ರಾಮನಗರ: ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ಅಡ್ಡಾದಿಟ್ಟಿ ಸಂಚರಿಸುವ, ವೇಗಮಿತಿ ಮೀರುವ ಚಾಲಕರಿಗೆ ಕಡಿವಾಣ ಹಾಕಲು ಪೊಲೀಸ್ ಇಲಾಖೆ ಮುಂದಾಗಿದ್ದು, ಕಳೆದ ನಾಲ್ಕು ದಿನಗಳಿಂದ ಪೊಲೀಸ್ ಸಿಬ್ಬಂದಿಗಳ ತಂಡ ಹೆದ್ದಾರಿಯಲ್ಲಿ ಕಣ್ಗಾವಲಿರಿಸಿದೆ. ಪರಿಣಾಮ ಇದುವರೆಗೆ ಅತಿವೇಗ ಸೇರಿದಂತೆ ಸಂಚಾರ ನಿಯಮ ಉಲ್ಲಂಘನೆ ಸಂಬಂಧ 489 ಪ್ರಕರಣಗಳನ್ನು ಜಿಲ್ಲಾ ಪೊಲೀಸರು ದಾಖಲಿಸಿದ್ದಾರೆ.
ಕಳೆದ ನಾಲ್ಕು ದಿನಗಳಲ್ಲಿ ಎಕ್ಸ್‌ಪ್ರೆಸ್ ವೇನಲ್ಲಿ ನಿಯಮ ಉಲ್ಲಂಘನೆ ಮಾಡಿ ಸಂಚಾರ ಮಾಡುವ ವಾಹನಗಳಿಂದ ಸಂಗ್ರಹಿಸಿರುವ ದಂಡದ ಮೊತ್ತ3.59 ಲಕ್ಷ ರೂ. ಆಗಿದ್ದು, ವಾರಾಂತ್ಯದ ದಿನಗಳಾದ ಶನಿವಾರ ಮತ್ತು ಭಾನುವಾರ ಈ ಮೊತ್ತ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ. ಅತಿವೇಗದ ಜೊತೆಗೆ ಹೆಲ್ಲೆಟ್ ರಹಿತದ್ವಿಚಕ್ರವಾಹನ ಚಾಲನೆ, ಸೀಟ್‌ಬೆಲ್ಟ್, ಲೈನ್ ಕ್ರಾಸ್ ಸೇರಿದಂತೆ ವಿವಿಧ ಸಂಚಾರಿ ನಿಯಮ ಉಲ್ಲಂಘನೆಯನ್ನು ಪರಿಗಣಿಸಿ ದಂಡ ವಿಧಿಸಲಾಗುತ್ತಿದೆ.
ಬೆಂ-ಮೈ ಎಕ್ಸ್‌ಪ್ರೆಸ್ ವೇನಲ್ಲಿ ಅಪಘಾತಗಳು ಹೆಚ್ಚಾಗಲು ಕಾರಣ ಅತಿವೇಗ ಮತ್ತು ವ್ಯಾಪಕವಾಗಿ ಸಂಚಾರ ನಿಯಮ ಉಲ್ಲಂಘನೆ ಮಾಡುವುದು ಎಂಬ ಸಂಗತಿ ಮನದಟ್ಟಾದ ಹಿನ್ನೆಲೆಯಲ್ಲಿ ವೇಗಮಿತಿಯ ಜೊತೆಗೆ ಸಂಚಾರ ನಿಯಮ ಉಲ್ಲಂಘನೆ ಮಾಡುವ ವಾಹನಗಳ ವಿರುದ್ಧ ಕ್ರಮಕ್ಕೆ ರಾಡಾರ್ ಗನ್ ಸಹಾಯದಿಂದ ದಂಡ ವಿಧಿಸಲು ಪೊಲೀಸ್ ಇಲಾಖೆ ಮುಂದಾಗಿತ್ತು. ಇದೀಗ ಜಿಲ್ಲೆಯ ನಾಲ್ಕು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಭರ್ಜರಿ ದಂಢ ವಿಧಿಸುವ ಮೂಲಕ ಜನರಲ್ಲಿ ಎಚ್ಚರಿಕೆ ಮೂಡಿಸಲು ಮುಂದಾಗಿದೆ.
