Advertisement

ಆಟೋ ಏರಿದ ಸಂಚಾರ ಪೊಲೀಸರು!

02:17 PM May 30, 2019 | Team Udayavani |

ಬೆಂಗಳೂರು: ನಗರದ ಸಂಚಾರ ಪೊಲೀಸರು ತಮ್ಮ ಚೈಕ್‌, ಜೀಪ್‌ಗ್ಳನ್ನು ಬಿಟ್ಟು ಆಟೋಗಳನ್ನು ಹತ್ತುತ್ತಿದ್ದಾರೆ. ಇದರರ್ಥ ಟ್ರಾಫಿಕ್‌ ಪೊಲೀಸರ ಎಲ್ಲ ವಾಹನಗಳೂ ಏಕಾಏಕಿ ಕೈಕೊಟ್ಟಿವೆ ಅಂತಲ್ಲ. ಪ್ರಯಾಣಿಕರಿಂದ, ಆಟೋ ಮೀಟರ್‌ನಲ್ಲಿ ಬರುವ ಮೊತ್ತಕ್ಕಿಂತಲೂ ಹೆಚ್ಚು ಹಣ ವಸೂಲಿ ಮಾಡುತ್ತಿರುವ ಚಾಲಾಕಿ ಚಾಲಕರಿಗೆ ಬಿಸಿ ಮುಟ್ಟಿಸಲು ನಗರ ಸಂಚಾರ ಪೊಲೀಸರು ಮಾರುವೇಶದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.

Advertisement

ಪ್ರಯಾಣಿಕರಿಂದ ಮೀಟರ್‌ ದರಕ್ಕಿಂತ ಹೆಚ್ಚು ಹಣ ಕೇಳುವುದು ಮತ್ತು ಕೇಳಿದ ಪ್ರದೇಶಗಳಿಗೆ ಹೋಗುವುದಕ್ಕೆ ನಿರಾಕರಿಸುವ ಆಟೋ ಚಾಲಕರ ಮೇಲೆ ಸಂಚಾರ ಪೊಲೀಸರು ಒಂದು ಕಣ್ಣಿಟ್ಟಿದ್ದಾರೆ. ಇತ್ತೀಚೆಗೆ ಸಂಚಾರ ಪೊಲೀಸರು ನಡೆಸಿದ ವಿಶೇಷ ಕಾರ್ಯಾಚರಣೆ ಇದಕ್ಕೆ ಸಾಕ್ಷಿ.

ಕಳೆದ ಎರಡು ತಿಂಗಳಿಂದ ಆಟೋ ಚಾಲಕರ ಮೇಲೆ ಸಾರ್ವಜನಿಕ ವಲಯದಿಂದ ಹೆಚ್ಚು ದೂರುಗಳು ಬಂದ ಹಿನ್ನೆಲೆ, ಸಂಚಾರಿ ಪೊಲೀಸರು ಮೇ 21ರಿಂದ 24ರವರೆಗೆ ನಗರದ ವಿವಿಧ ಪ್ರದೇಶಗಳಲ್ಲಿ ವಿಶೇಷ ಕಾರ್ಯಾಚರಣೆ ಕೈಗೊಂಡಿದ್ದರು. ಬೆಂಗಳೂರು ಪೂರ್ವ ಸಂಚಾರ ವಿಭಾಗದ 21 ಪ್ರದೇಶಗಳಲ್ಲಿ ಮತ್ತು ಬೆಂಗಳೂರು ಉತ್ತರ ಸಂಚಾರ ವಿಭಾಗದ 5 ಪ್ರದೇಶಗಳಲ್ಲಿ, ಸಂಚಾರ ಪೊಲೀಸರೇ ಪ್ರಯಾಣಿಕರ ಸೊಗಿನಲ್ಲಿ ಆಟೋಗಳಲ್ಲಿ ಪ್ರಯಾಣ ಮಾಡಿ ವಿಶೇಷ ಕಾರ್ಯಾಚರಣೆ ನಡೆಸಿದ್ದಾರೆ. ನಿಯಮ ಉಲ್ಲಂಘಿಸಿದ ಆಟೋ ಚಾಲಕರಿಂದ ಒಟ್ಟು 8,64,600 ರೂ. ದಂಡ ಸಂಗ್ರಹಿಸಲಾಗಿದೆ!

