Advertisement
ಕಳೆದ ಮೂರು ತಿಂಗಳಿನಿಂದ ಬಂಗಾರಪೇಟೆ ವಿಧಾನ ಸಭಾ ಕ್ಷೇತ್ರದಲ್ಲಿ ಗುಟ್ಟೆ ರಾಜಣ್ಣ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡ ಎಂದು ವೈರಲ್ ಆಗುತ್ತಿದೆ. ತಾಲೂಕಿಗೆ ಒಮ್ಮೆ ಕೆಪಿಸಿಸಿ ಕಾರ್ಯದರ್ಶಿ ಹಾಗೂ ಜಿಪಂ ಮಾಜಿ ಸದಸ್ಯ ರಾಮಚಂದ್ರಪ್ಪ ಅವರ ಮೊಮ್ಮಗಳ ನಾಮಕರಣಕ್ಕೆ ಬಂದಿದ್ದು, ಅಂದಿನಿಂದ ಗುಟ್ಟೆ ರಾಜಣ್ಣ ಅಭಿಮಾನಿಗಳ ಬಳಗ, ಬಂಗಾರಪೇಟೆ ಎಂದು ಫೇಸ್ ಬುಕ್‌ನಲ್ಲಿ ಹರಿದಾಡುತ್ತಿವೆ.
Related Articles
Advertisement
ಅಕ್ಷರ ಕ್ರಾಂತಿ ಪ್ರಾರಂಭಿಸಿದ ಸಾವಿತ್ರಬಾಯಿ ಫುಲೆ ಜನ್ಮದಿದ ಪ್ರಯುಕ್ತ ಬಂಗಾರಪೇಟೆ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಭಾವಚಿತ್ರ ಕೈಬಿಟ್ಟು, ಕೇಂದ್ರ ಮಾಜಿ ಶಾಸಕ ಕೆ.ಎಚ್.ಮುನಿಯಪ್ಪ, ಗುಟ್ಟೆ ರಾಜಣ್ಣ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಚಂದ್ರಾರೆಡ್ಡಿ, ಕೆಪಿಸಿಸಿ ಕಾರ್ಯದರ್ಶಿ ರಾಮಚಂದ್ರಪ್ಪ, ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿಚ್ಚಹಳ್ಳಿ ಗೋವಿಂದರಾಜ್ ಅವರ ಭಾವಚಿತ್ರವುಳ್ಳ ಬ್ಯಾನರ್‌ಗಳನ್ನು ಮಾಡಿಸಿರುವುದರಿಂದ ಶಾಸಕರ ಬೆಂಬಲಿಗರಿಗೆ ಬಿಸಿತುಪ್ಪವಾಗಿ ಪರಿಣಮಿಸಿದೆ.
ಕಾಂಗ್ರೆಸ್‌ನಲ್ಲಿ ಶೀತಲ ಸಮರ:
ಮೂರು ತಿಂಗಳಿನಿಂದ ಕಾಂಗ್ರೆಸ್ ಪಕ್ಷದ ಪ್ರತಿಯೊಬ್ಬ ಮುಖಂಡ ಹಾಗೂ ಕಾರ್ಯಕರ್ತರ ಹುಟ್ಟಿದ ಹಬ್ಬಕ್ಕೆ ಗುಟ್ಟೆ ರಾಜಣ್ಣ ಅಭಿನಂದಿಸುವ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇವುಗಳಲ್ಲಿ ಹಾಲಿ ಕಾಂಗ್ರೆಸ್ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಭಾವಚಿತ್ರ ಇಲ್ಲದೇ ಕಾಂಗ್ರೆಸ್ ಪಕ್ಷದಿಂದಲೇ ಪ್ರಚಾರ ಮಾಡುತ್ತಿದೆ. ಇದರಿಂದ ಹಾಲಿ ಶಾಸಕರ ವಿರುದ್ಧ ಪರ್ಯಾಯವಾಗಿ ಮತ್ತೂಬ್ಬ ನಾಯಕನನ್ನಾಗಿ ಗುಟ್ಟೆ ರಾಜಣ್ಣ ಅವರನ್ನು ಪ್ರತಿಬಿಂಬಿಸುತ್ತಿರುವುದರಿಂದ ಕಾಂಗ್ರೆಸ್ ಪಕ್ಷದಲ್ಲಿ ಶೀತಲ ಸಮರ ಎದ್ದು ಕಾಣುತ್ತಿದೆ. ಗುಟ್ಟೆ ರಾಜಣ್ಣ ಕಾಂಗ್ರೆಸ್ ಮುಖಂಡರಾಗಿದ್ದು, ತಾಲೂಕಿನ ಜಿಪಂ ಸದಸ್ಯ ರಾಮಚಂದ್ರಪ್ಪ, ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿಚ್ಚಹಳ್ಳಿ ಗೋವಿಂದರಾಜ್ ಹಾಗೂ ಇನ್ನೂ ಕೆಲವು ರೇಣುಕಾ ಯಲ್ಲಮ್ಮ ಬಳಗದ ಮುಖಂಡರೊಂದಿಗೆ ಒಡನಾಟ ಇಟ್ಟುಕೊಂಡಿದ್ದಾರೆ. ರೇಣುಕಾ ಎಲ್ಲಮ್ಮ ಬಳಗದಲ್ಲಿ ಕಾಂಗ್ರೆಸ್, ಬಿಜೆಪಿ ಮುಖಂಡರಿದ್ದಾರೆ. ಆದರೆ, ಗುಟ್ಟೆ ರಾಜಣ್ಣ ಕೇವಲ ಕಾಂಗ್ರೆಸ್ ಮುಖಂಡರೊಂದಿಗೆ ಒಡನಾಟ ಇಟ್ಟುಕೊಂಡಿದ್ದರಿಂದ ಕಾಂಗ್ರೆಸ್‌ನ ಎರಡು ಗುಂಪುಗಳ ಪೈಕಿ ಒಂದು ಗುಂಪಿಗೆ ಪರ್ಯಾಯ ನಾಯಕರನ್ನಾಗಿ ಮಾಡಲು ಎಲ್ಲಾ ಸಿದ್ಧತೆಗಳು ನಡೆಯುತ್ತಿವೆ ಎಂದು ಕೇಳಿ ಬರುತ್ತಿವೆ. ತಾಲೂಕಿನಲ್ಲಿ ಸದೃಢವಾಗಿರುವ ಕಾಂಗ್ರೆಸ್ ಪಕ್ಷಕ್ಕೆ ಗುಟ್ಟೆ ರಾಜಣ್ಣ ಎಂಟ್ರಿ ಅಗತ್ಯವೇ ಎಂಬ ಪ್ರಶ್ನೆಯು ಚರ್ಚೆಗೆ ಗ್ರಾಸವಾಗಿದೆ.
- ಎಂ.ಸಿ.ಮಂಜುನಾಥ್