ಬಂಗಾರಪೇಟೆ: ಸಂಘದ ಲೆಕ್ಕಪತ್ರಗಳ ಬಗ್ಗೆ ಮಾಹಿತಿ ಕೇಳಿದ್ದಕ್ಕೆ ತಮ್ಮ ವಿರುದ್ಧವೇ ನಿರ್ದೇಶಕರನ್ನು ಎತ್ತಿಕಟ್ಟಿ ರಾಜೀನಾಮೆ ಕೊಡಿಸಿ, ಸಂಘವನ್ನು ಸೂಪರ್‌ಸೀಡ್ ಮಾಡಿಸಿದ್ದಾರೆ ಎಂದು ಬೋಡಗುರ್ಕಿ ವಿಎಸ್‌ಎಸ್‌ಎನ್‌ನ ಮಾಜಿ ಅಧ್ಯಕ್ಷ ಲಕ್ಷ್ಮೀನಾರಾಯಣ, ಪ್ರಭಾರ ಸಿಇಒ ಶ್ರೀರಾಮರೆಡ್ಡಿ ವಿರುದ್ಧ ದೂರಿದ್ದಾರೆ.
ತಾಲೂಕಿನ ಕಾಮಸಮುದ್ರ ಹೋಬಳಿಯ ಬೋಡಗುರ್ಕಿ ಸಹಕಾರ ಸಂಘದ ಆಡಳಿತ ಮಂಡಳಿಗೆ ಚುನಾವಣೆ ನಡೆದು ಇನ್ನೂ 6 ತಿಂಗಳಲ್ಲಿ 11 ನಿರ್ದೇಶಕರಲ್ಲಿ 7 ಮಂದಿ ತಮ್ಮ ವಿರುದ್ಧವೇ ತಿರುಗಿಬಿದ್ದು, ರಾಜೀನಾಮೆ ನೀಡಿದ್ದಾರೆ. ಸಂಘವು ಪ್ರಸಕ್ತ ಸಾಲಿನಲ್ಲಿ ಕೆಸಿಸಿ ಯೋಜನೆಯಡಿ ರೈತರಿಗೆ 1.11 ಕೋಟಿ ರೂ. ಸಾಲ, 21 ಮಹಿಳಾ ಸಂಘಗಳಿಗೆ ತಲಾ 5 ಲಕ್ಷ ರೂ. ಸಾಲ ನೀಡಿದ್ದು, ಈ ಸಂಬಂಧ 21.50 ಲಕ್ಷ ರೂ. ಡಿಪಾಸಿಟ್ ಹಣ, ಸಂಘದ 2.80 ಲಕ್ಷ ರೂ. ಷೇರು ಹಣದ ಬಗ್ಗೆ ಪ್ರಭಾರ ಸಿಇಒ ಶ್ರೀರಾಮರೆಡ್ಡಿ ಅವರಿಂದ ಮಾಹಿತಿ ಕೇಳಿದ್ದಕ್ಕೆ ಅವರು ಸಮರ್ಪಕ ನೀಡಿಲ್ಲ, ತಮ್ಮ ವಿರುದ್ಧವೇ ತಿರುಗಿ ಬಿದ್ದರು ಎಂದು ಆರೋಪಿಸಿದ್ದಾರೆ.
