು ತಮ್ಮ ಇಳಿವಯಸ್ಸಿನಲ್ಲೂ ಉತ್ಸಾಹದಿಂದಲೇ ಬಣ್ಣ ಹಚ್ಚುತ್ತೇನೆ ಎನ್ನುತ್ತಾರೆ. ಹುಲಿ ಬಂಗಾರಣ್ಣ ಅವರು ಚಿಕ್ಕಮಗಳೂರು ಜಿಲ್ಲೆ ಹಾಗೂ 1963-64ರಲ್ಲಿ ಮೈಸೂರು ದಸರಾ ಜಂಬೂಸವಾರಿ ಮೆರವಣಿಗೆಯಲ್ಲಿ ಹುಲಿವೇಷಹಾಕಿದ್ದಾರೆ. ಹಾಗೇ ಮಂಡ್ಯ, ಹಾಸನ, ಬೆಂಗಳೂರು, ಶಿವಮೊಗ್ಗ ಸೇರಿದಂತೆ ಭೋಪಾಲ್‌, ಮಧ್ಯಪ್ರದೇಶ, ಉತ್ತರ ಪ್ರದೇಶ ಲಕ್ನೋ, ಗುಜರಾತ್‌ ಗಾಂ ಧಿ ನಗರ, ಆಂದ್ರಪ್ರದೇಶ ಹೈದರಾಬಾದ್‌, ಮುಂಬೈ, ಪೂನಾದಲ್ಲೂ ಹುಲಿವೇಷ ತೊಟ್ಟು ತಮ್ಮ ಕಲೆ ಪ್ರದರ್ಶನ ನೀಡಿದ್ದಾರೆ.

ಹುಲಿ ಬಂಗಾರಸ್ವಾಮಿ ಅವರು ಹುಲಿವೇಷದೊಂದಿಗೆ ವಿವಿಧ ಕಲೆಗಳನ್ನು ಕರಗತ ಮಾಡಿಕೊಂಡಿದ್ದು, ಕತ್ತಿವರಸೆ, ಕೋಲುವರಸೆ, ಕುಸ್ತಿಪಟು ಕೂಡ ಆಗಿದ್ದರು. 1990ರಲ್ಲಿ ಅನಾರೋಗ್ಯ ಕಾಣಿಸಿಕೊಂಡ ನಂತರ ಕುಸ್ತಿಪಂದ್ಯದಲ್ಲಿ ಭಾಗವಹಿಸುವುದು ಕಡಿಮೆ ಮಾಡಿದೆ ಎಂದು ತಮ್ಮ ಅನುಭವ ಹಂಚಿಕೊಳ್ಳುತ್ತಾರೆ. ಹುಲಿ ಬಂಗಾರಣ್ಣ ಅವರು ಜಾನಪದ ಕಲೆಯ ಜೊತೆಗೆ ಈಜುಪಟು ಹಾಗೂ ಮುಳುಗು ತಜ್ಞರೂ ಹೌದು. ನೀರಿನಲ್ಲಿ ಬಿದ್ದು ಸಾವನ್ನಪ್ಪಿದ ನೂರಾರು ಮೃತದೇಹಗಳನ್ನು ನೀರಿನಿಂದ ಮೇಲೆತ್ತುವ ಕೆಲಸ ಮಾಡಿದ್ದು, ತಮ್ಮ ಈ ಕಾರ್ಯಕ್ಕೆ ಎಂದೂ ಹಣ ಪಡೆದುಕೊಳ್ಳದೆ ಸಮಾಜಸೇವೆ ಮಾಡಿದ್ದಾರೆ.

Advertisement

ಚಿಕ್ಕಮಗಳೂರು ಸುತ್ತಮುತ್ತ ಎಲ್ಲೇ ನೀರಿಗೆ ಬಿದ್ದು ಯಾವುದೇ ವ್ಯಕ್ತಿ ಸಾವನ್ನಪ್ಪಿದರೆ ಮೃತದೇಹ ಮೇಲೆತ್ತಲು ಪೊಲೀಸ್‌ ಇಲಾಖೆಯಿಂದ ಇವರಿಗೆ ಕರೆ ಬರುತ್ತಿತ್ತು. ದಂಟರಮಕ್ಕಿ, ಹಿರೇಕೊಳಲೆ, ರಾಮೇಶ್ವರ ಕೆರೆಗಳಲ್ಲಿ ಮೃತದೇಹಗಳನ್ನು ಹೊರತಗೆದಿದ್ದೇನೆ. ಅದರಲ್ಲೂ ದಂಟರಮಕ್ಕಿ ಕೆರೆಯಲ್ಲಿ ಹೆಚ್ಚು ಮೃತದೇಹಗಳನ್ನು ಹೊರತೆಗೆದಿದ್ದೇನೆ ಎನ್ನುತ್ತಾರೆ.

ನೀರಿನಲ್ಲಿ 12 ಅಡಿ ಆಳದ ವರೆಗೂ ಮುಳುಗುತ್ತೇನೆ. ನೀರಿನಲ್ಲಿ ಮೃತದೇಹ ಎಲ್ಲೇ ಇದ್ದರೂ ತರುತ್ತಿದ್ದೆ. ಹಿರೇಕೊಳಲೆ ಕೆರೆಯಲ್ಲಿ ಬಿದ್ದು ಮೃತಪಟ್ಟ ವ್ಯಕ್ತಿಯೋರ್ವರ ಮೃತದೇಹ ಹೊರತರುವುದು ಬಹಳ ತ್ರಾಸದಾಯಕವಾಗಿತ್ತು.  ಕೆರೆಯ ಕೋಡಿ ಪೈಪ್‌ನಲ್ಲಿ ಮೃತದೇಹ ಸಿಲುಕಿದ್ದರಿಂದ ಮೃತದೇಹ ಹೊರತಲು ಕಷ್ಟ ಪಡಬೇಕಾಯಿತು. ಛಲ ಬಿಡದೇ ಮೃತದೇಹ ಹೊರತಂದು ಯಶಸ್ವಿಯಾದೆ ಎಂದು ತಮ್ಮ ಅನುಭವವನ್ನು ಹಂಚಿಕೊಳ್ಳುತ್ತಾರೆ.

