Advertisement

ಬೆಂಗಳೂರು ಉತ್ತರ ವಿವಿಗೆ ಕೋಲಾರದಲ್ಲಿ ಇಂದು ಚಾಲನೆ

11:43 AM Sep 20, 2017 | |

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯವನ್ನು ಮೂರು ವಿಭಾಗಗಳಾಗಿ ವಿಂಗಡಿಸಿದ ನಂತರ ಹೊಸದಾಗಿ ಹುಟ್ಟಿಕೊಂಡಿರುವ ಬೆಂಗಳೂರು ಉತ್ತರ ವಿವಿಯ ಉದ್ಘಾಟನೆ ಸೆ.20ರಂದು ಕೋಲಾರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ನೆರವೇರಲಿದೆ. 

Advertisement

ಬೆಂಗಳೂರು ವಿವಿಯ ಕೇಂದ್ರ ಕಚೇರಿಯನ್ನು ಜ್ಞಾನಭಾರತಿ ಕ್ಯಾಂಪಸ್‌ನಲ್ಲೇ ಉಳಿಸಿಕೊಂಡು, ಸೆಂಟ್ರಲ್‌ ವಿವಿಯ ಆಡಳಿತ ಕಚೇರಿ ಸೆಂಟ್ರಲ್‌ ಕಾಲೇಜಿನ ಆವರಣದಲ್ಲಿ ಮತ್ತು ಉತ್ತರ ವಿವಿಯ ಕೇಂದ್ರ ಕಚೇರಿಯನ್ನು ಕೋಲಾರದ ಟಮಕದಲ್ಲಿ ತೆರೆಯಲು ಈಗಾಗಲೇ ನಿರ್ಧರಿಸಲಾಗಿದೆ. 

ಬೆಂಗಳೂರು ಸೆಂಟ್ರಲ್‌ ವಿವಿಯ ವಿಶೇಷಾಧಿಕಾರಿಯಾಗಿದ್ದ ಪ್ರೊ.ಜಾಫೆಟ್‌ ಹಾಗೂ ಉತ್ತರ ವಿವಿಯ ವಿಶೇಷಾಧಿಕಾರಿಯಾಗಿದ್ದ ಪ್ರೊ. ಟಿ.ಡಿ.ಕೆಂಪರಾಜು ಅವರನ್ನೇ ಈ ಎರಡು ವಿಶ್ವವಿದ್ಯಾಲಯಕ್ಕೆ ಕುಲಪತಿಯಾಗಿ ನೇಮಿಸಿ ಸರ್ಕಾರ ಆದೇಶ ಹೊರಡಿಸಿತ್ತು. ಅನುದಾನ ಸೇರಿದಂತೆ ಪ್ರಾಧ್ಯಾಪಕರ ನಿಯೋಜನೆ, ಸಿಬ್ಬಂದಿ ಹಂಚಿಕೆ ಇತ್ಯಾದಿ ಯಾವುದನ್ನು ಸರ್ಕಾರ ಮಾಡಿಲ್ಲ.

ಎರಡು ಹೊಸ ವಿವಿಯಿಂದಲೂ ಶೈಕ್ಷಣಿಕ ಚಟುವಟಿಕೆ ಆರಂಭ ಸೇರಿದಂತೆ ವಿವಿಧ ಆಡಳಿತಾತ್ಮಕ ಕಾರ್ಯಕ್ಕೆ 100 ಕೋಟಿಯಷ್ಟು ಅನುದಾನ ಕೋರಿ ಪ್ರತ್ಯೇಕ ಪ್ರಸ್ತಾವನೆ ಸಲ್ಲಿಸಲಾಗಿದೆ. ಸರ್ಕಾರದಿಂದ ಅನುದಾನ ಬಿಡುಗಡೆಯಾಗಿಲ್ಲ. ಬದಲಿಗೆ  ಬೆಂಗಳೂರು ವಿವಿಯಿಂದಲೇ ಹಣಕಾಸು ವ್ಯವಸ್ಥೆ ಮಾಡುವಂತೆ ನಿರ್ದೇಶಿಸಿದೆ.