ಓವರ್ ಸ್ವೀಡ್‌ಗೆ ಹೆಚ್ಚು ದಂಡ: ಪೊಲೀಸ್ ಇಲಾಖೆ ಎಕ್ಸ್‌ಪ್ರೆಸ್ ವೇನಲ್ಲಿ ಅತಿವೇಗದ ಚಾಲನೆ ಮತ್ತು ಲೈನ್ ನಿಯಮ ಉಲ್ಲಂಘನೆ ಪ್ರಕರಣಗಳಿಗೆ ಅತಿಹೆಚ್ಚಿನ ದಂಡ ವಿಧಿಸಿದೆ. ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳ ವೇಗದ ಮಿತಿಯನ್ನು 100 ಕಿ.ಮೀ ಎಂದು ನಿಗದಿ ಪಡಿಸಿದ್ದು, ಈ ವೇಗವನ್ನು ದಾಟಿದಲ್ಲಿ ದಂಡ ಕಟ್ಟಬೇಕಾಗಿದೆ. ಕಳೆದ ನಾಲ್ಕು ದಿನಗಳಲ್ಲಿ ಜಿಲ್ಲೆಯಲ್ಲಿ 174 ಪ್ರಕರಣಗಳನ್ನು ದಾಖಲಿಸಿದ್ದು, 1.74 ಲಕ್ಷ ರೂ. ದಂಡ ವಸೂಲಿ ಮಾಡಲಾಗಿದೆ. ಇನ್ನು ಲೈನ್ ಕ್ರಾಸ್ ಮಾಡಿರುವುದಕ್ಕೆ ಸಂಬಂಧಿಸಿದಂತೆ 137 ಪ್ರಕರಣಗಳನ್ನು ದಾಖಲಿಸಿದ್ದು 68500 ರೂ. ದಂಡವನ್ನು ವಿಧಿಸಲಾಗಿದೆ.
4 ಠಾಣಾ ವ್ಯಾಪ್ತಿಯಲ್ಲಿ ಕಣ್ಗಾವಲು: ಜಿಲ್ಲೆಯಲ್ಲಿ ನಾಲ್ಕು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಹಾಯ್ದು ಹೋಗಲಿದ್ದು, ಈ ನಾಲ್ಕು ಠಾಣೆಗಳ ವ್ಯಾಪ್ತಿಯ ಪೊಲೀಸ್ ಸಿಬ್ಬಂದಿ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳ ಮೇಲೆ ಕಣ್ಗಾವಲು ಇರಿಸಿದ್ದಾರೆ. ನಿಡಘಟ್ಟದಿಂದ ಬೆಂಗಳೂರು ರಾಮನಗರ ದವರೆಗೆ ಚನ್ನಪಟ್ಟಣ ಸಂಚಾರ ಠಾಣೆ ಪೊಲೀಸರು, ರಾಮನಗರದಿಂದ ಬಿಡದಿವರೆಗೆ ರಾಮನಗರ ಸಂಚಾರ ಠಾಣೆ ಪೊಲೀಸರು, ಬಿಡದಿಯಿಂದ ಕುಂಬಳಗೂಡಿನ ವರೆಗೆ ಬಿಡದಿ ಠಾಣೆ ಪೊಲೀಸರು. ಕುಂಬಳಗೂಡಿನಿಂದ ಹೆದ್ದಾರಿ ಅಂತ್ಯಗೊಳ್ಳುವ ವರೆಗೆ ಕುಂಬಳಗೂಡು ಠಾಣೆ ಪೊಲೀಸರು ಹೆದ್ದಾರಿಯಲ್ಲಿ ರಾಡಾರ್ ಕ್ಯಾಮೆರಾ ದೊಂದಿಗೆ ನಿಂತು ಸಂಚಾರ ನಿಯಮ ಉಲ್ಲಂಘನೆ ಮಾಡಿದ ಚಾಲಕರ ವಿರುದ್ಧ ಕ್ರಮ ಜರುಗಿಸುತ್ತಿದ್ದಾರೆ.