ಡಿಸಿಸಿ ಬ್ಯಾಂಕ್ ಸದಸ್ಯರೊಬ್ಬರ ಕುಮ್ಮಕ್ಕು: ತಾವು ಅಧ್ಯಕ್ಷರಾದ ನಂತರ ಈ ಭಾಗದ ರೈತರು ಸಂಘದ ಪ್ರಭಾರ ಸಿಇಒ ಶ್ರೀರಾಮರೆಡ್ಡಿ ವಿರುದ್ಧ ಮೌಖೀಕ ದೂರು ನೀಡಿದ್ದರು. ಸಂಘದ ಹಣ ಸ್ವಂತಕ್ಕಾಗಿ ಬಳಸಿಕೊಂಡಿರುವುದು, ಕೆಸಿಸಿ ಸಾಲ ಪಡೆಯಲು ಲಂಚ ಪಡೆಯುತ್ತಿದ್ದರು ಎಂದು ರೈತರು ಆರೋಪಿಸಿದ್ದರು. ಸಂಘದ ಚಟುವಟಿಕೆಗಳ ಬಗ್ಗೆ ಹಾಗೂ ಲೆಕ್ಕಪತ್ರಗಳ ಬಗ್ಗೆ ಯಾರಿಗೂ ಮಾಹಿತಿ ನೀಡುತ್ತಿರಲಿಲ್ಲ. ಡಿಸಿಸಿ ಬ್ಯಾಂಕ್ ನಿರ್ದೇಶಕರೊಬ್ಬರ ಕುಮ್ಮಕ್ಕಿನಿಂದ ಈ ಪ್ರಭಾರ ಸಿಇಒ ನಡೆದುಕೊಳ್ಳುತ್ತಿದ್ದರು ಎಂದು ಗಂಭೀರ ಆರೋಪ ಮಾಡಿದ್ದಾರೆ.
ಗಂಭೀರ ಆರೋಪ: ಈ ಸಹಕಾರ ಸಂಘದಲ್ಲಿ ಬಿಜೆಪಿ ತನ್ನ ಪ್ರಾಬಲ್ಯ ಹೊಂದಿತ್ತು. ಬಿಜೆಪಿ ನಿರ್ದೇಶಕರು ಹೆಚ್ಚಾಗಿ ಗೆದ್ದಿದ್ದರೂ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಪ್ರಭಾವದಿಂದ ಕಾಂಗ್ರೆಸ್ ಬೆಂಬಲದಿಂದ ಗೆದ್ದಿದ್ದ ನನ್ನನ್ನು ಅಧ್ಯಕ್ಷರಾಗಿ ಮಾಡಲಾಗಿತ್ತು.
ಹೀಗಾಗಿ ಪ್ರಭಾರ ಸಿಇಒ ಶ್ರೀರಾಮರೆಡ್ಡಿ ತಮ್ಮ ವಿರುದ್ಧ ಬಿಜೆಪಿ ನಿರ್ದೇಶಕರನ್ನು ಎತ್ತಿಕಟ್ಟಿ ಅಧಿಕಾರದಿಂದ ಕೆಳಗಿಳಿಸಿ, ಬಿಜೆಪಿ ಬೆಂಬಲಿತ ಅಧ್ಯಕ್ಷರನ್ನಾಗಿ ಮಾಡಲು ತಂತ್ರ ರೂಪಿಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ವಿಎಸ್‌ಎಸ್‌ಎನ್ ನಿರ್ದೇಶಕರಾಗಿದ್ದ ಬೋಡಗುರ್ಕಿ ಬಿ.ವಿ.ಪಾರ್ಥಸಾರಥಿ, ಲೋಕೇಶರೆಡ್ಡಿ, ಕೊಂಗರಹಳ್ಳಿ ಶ್ರೀರಾಮರೆಡ್ಡಿ, ಬೋಡೇನಹಳ್ಳಿ ವರದರಾಜ್, ಪುರ ಗ್ರಾಮದ ಪಿ.ಕೆ.ನಾರಾಯಣಸ್ವಾಮಿ, ಮಂಜುನಾಥರೆಡ್ಡಿ ಹಾಗೂ ನಡಂಪಲ್ಲಿ ರಿಜ್ವಾನ್ ತಾಜ್ ತಮ್ಮ ನಿರ್ದೇಶಕ ಸ್ಥಾನಕ್ಕೆ ಮೇ 29ರಂದು ರಾಜೀನಾಮೆ ನೀಡಿದ್ದರು.
ಈ ಹಿನ್ನೆಲೆಯಲ್ಲಿ ಸಂಘದ ಆಡಳಿತ ಮಂಡಳಿಯನ್ನು ವಜಾಗೊಳಿಸಿ ಕೆಜಿಎಫ್ ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕರನ್ನು ವಿಶೇಷಾಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ.