ಬೆಂಗಳೂರು: ಪಹರ ಪಡೆ ವಂದನಾ ಶಸ್ತ್ರ.. ಪಹರ ಪಡೆ ಕೆಳ ಶಸ್ತ್ರ.. ಹೀಗೆ ಇನ್ಮುಂದೆ ನಗರ ಪೊಲೀಸ್ ಇಲಾಖೆಯಲ್ಲಿ ಯಾವುದೇ ಪರೇಡ್ ಮತ್ತು ಗೌರವ ವಂದನಾ ಕಾರ್ಯಕ್ರಮದಲ್ಲಿ ಕನ್ನಡದಲ್ಲೇ ಕಮಾಂಡ್ ಕೇಳಿಬರಲಿದೆ. ಈ ಮೂಲಕ ಹಿಂದಿ ಕಮಾಂಡ್‌ಗೆ ನಗರ ಪೊಲೀಸರು ತಿಲಾಂಜಲಿ ಹಾಡಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಕನ್ನಡ ಕಮಾಂಡ್ ಮೂಲಕ ಗೌರವ ವಂದನೆ ಸ್ವೀಕರಿಸಿದ ವಿಡಿಯೋ ಹಂಚಿಕೊಂಡಿರುವ ನಗರ ಪೊಲೀಸ್ ಆಯಕ್ತ ಬಿ.ದಯಾ ನಂದ, ಕನ್ನಡದ ಮಾತು ಚಂದ, ಕನ್ನಡದ ಕಮಾಂಡ್‌ಗಳು ಇನ್ನು ಚಂದ. ಏನಂತಿರಾ? ಎಂದು ಟ್ವೀಟ್ ಮಾಡುವ ಮೂಲಕ ಕನ್ನಡ ಪ್ರೇಮ ಮೆರೆದಿದ್ದಾರೆ. ಇದಕ್ಕೆ ಸಾರ್ವಜನಿಕರಿಂದ ಭಾರೀ ಮೆಚ್ಚುಗೆ ಪಾತ್ರವಾಗಿದ್ದು, ಕನ್ನಡ ಪ್ರೇಮ ಮೆರೆದ ಪೊಲೀಸ್ ಆಯುಕ್ತರು ಎಂದೆಲ್ಲ ಗುಣಗಾನ ಮಾಡಿದ್ದಾರೆ.
ರಾಜ್ಯ ಪೊಲೀಸ್ ಇಲಾಖೆಯಲ್ಲಿ ಪರೇಡ್ ಅಥವಾ ಗೌರವ ವಂದನೆಯಲ್ಲಿ ಪೊಲೀಸರು ಹಿಂದಿಯಲ್ಲಿ ಕಮಾಂಡ್ ಮಾಡುವುದು ಸಾಮಾನ್ಯ. ಇದೀಗ ಹಳೆಯ ಸಂಪ್ರದಾಯದ ಬದಲಿಗೆ ಕನ್ನಡದಲ್ಲಿ ಕಮಾಂಡ್ ನೀಡುವಂತೆ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಆದೇಶಿಸಿದ್ದಾರೆ. ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಪೊಲೀಸ್ ಸಿಬ್ಬಂದಿ ಕನ್ನಡದಲ್ಲೇ ಕಮಾಂಡ್ ನೀಡುತ್ತಿದ್ದಾರೆ.
ವಿಡಿಯೋ ಹಂಚಿಕೊಂಡ ಆಯುಕ್ತರು: “ಕನ್ನಡ ಮಾತು ಚಂದ. ಕನ್ನಡದ ಕಮಾಂಡ್ ಇನ್ನು ಚೆಂದ. ಏನಂತಿರಾ? ಎಂದು ಕನ್ನಡದಲ್ಲೇ ಕಮಾಂಡ್ ನೀಡುತ್ತಿರುವ ವಿಡಿಯೋವನ್ನು 1 ನಿಮಿಷ 4 ಸೆಕೆಂಡ್‌ನ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಸಾವ್‌ಧಾನ್ ವಿಶ್ರಾಮ… ಎಂಬ ಕಮಾಂಡ್ ಬದಲಾಗಿ, “ಪಹರ ಪಡೆ ವಂದನಾ ಶಸ್ತ್ರ ಮತ್ತು ಪಹರ ಪಡೆ ಕೆಳ ಶಸ್ತ್ರ ಎಂಬ ಪದ ಬಳಕೆ ಮಾಡಲಾಗುತ್ತಿದೆ. ಹಾಗೆ ಮಾನ್ಯರೇ ಪಹರ ಪಡೆಯು ತಮ್ಮ ಪರಿವೀಕ್ಷಣೆಗೆ ಸಜ್ಜಾಗಿದೆ. ಪಹರ ಪಡೆ ಪಹರ ಹೊರತುಪಡಿಸಿ ಇನ್ನುಳಿದ ಪಹರ ಪಡೆ ಮೊದಲು ಶಸ್ತ್ರ. ಪಹರ ಪಡೆ ಪಹರ ಹೊರತುಪಡಿಸಿ ಇನ್ನುಳಿದ ಪಹರ ಪಡೆ ವಿಸರ್ಜನೆ’ ಎಂದು ಬಳಸಲಾಗುತ್ತಿದೆ.
ಕನ್ನಡ ರಾಜೋತ್ಸವಕ್ಕೆ ಒಂದು ತಿಂಗಳಿರುವಾಗಲೇ ಕನ್ನಡದಲ್ಲಿಯೇ ಕಮಾಂಡ್ ನೀಡಲಾಗುತ್ತಿದ್ದು, ಇದಕ್ಕೆ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ಯವಾಗುತ್ತಿದೆ. ಹಿಂದಿಯಲ್ಲಿ ಬಳಸುತ್ತಿದ್ದ ಕಮಾಂಡ್ ಪದಗಳನ್ನು ಈ ಹಿಂದೆಯೇ ಕನ್ನಡಕ್ಕೆ ಅನುವಾದ ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌವ. ಹೀಗಾಗಿ ಕನ್ನಡಲ್ಲೇ ಪೊಲೀಸ್ ಕಮಾಂಡ್ ಆಗಬೇಕು ಎಂದು ಕನ್ನಡಿಗ ಐಪಿಎಸ್ ಅಧಿಕಾರಿಗಳು ಹಿಂದಿನಿಂದಲೂ ಇಲಾಖೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ತರುತ್ತಿದ್ದರು. ಈ ಬೆನ್ನಲ್ಲೇ ಸಾಹಿತಿಯೂ ಆಗಿರುವ ಹಿರಿಯ ಐಪಿಎಸ್, ಅಧಿಕಾರಿ ಐಜಿಪಿ ಡಾ ಬಿ.ಆರ್.ರವಿಕಾಂತೇಗೌಡ ನೇತೃತ್ವದ ತಂಡ ಪೊಲೀಸ್ ಇಲಾಖೆಯ ಹಿಂದಿಯಲ್ಲಿ ಬಳಸುವ ಕಮಾಂಡ್ ಅನ್ನು ಕನ್ನಡಕ್ಕೆ ಅನುವಾದ ಮಾಡಿತ್ತು. ಅದನ್ನು ಪೊಲೀಸ್ ಇಲಾಖೆಗೆ ಸಲ್ಲಿಸಿತ್ತು.