ಹೆದ್ದಾರಿ ಪ್ರಯಾಣಿಕರಿಗೆ ಬಲು ದುಬಾರಿ: ಈಗಾಗಲೇ ಟೋಲ್ ಹೆಚ್ಚಳದಿಂದಾಗಿ ಬೆಂ-ಮೈ ಎಕ್ಸ್‌ಪ್ರೆಸ್ ವೇನಲ್ಲಿ ಸಂಚರಿಸುವುದು ದುಬಾರಿ ಎಂದು ಪ್ರಯಾಣಿಕರು ಕಣ್ಣುಬಾಯಿ ಬಿಡುತ್ತಿರುವ ನಡುವೆ, ಸ್ವಲ್ಪ ಉದಾಸೀನ ಮಾಡಿ ಸಂಚಾರಿ ನಿಯಮ ಉಲ್ಲಂಘನೆ ಮಾಡಿದರೆ ದಂಡ ಹಾಕುತ್ತಿರುವುದು ಪ್ರಯಾಣಿಕರಿಗೆ ಹೆದ್ದಾರಿ ಸವಾರಿ ಮತ್ತಷ್ಟು ದುಬಾರಿಯಾಗಿ ಪರಿಣಮಿಸಿದೆ. ಈಗಾಗಲೇ ಬೆಂಗಳೂರು ಮೈಸೂರು ನಡುವೆ ಕಾರಿನಲ್ಲಿ ಹೋಗಿ ಬರುವುದಕ್ಕೆ ಒಂದು ಬದಿಗೆ 320 ರೂ. ಇದ್ದು, 24 ತಾಸುಗಳಲ್ಲಿ ಹಿಂದಿರುಗಿದರೆ 485 ರೂ. ಪಾವತಿಸ ಬೇಕು. ಇನ್ನು 24 ಗಂಟೆ ಬಳಿ ಹಿಂದಿರುಗಿದರೆ ಹೋಗಿಬರಲು 660 ರೂ. ಶುಲ್ಕವಾಗುತ್ತದೆ. ಪಾಸ್ಟ್ ಟ್ಯಾಗ್ ಇಲ್ಲದಿದ್ದರೆ ಟೋಲ್ ಶುಲ್ಕ 1300 ರೂ. ಕಟ್ಟ ಬೇಕಿದೆ. ಈ ಮಧ್ಯೆ ಪ್ರಯಾಣಿಕರು ಹೆದ್ದಾರಿಯಲ್ಲಿ ಅತಿ ವೇಗದ ಚಾಲನೆ ಮಾಡಿದರೆ 1 ಸಾವಿರ ರೂ. ಸೀಟ್‌ಬೆಲ್ಟ್ ಹಾಕದಿದ್ದರೆ 500, ಲೈನ್ ಕ್ರಾಸ್ ಮಾಡಿದರೆ 500 ಹೀಗೆ ದಂಡ ಪಾವತಿಸ ಬೇಕಿದ್ದು, ಬೆಂಗಳೂರು ಮೈಸೂರು ನಡುವಿನ ಪ್ರಯಾಣ ಜೇಬಿಗೆ ಹೊರೆಯಾಗಿ ಪರಿಣಮಿಸಿದೆ. ಆದರೆ, ಹೆಚ್ಚುತ್ತಿರುವ ಅಪಘಾತಗಳ ತಡೆಗೆ ದಂಡಾಸ್ತ್ರ ಅನಿವಾರ್ಯ ಎಂಬುದು ಪೊಲೀಸ್ ಇಲಾಖೆಯ ಅಭಿಪ್ರಾಯವಾಗಿದೆ.
– ಸು.ನಾ.ನಂದಕುಮಾರ್