ಬೆಂಗಳೂರು: “ಬಿಜೆಪಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಶಸ್ತ್ರಾಸ್ತ್ರ ಹೊಂದಿರುವ ಕಟ್ಟರ್ ಹಿಂದುತ್ವವಾದಿಗೆ ಟಿಕೆಟ್ ನೀಡಿದೆ’ ಎಂದು ಕೇಂದ್ರದ ಮಾಜಿ
ಸಚಿವೆ ಮಾರ್ಗರೇಟ್ ಆಳ್ವಾ ಆರೋಪಿಸಿದ್ದಾರೆ.
ಪಕ್ಷದ ಕಚೇರಿಯಲ್ಲಿ ಏರ್ಪಡಿಸಿದ್ದ “ಮಹಿಳಾ ಕಾಂಗ್ರೆಸ್ ನಡಿಗೆ ಮತದಾರರ ಬಳಿಗೆ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬಿಜೆಪಿಯವರು ಅನಂತಕುಮಾರ್ ಪತ್ನಿಗೆ ಟಿಕೆಟ್ ನೀಡಬಹುದಿತ್ತು. ಅವರ ಬದಲು ಉಗ್ರ ಹಿಂದುತ್ವವಾದ ಪ್ರತಿಪಾದಿಸುವ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ತಮ್ಮನಂತಿರುವ ತೇಜಸ್ವಿ ಸೂರ್ಯನಿಗೆ ಟಿಕೆಟ್ ನೀಡಿದ್ದಾರೆ ಎಂದರು.
ಬಿಜೆಪಿಯವರು ಮಂಡ್ಯದಲ್ಲಿ ಸುಮಲತಾ ಅಂಬರೀಶ್ ಅವರಿಗೆ ಬೆಂಬಲ ನೀಡಿದ್ದಾರೆ. ಆದರೆ, ಬೆಂಗಳೂರು ದಕ್ಷಿಣದಲ್ಲಿ ತಮ್ಮದೇ ಪಕ್ಷದ ಮಹಿಳೆಯನ್ನು ಏಕೆ ಬೆಂಬಲಿಸಲಿಲ್ಲ. ತೇಜಸ್ವಿನಿ ಅನಂತಕುಮಾರ್ ಸಾಕಷ್ಟು ಸಮಾಜ ಸೇವೆ ಮಾಡಿದ್ದಾರೆ. ಅವರಿಗೆ ಟಿಕೆಟ್ ತಪ್ಪಿಸಿ ಉಗ್ರ ಹಿಂದುತ್ವ ಪ್ರತಿಪಾದಿಸುವ ಯುವಕನಿಗೆ ನೀಡಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಸಂಸದ ಅನಂತಕುಮಾರ್ ಹೆಗಡೆ ವಿರುದ್ಧ 36 ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ನನಗೆ ಮುಸ್ಲಿಂ, ಕ್ರೈಸ್ತರ ಮತ ಬೇಡ, ಹಿಂದೂಗಳ ಮತ ಮಾತ್ರ ಬೇಕು ಎನ್ನುತ್ತಾರೆ. ಪ್ರಚೋದನಕಾರಿ ಹೇಳಿಕೆ ನೀಡುವ ಇಂತವರನ್ನು ಬೆಂಬಲಿಸಿದರೆ, ದೇಶದ ಸ್ಥಿತಿ ಏನಾಗುತ್ತದೆ ಎಂದು ನಾವೆಲ್ಲರೂ ಅರಿತುಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ.ಪುಷ್ಪಾ ಅಮರನಾಥ್,
ಬಿಬಿಎಂಪಿ ಮೇಯರ್ ಗಂಗಾಬಿಕಾ ಮಲ್ಲಿಕಾರ್ಜುನ್ ಹಾಜರಿದ್ದರು.