Advertisement

ಮೂರು ವರ್ಷಗಳಲ್ಲಿ ಬೆಂಗಳೂರು ಕೊಳೆಗೇರಿ ಮುಕ್ತ: ವಿ.ಸೋಮಣ್ಣ

07:22 PM Jan 20, 2020 | Sriram |

ಬೆಂಗಳೂರು:ಮುಂದಿನ ಮೂರು ವರ್ಷಗಳಲ್ಲಿ ಬೆಂಗಳೂರು ನಗರವನ್ನು ಕೊಳೆಗೇರಿ ಮುಕ್ತ ಮಾಡಲಾಗುವುದು ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.

Advertisement

ವಿಧಾನಸೌಧದಲ್ಲಿ ಮುಖ್ಯಮಂತ್ರಿಯವರು ಒಂದು ಲಕ್ಷ ಮನೆ ನಿರ್ಮಾಣ ಯೋಜನೆ ಸಂಬಂಧ ನಗರದ ಶಾಸಕರು-ಸಂಸದರ ಸಭೆ ನಡೆಸಿದ ಅವರು, ಕೊಳೆಗೇರಿಗಳಲ್ಲಿರುವ ನಿವಾಸಿಗಳಿಗೆ ಮೂಲಸೌಕರ್ಯ ಸಹಿತ ಗುಂಪು ಅಥವಾ ಒಂಟಿ ಮನೆ ನಿರ್ಮಿಸಿಕೊಟ್ಟು ಕೊಳೆಗೇರಿ ಮುಕ್ತ ಮಾಡಲಾಗುವುದು ಎಂದು ಹೇಳಿದರು.

ಒಂದು ಲಕ್ಷ ಮನೆ ನಿರ್ಮಾಣ ಯೋಜನೆಗೆ 46 ಸಾವಿರ ಅರ್ಜಿಗಳು ಬಂದಿವೆ. ಫ‌ಲಾನುಭವಿ ಕಡೆಯಿಂದ ಪಾವತಿಸಬೇಕಾದ ಮೊತ್ತ ಕಡಿಮೆ ಮಾಡಬೇಕು ಎಂಬ ಸಲಹೆ ಬಂದಿದ್ದು ಆ ಬಗ್ಗೆ ಪರಿಶೀಲಿಸಲಾಗುವುದು ಎಂದು ತಿಳಿಸಿದರು.

ದಾಸರಹಳ್ಳಿ, ಯಲಹಂಕ, ಮಹದೇವಪುರ, ಬ್ಯಾಟರಾಯನಪುರ, ಬೆಂಗಳೂರು ದಕ್ಷಿಣ, ಯಶವಂತಪುರ, ಕೆ.ಆರ್‌.ಪುರ ಕ್ಷೇತ್ರಗಳಲ್ಲಿ ಶಾಸಕರು ಸಮೂಹ ಮನೆ ನಿರ್ಮಾಣ ಯೋಜನೆಗೆ ಸೂಕ್ತ ಜಮೀನು ಗುರುತಿಸಿ ಕೊಟ್ಟರೆ ಅನುಷ್ಟಾನಕ್ಕೆ ಅನುಕೂಲವಾಗುತ್ತದೆ. ಆಯಾ ಕ್ಷೇತ್ರದ ಬಡವರಿಗೆ ಶೇ.50 ರಷ್ಟು ಮನೆ ಮೀಸಲಿಡಲಾಗುವುದು ಎಂದು ಹೇಳಿದರು.

