ಕುದೂರು: ಬೆಂಗಳೂರು ಹಾಲು ಒಕ್ಕೂಟದ ಆಡಳಿತ ಮಂಡಳಿ ಚುನಾವಣೆಗೆ ಭರದ ಸಿದ್ಧತೆ ನಡೆಯುತ್ತಿದೆ. ಎರಡು ನಿರ್ದೇಶಕ ಸ್ಥಾನ ಹೊಂದಿರುವ ಮಾಗಡಿಯಲ್ಲೂ ರಾಜಕೀಯ ಚಟುವಟಿಕೆ ಗರಿಗೆದರಿದೆ.
ಕ್ಷೇತ್ರಗಳ ವಿಂಗಡನೆ: ಬಮೂಲ್ ನಿರ್ದೇಶಕರ ಸಂಖ್ಯೆ 12ರಿಂದ 13ಕ್ಕೆ ಏರಿದ್ದು, ಹೆಚ್ಚುವರಿ ಸ್ಥಾನ ಮಾಗಡಿ ತಾಲೂಕಿಗೆ ಸಿಕ್ಕಿದೆ. ಮಾಗಡಿ ಮತ್ತು ಕುದೂರು ಕ್ಷೇತ್ರಗಳನ್ನಾಗಿ ವಿಂಗಡಿಸಲಾಗಿದ್ದು, ಮಾಗಡಿಗೆ ಮಾಡಬಾಳ್, ಕಸಬಾ, ತಾವರೆಕೆರೆ ಹೋಬಳಿಯನ್ನು ಸೇರಿಸಲಾಗಿದೆ. ಕುದೂರು ಕ್ಷೇತ್ರಕ್ಕೆ ಕುದೂರು, ತಿಪ್ಪಸಂದ್ರ, ಸೋಲೂರು ಹೋಬಳಿಗಳನ್ನು ಸೇರಿಸಲಾಗಿದೆ. ಮಾಗಡಿ ಕ್ಷೇತ್ರದಲ್ಲಿ 152 ಸಂಘಗಳು ಬರಲಿದ್ದು, ಕುದೂರು ಕ್ಷೇತ್ರದಲ್ಲಿ 163 ಸಂಘಗಳಿವೆ. ಮೇನಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ. ಈ ಚುನಾವಣೆಯನ್ನು ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳು ಪ್ರತಿಷ್ಠೆಯಾಗಿ ಸ್ವೀಕರಿಸಿವೆ.
ನಾಯಕರ ಒಲವು ನಿಗೂಢ: ಮಾಗಡಿ ಕ್ಷೇತ್ರದಿಂದ 4 ಬಾರಿ ನಿರ್ದೇಶಕರಾಗಿರುವ ಕಾಂಗ್ರೆಸ್ ಬೆಂಬಲಿತ ನರಸಿಂಹಮೂರ್ತಿ 5ನೇ ಬಾರಿಗೆ ಕಣಕ್ಕಿಳಿಯಲು ಸಿದ್ಧತೆ ನಡೆಸಿದ್ದಾರೆ. ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ ