Advertisement
ನಾನು ಬೆಂಗಳೂರಿಗೆ ಹೊಸಬಳಲ್ಲ. ಆದರೂ ಅದೇಕೋ ಈ ಮುಂಚೆ ಕಂಡಿದ್ದ ಬೆಂಗಳೂರು ಈ ಬಾರಿ ಅನೇಕ ವಿಶೇಷ ಅನುಭವಗಳೊಂದಿಗೆ ಕಾಣತೊಡಗಿದೆ. ನನ್ನೂರಿನಲ್ಲಿ ಹೆಣ್ಣು ಗಂಡೆಂಬ ಬೇಧವಿಲ್ಲ. ಉದಾಹರಣೆಗೆ ಬಸ್ಸಿನಲ್ಲಿ ಚಲಿಸುವಾಗ ಹೆಣ್ಣು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿದ್ದರೂ, ಗಂಡಸರೇ ಹೆಚ್ಚು ಸೀಟಿನಲ್ಲಿ ಕುಳಿತಿರುತ್ತಾರೆ. ಅಲ್ಲಿ ಯಾವುದೇ ಮೀಸಲಾತಿಯಿಲ್ಲ. ಆದರೆ ಇಲ್ಲಿ ಬಸ್ಸಿನಲ್ಲಿ ಮುಂದಿನ ಸೀಟುಗಳು ಮಹಿಳೆಯರಿಗೆ ಮೀಸಲು. ಅಂದರೆ ಹೆಣ್ಣನ್ನು ಗೌರವಿಸುವವರು ಇಲ್ಲಿರುವವರು ಎಂದು ತಿಳಿದು ಸಂತಸಪಟ್ಟಿದ್ದು ನಿಜ.
Related Articles
Advertisement
ನಾವು ಮನುಷ್ಯರು, ಸಾಮಾನ್ಯವಾಗಿ ದಿನವೂ ಒಂದೊಂದು ಆಲೋಚನೆಗಳಲ್ಲಿ ಮುಳುಗಿರುತ್ತೇವೆ. ಆಗ ಮುಖದ ಭಾವವೂ ಬದಲಾಗಿರುತ್ತದೆ. ಆದರೆ ಬೆಂಗಳೂರಿನಲ್ಲಿ ಎಲ್ಲರ ಮುಖದ ಭಾವವೂ ಒಂದೇ ರೀತಿ. ಯಾರು ಬೇಜಾರಿನಲ್ಲಿದ್ದಾರೆ? ಯಾರು ದುಃಖದಲ್ಲಿದ್ದಾರೆ? ಯಾರು ಕಷ್ಟದಲ್ಲಿದ್ದಾರೆ? ಎಂದು ತಿಳಿಯಲು ಸಾಧ್ಯವೇ ಇಲ್ಲ. ಅವರ ಮುಖದ ಭಾವಗಳು ಅದನ್ನು ವ್ಯಕ್ತಪಡಿಸುವಂತಿರುವುದಿಲ್ಲ. ನಾನೊಬ್ಬಳು ಮಾತ್ರ ಆಕಾಶ ತಲೆ ಮೇಲೆ ಬಿದ್ದಂತೆ ಸಪ್ಪಗಿದ್ದೇನೆ ಎಂದು ಮನವರಿಕೆಯಾದದ್ದು ಆಗಲೇ.
ನನ್ನೂರಿನಲ್ಲಿದ್ದಾಗ ದಿನಕ್ಕೆ ಎಷ್ಟು ದುಡ್ಡು ಖರ್ಚು ಮಾಡುತ್ತಿದ್ದೆನೋ ನೆನಪಿಲ್ಲ. ಆದರೆ ಇಲ್ಲಿ ಮಾತ್ರ ಪರ್ಸು ತೆಗೆದರೆ ದುಡ್ಡು ಖಾಲಿಯಾಗಿ ಬಿಡುತ್ತದೆ. ಹಾಗಾಗಿ, ದಿನಕ್ಕೊಮ್ಮೆಯೂ ಪರ್ಸಿನ ಮುಖ ನೋಡಬಾರದೆಂದು ನಿರ್ಧರಿಸಿದ್ದೇನೆ.
ನಾನಿಲ್ಲಿ ಕಲಿಯುವುದು, ತಿಳಿಯುವುದು ಬಹಳಷ್ಟಿದೆ ಅಂತ ಗೊತ್ತಿದೆ. ಹೊಸ ಅನುಭವಗಳಿಗಾಗಿ ಕಾಯುತ್ತಿದ್ದೇನೆ. ನಿಜಕ್ಕೂ ಬೆಂಗಳೂರೆಂಬುದು ಮಾಯಾಲೋಕವೇ ಸರಿ! ಒಳಹೊಕ್ಕಿದ್ದಾಗಿದೆ. ಇನ್ನೇನಿದ್ದರೂ ಇಲ್ಲಿ ಬದುಕಲು ಕಲಿಯಬೇಕು.
– ಕಾವ್ಯ ಸಹ್ಯಾದ್ರಿ