ಬೆಂಗಳೂರು: ಕಳೆದ ಎರಡು-ಮೂರು ವರ್ಷಗಳಲ್ಲಿ ಕೊರೊನಾ ಭೀತಿಯಿಂದಾಗಿ ಗಣೇಶೋತ್ಸವ ಕಳೆ ಗುಂದಿತ್ತು. ಆದರೆ, ಈ ಬಾರಿ ಗಣೇಶ ಚತುರ್ಥಿಯನ್ನು ವಿಜೃಂಭಣೆಯಿಂದ ಆಚರಿಸಲು ರಾಜಧಾನಿ ಸಜ್ಜುಗೊಳ್ಳುತ್ತಿದೆ.
ಸಿಲಿಕಾನ್ ಸಿಟಿ ಬೆಂಗಳೂರಿನೆಲ್ಲೆಡೆ ಪರಿಸರ ಸ್ನೇಹಿ, ಕಲರ್ ಕಲರ್ ಗಣೇಶ ಮೂರ್ತಿಗಳ ಭರ್ಜರಿ ಮಾರಾಟ ನಡೆಯುತ್ತಿದೆ. ಒಂದೆಡೆ ಪರಿಸರ ವಿನಾಶಕಾರಿ ಪಿಒಪಿ ಗಣೇಶಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದರೂ, ಬಹುತೇಕ ಮಂದಿ ಪರಿಸರ ಸ್ನೇಹಿ ಮಣ್ಣಿನ ಗಣಪತಿಗಳ ಕಡೆ ಹೆಚ್ಚಿನ ಒಲವು ತೋರಿಸುತ್ತಿದ್ದಾರೆ.
ನಗರದಲ್ಲಿ ಬಡಾವಣೆ ಅಥವಾ ಗಲ್ಲಿಗೊಂದು ಗಣೇಶನ ಮೂರ್ತಿ ಪ್ರತಿಷ್ಠಾಪನೆಗೆ ಸಂಘ ಸಂಸ್ಥೆಗಳು, ಗೆಳೆಯರ ಬಳಗಗಳು ಸಜ್ಜಾಗಿದ್ದು, ಬೃಹತ್ ಗಣಪತಿ ಮೂರ್ತಿಯನ್ನು ಕೂರಿಸಿ, ಅದ್ಧೂರಿಯಾಗಿ ಆಚರಿಸಲು ನಗರಾದ್ಯಂತ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಅಂತಹವರಲ್ಲಿ ವಿಶೇಷವಾಗಿ ಕಂಡಬಂದಿದ್ದು ಬಿಟಿಎಂ 1ನೇ ಸ್ಟೇಜ್‌ನಲ್ಲಿ ಪೂರ್ವ ಸಿದ್ಧತೆ ನಡೆಸುತ್ತಿರುವ ಶ್ರೀಗಜಾನನ ಗೆಳೆಯರ ಬಳಗ.
ಕೃಷಿ ಗಣಪ: ಈ ಬಳಗವು ಭಾರತೀಯತೆ, ಹಿಂದುತ್ವಕ್ಕೆ ಸಂಬಂಧಿಸಿದಂತೆ ಹಳ್ಳಿಮನೆ, ಇಂಡಿಯಾ ಗೇಟ್, ಅರಣ್ಯ ಹೀಗೆ 17 ವರ್ಷದಿಂದ ಪ್ರತಿವರ್ಷ ಒಂದೊಂದು ಮಾದರಿಯಲ್ಲಿ ಗಣೇಶನ ಮೂರ್ತಿ ಯನ್ನು ಪ್ರತಿಷ್ಠಾಪನೆ ಮಾಡುತ್ತಿದೆ. ಈ ಬಾರಿ ದೇಶದ ಬೆನ್ನೆಲುಬಾಗಿರುವ “ರೈತ’, ಪರಿಸರ ಅಭಿವೃದ್ಧಿಯನ್ನು ಮಾದರಿಯನ್ನಾಗಿ ಇಟ್ಟುಕೊಂಡು ಒಂದು ಕೈಯಲ್ಲಿ ನೇಗಿಲು, ಮತ್ತೂಂದು ಕೈಯಲ್ಲಿ ಭತ್ತದ ಪೈರು ಹಿಡಿದು, ಎತ್ತಿನ ಗಾಡಿಯಲ್ಲಿ ಬರುವ ಪರಿಸರ ಸ್ನೇಹಿ ಗಣೇಶನನ್ನು ವಿಶೇಷವಾಗಿ ಅಲಂಕರಿಸಲಾಗಿದೆ. ಬಿಟಿಎಂ 1ನೇ ಸ್ಟೇಜ್‌ನಲ್ಲಿ 60 ಅಡಿ ಜಾಗದಲ್ಲಿ ಚತುರ್ಥಿಯ ದಿನದಂದು ಪ್ರತಿಷ್ಠಾಪನೆ ಮಾಡಲಾಗುತ್ತದೆ.