ಪೂರ್ವ ವಿಭಾಗದ ಸಂಚಾರ ಪೊಲೀಸರು ಮೇ 21ಮತ್ತು 22ರಂದು ವಿಶೇಷ ಕಾರ್ಯಾಚರಣೆ ನಡೆಸಿ, 7091 ದೂರುಗಳನ್ನು ದಾಖಲಿಸಿದ್ದಾರೆ. ಎರಡೇ ದಿನದಲ್ಲಿ 8,14,300 ರೂ.ದಂಡ ಮೊತ್ತ ಸಂಗ್ರಹವಾಗಿದೆ. ಉತ್ತರ ವಿಭಾಗದ ಸಂಚಾರ ಪೊಲೀಸರು, ಉಳಿದ 2 ದಿನಗಳ ಕಾರ್ಯಾಚರಣೆಯಲ್ಲಿ 50,300 ರೂ.ದಂಡ ಸಂಗ್ರಹಿಸಿದ್ದರೆ.

ಸಂಚಾರ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಪ್ರಯಾಣಿಕರು ಕೇಳಿದ ಪ್ರದೇಶಗಳಿಗೆ ಹೋಗಲು ನಿರಾಕರಿಸಿದ ಮತ್ತು ನಿಗದಿತ ಮೊತ್ತಕ್ಕಿಂತ ಹೆಚ್ಚು ಬಾಡಿಗೆ ಕೇಳಿದ ದೂರುಗಳ ಸಂಖ್ಯೆಯೇ ಹೆಚ್ಚಾಗಿದೆ. ಎರಡು ವಲಯಗಳಲ್ಲಿ ಸಾರ್ವಜನಿಕರು ಹೇಳಿದ ಪ್ರದೇಶಗಳಿಗೆ ಹೋಗಲು ನಿರಾಕರಿಸಿದಕ್ಕೆ 382 ಪ್ರಕರಣಗಳು ಮತ್ತು ನಿಗದಿತ ಮೊತ್ತಕ್ಕಿಂತ ಹೆಚ್ಚು ಹಣ ಕೇಳಿದ ಆರೋಪದ ಮೇಲೆ 304 ದೂರುಗಳು ದಾಖಲಾಗಿವೆ.

Advertisement

ದೂರು ದಾಖಲಾಗಿಲ್ಲ: ‘ಆಟೋ ಚಾಲಕರು ಪ್ರಯಾಣಿಕರಿಂದ ಹೆಚ್ಚು ವರಿ ಹಣ ಕೇಳಿರುವ ದೂರುಗಳ ಬಗ್ಗೆ ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಲಾಗಿತ್ತು. ಇಲ್ಲಿಯವರೆಗೆ ಯಾವುದೇ ದೂರುಗಳು ದಾಖಲಾಗಿಲ್ಲ ಎಂದು ವರದಿ ಬಂದಿದೆ’ ಎನ್ನುತ್ತಾರೆ ಆಟೋರಿಕ್ಷಾ ಚಾಲಕರ ಯೂನಿಯನ್‌ನ ಪ್ರಧಾನ ಕಾರ್ಯದರ್ಶಿ ರುದ್ರಮೂರ್ತಿ.

ಕಾರ್ಯಾಚರಣೆ ನಡೆಸಿದ ಟ್ರಾಫಿಕ್‌ ಪೊಲೀಸರು, ಒಮ್ಮೆ ಹೋದ ಮಾರ್ಗದಲ್ಲೇ ಮತ್ತೂಮ್ಮೆ ಬರುವಂತೆ ಕೇಳಿದ್ದಾರೆ. ಆದರೆ ಕೆಲವೊಂದು ಪ್ರದೇಶಗಳಿಗೆ ಹೋದರೆ, ವಾಪಸ್‌ ಬರುವಾಗ ಪ್ರಯಾಣಿಕರು ಸಿಗುವುದಿಲ್ಲ. ಆಗ ಖಾಲಿ ಬರಬೇಕಾಗುತ್ತದೆ ಎಂಬ ಕಾರಣಕ್ಕೆ ಚಾಲಕರು ಬಾಡಿಗೆ ಬರುವುದಿಲ್ಲ ಎಂದು ಹೇಳಿದ್ದಾರೆ. ಇದನ್ನೇ ನೆಪ ಮಾಡಿಕೊಂಡು ಪೊಲೀಸರು ದಂಡ ವಿಧಿಸಿದ್ದಾರೆ ಎಂದು ರುದ್ರಮೂರ್ತಿ ಆರೋಪಿಸುತ್ತಾರೆ.

