ಬೆಂಗಳೂರು: ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ ಆಶ್ರಯದಲ್ಲಿ 21ನೇ ಆವೃತ್ತಿಯ ಬೆಂಗಳೂರು ಟೆಕ್ ಸಮ್ಮಿಟ್ ನ.29ರಿಂದ ಡಿ.1ರವರೆಗೆ ಬೆಂಗಳೂರು ಅರಮನೆಯಲ್ಲಿ ನಡೆಯಲಿದೆ.
ಮೂರು ದಿನದ ಸಮ್ಮೇಳನದಲ್ಲಿ ರಾಜ್ಯ, ರಾಷ್ಟ್ರದ ಪ್ರತಿನಿಧಿಗಳು ಸೇರಿದಂತೆ 10 ರಾಷ್ಟ್ರಗಳ ಪ್ರತಿನಿಧಿಗಳು ಪಾಲ್ಗೊಳ್ಳುತ್ತಿದ್ದಾರೆ. ಒಟ್ಟು 250ಕ್ಕೂ ಹೆಚ್ಚು ತಜ್ಞರು, 3,500ಕ್ಕೂ ಅಧಿಕ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. 300ಕ್ಕೂ ಹೆಚ್ಚು ಪ್ರದರ್ಶಕರು ಪಾಲ್ಗೊಳ್ಳಲಿರುವ ಸಮ್ಮೇಳನದಲ್ಲಿ ಕೈಗಾರಿಕಾ ವಲಯದಿಂದ 11,000ಕ್ಕೂ ಹೆಚ್ಚು ಮಂದಿ ವೀಕ್ಷಕರು ಭೇಟಿ ನೀಡುವ ನಿರೀಕ್ಷೆ ಇದೆ.
ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಟೆಲಿಕಾಂ, ಬ್ಲಾಕ್‌ಚೈನ್, ಸೈಬರ್ ಸುರಕ್ಷತೆ, ರೊಬೋಟಿಕ್ಸ್, ಇಂಟೆಲಿಜೆಂಟ್ ಆ್ಯಪ್ಸ್ ಆ್ಯಂಡ್ ಅನಾಲಿಟಿಕ್ಸ್ ತಂತ್ರಜ್ಞಾನಗಳ ಕುರಿತು ಚರ್ಚೆ ನಡೆಯಲಿದೆ.
ಜೈವಿಕ ತಂತ್ರಜ್ಞಾನಕ್ಕೆ ಸಂಬಂಧಪಟ್ಟಂತೆ ಬಯೋಫಾರ್ಮಾ, ಅಗ್ರಿ ಟೆಕ್ನಾಲಜಿ, ಬಯೋ ಸರ್ವಿಸ್, ಬಯೋ ಇಂಡಸ್ಟ್ರಿಯಲ್, ಬಯೋ ಇನ್‌ಫರ್ಮೇಟಿಕ್ಸ್, ಬಯೋ ಎನರ್ಜಿ ಆ್ಯಂಡ್ ಬಯೋ ಫುಯೆಲ್ ಕುರಿತು ಸಮ್ಮೇಳನದಲ್ಲಿ ವಿಚಾರ ಮಂಥನ ನಡೆಯಲಿದೆ. ನವೋದ್ಯಮ ಉತ್ಪನ್ನಗಳು, ಪ್ರಯೋಗಗಳ ಪ್ರದರ್ಶನಕ್ಕೆ ಪ್ರತ್ಯೇಕ ಜಾಗವನ್ನು ಮೀಸಲಿಡಲಾಗಿದೆ.
ಬೆಂಗಳೂರು ಟೆಕ್ ಸಮ್ಮಿಟ್ ಕುರಿತು ಶುಕ್ರವಾರ ಮಾಹಿತಿ ನೀಡಿದ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತ, “ಇನ್ನೋವೇಶನ್ ಹಾಗೂ ಇಂಪ್ಯಾಕ್ಟ್’ ಪರಿಕಲ್ಪನೆಯಡಿ ಟೆಕ್ ಸಮ್ಮಿಟ್ ಆಯೋಜನೆಯಾಗಿದೆ. ಮುಖ್ಯವಾಗಿ ಹೊಸದಾಗಿ ಬೆಳೆಯುತ್ತಿರುವ ತಂತ್ರಜ್ಞಾನಗಳು, ಸ್ಟಾರ್ಟ್‌ಅಪ್‌ಗ್ಳಿಗೆ ಪೂರಕ ವಾತಾವರಣ ಹಾಗೂ ಜಾಗತಿಕ ಸಂಸ್ಥೆಗಳೊಂದಿಗೆ ಒಡಂಬಡಿಕೆ ಅಂಶ ಆಧಾರಿತವಾಗಿ ಸಮ್ಮೇಳನ ನಡೆಯಲಿದೆ ಎಂದು ಹೇಳಿದರು.
ಕಳೆದ ವರ್ಷ ನಡೆದ 20ನೇ ಆವೃತ್ತಿಯ ಟೆಕ್ ಸಮ್ಮಿಟ್‌ನಲ್ಲಿ ನಾನಾ ಕಂಪನಿಗಳು ರಾಜ್ಯ ಸರ್ಕಾರದೊಂದಿಗೆ ಸುಮಾರು 8 ಒಡಂಬಡಿಕೆ ಮಾಡಿಕೊಂಡಿದ್ದವು. ಇದರಲ್ಲಿ ಬಹುಪಾಲು ಪ್ರಾಯೋಗಿಕ ಯೋಜನೆಗಳೆನಿಸಿವೆ. ಸುಗಮ ಸಾರಿಗೆಗಾಗಿ ಹೈಪರ್‌ಲೂಪ್ ರೈಲು ತಂತ್ರಜ್ಞಾನ ಪ್ರಯೋಗಕ್ಕೆ ಒಡಂಬಡಿಕೆಯಾಗಿತ್ತು. ಈ ಪ್ರಯೋಗಕ್ಕೆ ಸಿದ್ಧತೆ ನಡೆದಿದೆ ಎಂದು ತಿಳಿಸಿದರು.
ಕರ್ನಾಟಕ ಐಟಿ ವಿಷನ್ ಗ್ರೂಪ್ ಅಧ್ಯಕ್ಷ ಕ್ರಿಸ್ ಗೋಪಾಲಕೃಷ್ಣನ್, ಸಾಫ್ಟ್ವೇರ್ ಟೆಕ್ನಾಲಜಿ ಪಾರ್ಕ್ಸ್ ಆಫ್ ಇಂಡಿಯಾ ನಿರ್ದೇಶಕ ಶೈಲೇಂದ್ರ ಕುಮಾರ್ ತ್ಯಾಗಿ, ಮೈಂಡ್ ಟ್ರೀ ಸಿಇಒ ಕೃಷ್ಣಕುಮಾರ್ ನಟರಾಜನ್ ಉಪಸ್ಥಿತರಿದ್ದರು.