ಚಿಕ್ಕವಯಸ್ಸಿನಿಂದ ಈಜುವುದು ಎಂದರೆ ಬಾರೀ ಇಷ್ಟ. ಗಣಪತಿ ಹಬ್ಬದಲ್ಲಿ ಮನೆಗಳಲ್ಲಿ ಪ್ರತಿಷ್ಠಾಪಿಸಿದ ಗಣಪತಿ ವಿಸರ್ಜನೆ ಸಂದರ್ಭದಲ್ಲಿ ಗಣಪತಿ ವಿಗ್ರಹಗಳನ್ನು ತಮ್ಮ ಹೆಗಲ ಇಟ್ಟುಕೊಂಡು ಕೆರೆಯಲ್ಲಿ ಈಜಿಕೊಂಡು ಹೋಗಿ ಗಣಪತಿ ವಿಸರ್ಜನೆ ಮಾಡುತ್ತಿದ್ದೆ. ಒಮ್ಮೆ ಆಜಾದ್‌ಪಾರ್ಕ್‌ ಗಣಪತಿ ತೆಪ್ಪದ ಮೇಲೆ ತೆಗೆದುಕೊಂಡು ಬಸವನಹಳ್ಳಿ ಕೆರೆಯಲ್ಲಿ ವಿಸರ್ಜನೆ ಮಾಡುವ ಸಂದರ್ಭದಲ್ಲಿ 12 ಜನರಲ್ಲಿ ನೀರು ಹೆಚ್ಚಿದ್ದ ಕಾರಣ 4 ಜನ ಮಧ್ಯದಲ್ಲೇ ಹೊರ ಬಂದರು. ನೀರು ಕುತ್ತಿಗೆ ಮಟ್ಟಕ್ಕೆ ಬಂದಾಗ ಮತ್ತೇ 4 ಜನ ಬಿಟ್ಟು ಹೋದರು. ದೇವರ ಮೇಲೆ ಬಾರ ಹಾಕಿ ನೀರಿನಲ್ಲಿ ಇಳಿದು ಗಣಪತಿ ವಿಸರ್ಜನೆ ಮಾಡಿದೆ ಎಂದು ಆ ದಿನಗಳನ್ನು ನೆನಪಿಸಿಕೊಳ್ಳಿತ್ತಾರೆ. ಜನಪದ ಕಲೆ, ಈಜುಪಟು,

ಮುಳುಗುತಜ್ಞರಾಗಿ ಅನೇಕ ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಂಡಿರುವ ಅವರನ್ನು ಅರಣ್ಯ ಇಲಾಖೆ, ವೈಲ್ಡ್‌ಕ್ಯಾಟ್‌-ಸಿ, ಗಣಪತಿ ಸಮಿತಿ, ಅಯ್ಯಪ್ಪಸ್ವಾಮಿ ಸಮಿತಿ, ಡಾ| ರಾಜ್‌ ಕುಮಾರ್‌ ಸಂಘ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ರಾಷ್ಟ್ರೀಯ ವಯಸ್ಕರ ಶಿಕ್ಷಣ ಅಂದೋಲನ ಪ್ರಶಸ್ತಿ, 17ನೇ ರಾಜ್ಯಮಟ್ಟದ ಪ್ರಶಸ್ತಿ, 14ನೇ ರಾಷ್ಟ್ರೀಯ ವಿಜ್ಞಾನ ಸಮಾವೇಶ

ಅನೇಕ ಸಂಸ್ಥೆಗಳು ಹುಲಿ ಬಂಗಾರಸ್ವಾಮಿ ಅವರ ಕಲೆಯನ್ನು ಗುರುತಿಸಿ ಪ್ರಶಸ್ತಿ ನೀಡಿ ಸನ್ಮಾನಿಸಿವೆ.ಅನೇಕ ಕಲೆಗಳನ್ನು ಕರಗತ ಮಾಡಿಕೊಂಡಿರುವ ಹುಲಿ ಬಂಗಾರಸ್ವಾಮಿಯವನರನ್ನು ಸರ್ಕಾರ ಗುರುತಿಸಿ ಗೌರವಿಸಬೇಕೆಂಬುದು ಸಾರ್ವಜನಿಕರ ಆಶಯವಾಗಿದೆ.

ನನ್ನ ಕಲೆಯನ್ನು ಗುರುತಿಸಿ ಅನೇಕ ಸಂಘ-ಸಂಸ್ಥೆಗಳು ಗೌರವಿಸಿವೆ. ಸರ್ಕಾರ ನನ್ನ ಕಲೆಯನ್ನು ಗುರುತಿಸಿ ಗೌರವಿಸದಿರುವುದು ನೋವು ತಂದಿದೆ. ಮುಂದಿನ ದಿನಗಳಲ್ಲಿ ನನ್ನ ಕಲೆಯನ್ನು ಗುರುತಿಸಿ ಗೌರವಿಸುವ ನಂಬಿಕೆ ಇದೆ.  -ಹುಲಿ ಬಂಗಾರಸ್ವಾಮಿ

 

-ಸಂದೀಪ ಜಿ.ಎನ್‌. ಶೇಡ್ಗಾರ್‌

Advertisement

Udayavani is now on Telegram. Click here to join our channel and stay updated with the latest news.

Next