ಬಂಗಾರಪೇಟೆ: ಕಾಡುಪ್ರಾಣಿಗಳು ಹಾವಳಿಗೆ ಶಾಶ್ವತ ಪರಿಹಾರ, ಬೆಳೆ ನಷ್ಟಕ್ಕೆ ಪ್ರತಿ ಎಕರೆಗೆ 5 ಲಕ್ಷ ರೂ. ಪರಿಹಾರ ನೀಡಬೇಕೆಂದು ಒತ್ತಾಯಿಸಿ ಆ.16ರಂದು ಅರಣ್ಯ ಇಲಾಖೆ ಕಚೇರಿಗೆ ಜಾನುವಾರು, ನಾಶವಾದ ಬೆಳೆಗಳ ಸಮೇತ ಮುತ್ತಿಗೆ ಹಾಕಲು ನಿರ್ಧರಿಸಿರುವುದಾಗಿ ರೈತ ಸಂಘ ಅಧ್ಯಕ್ಷ ಮರಗಲ್ ಶ್ರೀನಿವಾಸ್ ಹೇಳಿದರು.
ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆಯ ಸಭಾಂಗಣದಲ್ಲಿ ಕರೆದಿದ್ದ ರೈತ ಸಂಘದ ಸಭೆಯಲ್ಲಿ ಮಾತನಾಡಿದ ಅವರು, ಒಂದು ಕಡೆ ಭೀಕರ ಬರಗಾಲ, ಮತ್ತೂಂದೆಡೆ ಆಲಿಕಲ್ಲು ಮಳೆ ಹಾಗೂ ಇವುಗಳ ಮಧ್ಯೆ ಬಿರುಗಾಳಿಗೆ ಬೆಳೆ ನಾಶವಾಗಿ ಸಂಕಷ್ಟದಲ್ಲಿರುವ ರೈತರಿಗೆ ಕಾಡು ಪ್ರಾಣಿಗಳ ಹಾವಳಿಗೆ ಇರುವ ಬೆಳೆಗಳು ಸಂಪೂರ್ಣ ನಾಶವಾಗಿ ಸಾಲದ ಸುಳಿಗೆ ಸಿಲುಕಿ ಒದ್ದಾಡುತ್ತಿದ್ದರೂ ಸರ್ಕಾರದ ನಿರ್ಲಕ್ಷ್ಯ ಮುಂದುವರಿದಿದೆ ಎಂದು ಆರೋಪಿಸಿದರು.
ಕಾಡುಪ್ರಾಣಿಗಳ ಹಾವಳಿ: ಕೃಷಿ ಕ್ಷೇತ್ರ ದಿನೇದಿನೆ ಅವನತಿಯತ್ತ ಸಾಗುತ್ತಿದೆ. ಜೊತೆಗೆ ಮನುಷ್ಯನ ದುರಾಸೆಗೆ ಪರಿಸರ ನಾಶವಾಗುತ್ತಿದೆ. ಪ್ರಾಣಿಗಳು ಆಹಾರ, ನೀರಿಗಾಗಿ ರೈತರ ಬೆಳೆಗಳತ್ತ ಮುಖ ಮಾಡುತ್ತಿವೆ. ಭೀಕರ ಬರಗಾಲದ ಜೊತೆಗೆ ಮಳೆ ಇಲ್ಲದೆ ತತ್ತರಿಸಿ ಸಾಲ ಮಾಡಿ ಕೊಳವೆಬಾವಿ ಕೊರೆಸಿ ಕಷ್ಟಪಟ್ಟು ಬೆಳೆದಂತಹ ಬೆಳೆ ಕಣ್ಣ ಮುಂದೆಯೇ ಕಾಡುಪ್ರಾಣಿಗಳ ಹಾವಳಿಗೆ ನಾಶವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹಣ ದುರ್ಬಳಕೆ: ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ತಾಲೂಕಿನ ಗಡಿಭಾಗದ ಹೋಬಳಿಗಳಾದ ಬೂದಿಕೋಟೆ, ಕಾಮಸಮುದ್ರ ವ್ಯಾಪ್ತಿಯಲ್ಲಿ ಆನೆಗಳು ಮತ್ತಿತರ ಪ್ರಾಣಿಗಳಿಂದ ರೈತರ ಬೆಳೆಗಳು ರಾತ್ರೋರಾತ್ರಿ ಪ್ರಾಣಿಗಳ ಹಾವಳಿಗೆ ನಾಶವಾಗುತ್ತಿದ್ದರೂ ನೆಪಮಾತ್ರಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಕಾರ್ಯಾಚರಣೆ ಮಾಡಿ ರೈತರು ಮತ್ತು ಪ್ರಾಣಿಗಳ ಹೆಸರಿನಲ್ಲಿ ಲಕ್ಷಾಂತರ ರೂ. ಹಣ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದರು.
ಸಮಯಕ್ಕೆ ಸರಿಯಾಗಿ ಬೆಳೆ ಸಮೀಕ್ಷೆ ಮಾಡದೆ ಪರಿಹಾರವನ್ನು ಸಹ ನೀಡುತ್ತಿಲ್ಲ. ಸರ್ಕಾರದಿಂದ 5 ಲಕ್ಷ ರೂ. ಮಂಜೂರಾದರೆ ರೈತರಿಗೆ 2 ಲಕ್ಷ ರೂ. ಕೊಟ್ಟ ಕೈ ತೊಳೆದುಕೊಳ್ಳುತ್ತಿದ್ದಾರೆ. ಬರಗಾಲದಲ್ಲಿ ಕಷ್ಟಾಪಟ್ಟು ಬೆಳೆದ ಬೆಳೆಗಳಿಗೆ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಇದ್ದರೂ ಅದಕ್ಕೆ ತಕ್ಕಂತೆ ಪರಿಹಾರ ನೀಡುತ್ತಿಲ್ಲ. ಸಂಬಂಧಪಟ್ಟ ಅಧಿಕಾರಿಗಳಿಗೆ ರೈತರ ಮೇಲೆ ಕಾಳಜಿ ಇಲ್ಲ ಎಂದು ದೂರಿದರು.
ಸಭೆಯಲ್ಲಿ ಜಿಲ್ಲಾ ಸಂಚಾಲಕ ಕೆ.ಶ್ರೀನಿವಾಸಗೌಡ, ಉದಯ್‌ಕುಮಾರ್, ತಾಲೂಕ ಅಧ್ಯಕ್ಷ ಐತಾಂಡಹಳ್ಳಿ ಅಂಬರೀಶ್, ಚಂದ್ರಪ್ಪ, ಮಂಜುನಾಥ್, ಚಂದ್ರು, ಮಂಗಸಂದ್ರ ನಾಗೇಶ್, ವೆಂಕಟೇಶಪ್ಪ, ತಿಮ್ಮಣ್ಣ, ರಂಜಿತ್, ಸಾಗರ್, ಹನುಮಯ್ಯ, ಮುನಿನಾ ರಾಯಣಪ್ಪ, ಶ್ರೀನಿವಾಸರೆಡ್ಡಿ, ಬ್ಯಾಟರಾಯಪ್ಪ, ಟಿ.ಮುನಿಯಪ್ಪ, ನರಸಾಪುರ ಪುರುಷೋತ್ತಮ್, ಈಕಾಂಬಳ್ಳಿ ಮಂಜು, ಪುತ್ತೇರಿ ರಾಜು ಮುಂತಾದವರಿದ್ದರು.