ಮುಖ್ಯಮಂತ್ರಿಯವರ ಒಂದು ಲಕ್ಷ ಮನೆ ನಿರ್ಮಾಣ ಯೋಜನೆಗೆ ಪ್ರಾರಂಭಿಕವಾಗಿ ಫ‌ಲಾನುಭವಿ 1 ಲಕ್ಷ ರೂ. ನೀಡಬೇಕು ಎಂದು ಹೇಳಲಾಗಿತ್ತು. ಹೀಗಾಗಿ, 46 ಸಾವಿರ ಅರ್ಜಿ ಬಂದಿದೆ. ಆ ಮೊತ್ತ 2 ಲಕ್ಷ ರೂ. ಅಥವಾ ಇನ್ನೂ ಹೆಚ್ಚು ಎಂದರೆ ಯಾರೂ ಮುಂದೆ ಬರುವುದಿಲ್ಲ ಎಂದು ಕೃಷ್ಣ ಬೈರೇಗೌಡರು ಅಭಿಪ್ರಾಯಪಟ್ಟರು.

Advertisement

ಪ್ರಸ್ತುತ ಯೋಜನೆಗೆ ತಮ್ಮ ಕ್ಷೇತ್ರದಲ್ಲಿ ಗುರುತಿಸಿರುವ ಜಾಗಕ್ಕಿಂತ ಉತ್ತಮ ಜಾಗ ಇದೆ. ರಸ್ತೆ ಸೇರಿ ಮೂಲಸೌಕರ್ಯ ಇರುವ ಕಡೆ ಮನೆ ನಿರ್ಮಿಸಿದರೆ ಸೂಕ್ತ ಎಂದು ಹೇಳಿದರು.

ಬೆಂಗಳೂರಿನಲ್ಲಿ ಜಾಗದ ಸಮಸ್ಯೆ ಇರುವುದರಿಂದ ನಿವೇಶನದ ಬದಲಿಗೆ ಗುಂಪು ಮನೆ ನಿರ್ಮಿಸಿಕೊಡುವುದು ಸೂಕ್ತ.ನಿವೇಶನ ಕೊಟ್ಟರೆ ನಾವು ಜನಪ್ರತಿನಿಧಿಗಳು ನಮ್ಮ ಬೆಂಬಲಿಗರಿಗೆ ಹಂಚಿಕೆ ಮಾಡುತ್ತೇವೆ. ಗುಂಪು ಮನೆ ಕೊಟ್ಟರೆ ಅಗತ್ಯ ಇರುವವರಿಗೆ ತಲುಪುತ್ತದೆ ಎಂದು ಅಭಿಪ್ರಾಯಪಟ್ಟರು.

ಸಂಸದ ಡಿ.ಕೆ.ಸುರೇಶ್‌, ಮಾಜಿ ಸಚಿವ ರಾಮಲಿಂಗಾರೆಡ್ಡಿ, ಶಾಸಕರಾದ ಉದಯ ಗರುಡಾಚಾರ್‌, ಸೌಮ್ಯರೆಡ್ಡಿ, ಸತೀಶ್‌ ರೆಡ್ಡಿ, ಗೋಪಾಲಯ್ಯ, ಮಂಜುನಾಥ್‌, ಅರ್ಷದ್‌ ರಿಜ್ವಾನ್‌ ತಮ್ಮ ಸಲಹೆ ನೀಡಿದರು.

ಬಿಬಿಎಂಪಿ, ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ನೆರವು ಪಡೆದು ಬಡವರಿಗೆ ಉತ್ತಮ ಗುಣಮಟ್ಟದ ಮನೆಗಳನ್ನು ನಿರ್ಮಿಸಿಕೊಡಬೇಕು. ನಿವೇಶನ ಇದ್ದರೆ ಒಂಟಿ ಮನೆ ಕಟ್ಟಿಕೊಳ್ಳಲು ಆರ್ಥಿಕ ನೆರವು ನೀಡಬೇಕು. ಶಾಸಕರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ವಸತಿ ರಹಿತರ ಪಟ್ಟಿ ಮಾಡಿ ನೀಡಿ ಎಂದು ಸಚಿವ ಸೋಮಣ್ಣ ಅವರು ಹೇಳಿದರು.
ವಸತಿ ಇಲಾಖೆ , ರಾಜೀವ್‌ಗಾಂಧಿ ವಸತಿ ನಿಗಮದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next