ಸಸಿಗಳ ವಿತರಣೆ: ಗಣೇಶನನ್ನು ಪ್ರತಿಷ್ಠಾಪಿಸುವ ಪ್ರದೇಶದ ಸುತ್ತಲೂ ಸಸಿ ನೆಟ್ಟು, ಮೂರ್ತಿಯನ್ನು ನೋಡಲು ಬರುವ ಭಕ್ತರಿಗೆ ಒಂದೊಂದರಂತೆ ದಿನಕ್ಕೆ 500 ಸಸಿ ಉಚಿತವಾಗಿ ವಿತರಿಸಲಾಗುತ್ತದೆ. ಅಷ್ಟೇ ಅಲ್ಲದೇ, ಬಳಗದಲ್ಲಿರುವ 18 ಮಂದಿ ತಲಾ ಹತ್ತು ಸಸಿಯಂತೆ ಬಿಟಿಎಂ ಸುತ್ತಲಿನ ಪ್ರದೇಶದಲ್ಲಿ ನೆಟ್ಟು, ಆ ಸಸಿಗಳು ದೊಡ್ಡವಾಗುವವರೆಗೆ ಆರೈಕೆ ಮಾಡಲಾಗುತ್ತದೆ ಎಂದು ಶ್ರೀಗಜಾನನ ಗೆಳೆಯರ ಬಳಗದ ಅಧ್ಯಕ್ಷ ಮಹೇಶ್ ಬಾಬು ಹೇಳುತ್ತಾರೆ.
ಹರಳುಗಳಲ್ಲಿ ಅರಳಿದ ಗಣೇಶ :
ರಾಜಾಜಿನಗರ 2ನೇ ಹಂತದ ಮಿಲ್ಕ್ ಕಾಲೋನಿಯ 5ನೇ ಮುಖ್ಯ ರಸ್ತೆಯಲ್ಲಿ ಸ್ವಸ್ತಿಕ್ ಯುವಕರ ಸಂಘದಿಂದ 12 ಲಕ್ಷ ರೂ. ಮೌಲ್ಯದ ಅಮೆರಿಕನ್ ಡೈಮಂಡ್ ಹರಳುಗಳಿಂದ ತಯಾರಿಸಿದ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತಿದೆ. ಈ ಮೂರ್ತಿಯು 5.7 ಅಡಿ ಎತ್ತರವಿದ್ದು, 150 ಕೇಜಿ ತೂಕವನ್ನು ಹೊಂದಿದೆ. ಮುಖವೊಂದನ್ನು ಬಿಟ್ಟು ಉಳಿದಂತೆ ಎಲ್ಲ ಭಾಗವನ್ನು ಡೈಮಂಡ್ ಹರಳು, ನವರತ್ನ ಹರಳುಗಳಿಂದ ತಯಾರಿಸಲಾಗಿದೆ.
35 ವರ್ಷದಿಂದ ಯಾವುದೇ ರಸಾಯನಿಕ ಬಳಸದೇ, ಜೇಡಿ ಮಣ್ಣನ್ನು ತಂದು, ಕೈಯ ಲ್ಲಿಯೇ ಮೂರ್ತಿ ತಯಾರಿಸಲಾಗುತ್ತದೆ. 50 ರೂ.ನಿಂದ 3 ಸಾವಿರ ರೂ.ವರೆಗಿನ ಸಾವಿರಕ್ಕೂ ಹೆಚ್ಚು 25 ವಿಧದ ಮೂರ್ತಿ ತಯಾರಿಸಲಾಗಿದೆ. ಕೆ.ಆರ್.ಪುರಂ. ತಿಪ್ಪಸಂದ್ರ, ಕಲ್ಯಾಣ್ ನಗರ, ಕನಕಪುರ, ವೈಟ್‌ಫೀಲ್ಡ್‌ನಿಂದ ಬೇಡಿಕೆ ಇದೆ.
-ಸರಳ ಆನಂದ್, ಗಣೇಶ ಮೂರ್ತಿ ತಯಾರಕ.
ಪಿಒಪಿ ಗಣೇಶನ ಮೂರ್ತಿಗಳ ಮಾರಾಟದ ಬಗ್ಗೆ ಸುಮ್ಮನಿದ್ದ ಸರ್ಕಾರ ಈಗ ನಿರ್ಬಂಧ ಹೇರಿ, ಗೊಂದಲ ಸೃಷ್ಟಿ ಮಾಡಿದೆ. ಜತೆಗೆ ಜಪ್ತಿ ಮಾಡುತ್ತಿದೆ. ಇದರಿಂದಾಗಿ ಈಗಾಗಲೇ ಇರುವ ಕೆಲವು ಪಿಒಪಿ ಮೂರ್ತಿಗಳನ್ನು ಮಾರಾಟ ಮಾಡದೇ, ಸ್ಥಳಾಂತರಿಸಲಾಗುತ್ತದೆ.
-ಸಂತೋಷ್, ಗಣೇಶ ವಿಗ್ರಹಗಳ ಮಾರಾಟಗಾರರು.
-ಭಾರತಿ ಸಜ್ಜನ್