‘ಸಂಚಾರ ಪೊಲೀಸರು ದಾಖಲಿಸಿಕೊಂಡಿರುವ ಎಲ್ಲ ದೂರುಗಳು ಸತ್ಯವಲ್ಲ. ಉದ್ದೇಶಪೂರ್ವಕವಾಗಿ ಕೆಲವು ದೂರುಗಳನ್ನು ದಾಖಲಿಸಿದ್ದಾರೆ. ಮೇಲಧಿಕಾರಿಗಳು ತಮಗೆ ನೀಡಿರುವ ಟಾರ್ಗೆಟ್ ತಲುಪುವ ಉದ್ದೇಶದಿಂದ ಇಲ್ಲದ ಕಾರಣಗಳನ್ನು ನೀಡಿ ದೂರು ದಾಖಲಿಸಿಕೊಳ್ಳುತ್ತಿದ್ದಾರೆ,’ ಎಂದು ರಾಜ್ಯ ಖಾಸಗಿ ವಾಣಿಜ್ಯ ವಾಹನ ಚಾಲಕರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್‌.ಪಿ.ಚಂದ್ರು ಆರೋಪಿಸುತ್ತಾರೆ.

ಪ್ರಯಾಣಿಕರನ್ನು ಇಳಿಸಲು ಆಟೋ ನಿಲ್ಲಿಸಿದರೂ ಅದನ್ನು ‘ನೋ ಪಾರ್ಕಿಂಗ್‌’ ಎಂದು ಪರಿಗಣಿಸಿ ದಂಡ ವಿಧಿಸಲಾಗುತ್ತದೆ. ಆಟೋ ಸಂಚಾರ ಇರುವುದೇ ‘ಒಪ್ಪಂದದ ಮೇರೆ’ಗೆ. ಹೀಗಿರುವಾಗ ಪ್ರಯಾಣಿಕರೊಂದಿಗೆ ಮಾತನಾಡದೆ ಅವರು ಕೇಳಿದ ಕಡೆ ಹೋಗಲು ಹೇಗೆ ಸಾಧ್ಯ ಎಂದು ಅವರು ಪ್ರಶ್ನೆ ಮಾಡುತ್ತಾರೆ.

ಸಹಾಯವಾಣಿಗೆ ಕರೆ ಮಾಡಿ
ಆಟೋ ಚಾಲಕರು ಬಾಡಿಗೆ ಬರಲು ನಿರಾಕರಿಸಿದರೆ, ಮೀಟರ್‌ ಹಾಕಲು ನಿರಾಕರಿಸಿದರೆ ಅಥವಾ ಮೀಟರ್‌ ಮೊತ್ತಕ್ಕಿಂತಲೂ ಹೆಚ್ಚು ಬಾಡಿಗೆ ಕೇಳಿದರೆ ಇಲ್ಲವೇ ಆಟೋ ಚಾಲಕರಿಂದ ಯಾವುದೇ ರೀತಿಯ ತೊಂದರೆ ಎದುರಾದರೆ, ಪ್ರಯಾಣಿಕರು ಸಹಾಯವಾಣಿ: 080- 22868444/22868550 ಕ್ಕೆ ಕರೆ ಮಾಡಿ ದೂರು ನೀಡಬಹುದು.

ದೂರುಗಳು ದಾಖಲಾದಂತೆಲ್ಲ ಕಾರ್ಯಾಚರಣೆ ನಡೆಸಲಾಗುವುದು. ದಂಡ ವಿಧಿಸುವುದರ ಜತೆಗೆ ಮುಂದಿನ ಕ್ರಮದ ಬಗ್ಗೆ ಸಾರಿಗೆ ಇಲಾಖೆ ಅಧಿಕಾರಿಗಳ ಜತೆ ಚರ್ಚಿಸಿ ತೀರ್ಮಾನಿಸುತ್ತೇವೆ.
ಜಗದೀಶ್‌, ಪೂರ್ವ ಸಂಚಾರ ವಿಭಾಗದ ಡಿಸಿಪಿ

— ಹಿತೇಶ್ ವೈ.

Advertisement

Udayavani is now on Telegram. Click here to join our channel and stay updated with the latest news.

Next