ಉತ್ತರ ವಿವಿಯ ವ್ಯಾಪ್ತಿ 
ವಿವಿ ವ್ಯಾಪ್ತಿಯಲ್ಲಿ 684 ಕಾಲೇಜುಗಳು ಬರಲಿದೆ. 50 ಹೊಸ ಕಾಲೇಜು ಸೇರಿಕೊಳ್ಳುವ ಸಾಧ್ಯತೆ ಇದೆ. ಶ್ರೀನಿವಾಸಪುರ, ಮುಳಬಾಗಿಲು, ಕೆಜಿಎಫ್ , ಬಂಗಾರ ಪೇಟೆ, ಮಾಲೂರು, ಕೆ.ಆರ್‌.ಪುರ, ಪುಲಕೇಶಿನಗರ, ಸರ್ವಜ್ಞ ನಗರ, ಸಿ.ವಿ.ರಾಮನ್‌ ನಗರ, ಮಹದೇವಪುರ, ಗೌರಿಬಿದನೂರು, ಬಾಗೇಪಳ್ಳಿ, ಚಿಕ್ಕಬಳ್ಳಾಪುರ, ಶಿಡ್ಲಘಟ್ಟ, ಚಿಂತಾಮಣಿ, ದೇವನಹಳ್ಳಿ, ದೊಡ್ಡಬಳ್ಳಾಪುರ ಹಾಗೂ ಹೊಸಪೇಟೆ ವಿಧಾನಸಭಾ ಕ್ಷೇತ್ರದ 200ಕ್ಕೂ ಅಧಿಕ ಕಾಲೇಜುಗಳು ಹಾಗೂ ಕೋಲಾರ ಸ್ನಾತಕೋತ್ತರ ಕೇಂದ್ರವು ಬೆಂಗಳೂರು ಉತ್ತರ ವಿವಿಯ ವ್ಯಾಪ್ತಿಗೆ ಬರಲಿದೆ.

Advertisement

ಕಟ್ಟಡ ಉದ್ಘಾಟನೆ
ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕಟ್ಟಡ ಉದ್ಘಾಟನೆಯನ್ನು ಸೆ.20ರ ಬೆಳಗ್ಗೆ 11 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೆರವೇರಿಸಲಿದ್ದಾರೆ. ಕೋಲಾರದ ಜಿಲ್ಲಾಧಿಕಾರಿಯವರ ನೂತನ ಕಚೇರಿಯ ಆವರಣದಲ್ಲೇ ಉತ್ತರ ವಿವಿಯ ಉದ್ಘಾಟನೆ ಸಮಾರಂಭ ನಡೆಯಲಿದೆ. ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌, ಕೇಂದ್ರ ಕಾರ್ಯಕ್ರಮ ಅನುಷ್ಠಾನ ಸಚಿವ ಡಿ.ವಿ.ಸದಾನಂದಗೌಡ, ರಾಜ್ಯ ಸಚಿವರಾದ ರಮೇಶ್‌ ಕುಮಾರ್‌, ಬಸವರಾಜ ರಾಯರೆಡ್ಡಿ, ರಾಮಲಿಂಗಾರೆಡ್ಡಿ, ಕೆ.ಜೆ.ಜಾರ್ಜ್‌, ಕುಲಪತಿ ಪ್ರೊ.ಟಿ.ಡಿ.ಕೆಂಪರಾಜು, ಕುಲಸಚಿವ ಪ್ರೊ.ಎಂ.ಎಸ್‌.ರೆಡ್ಡಿ, ಮೌಲ್ಯಮಾಪನ ಕುಲಸಚಿವ ಪ್ರೊ.ಸುಂದರ್‌ ರಾಜ್‌ ಅರಸ್‌ ಮೊದಲಾದವರು ಭಾಗವಹಿಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next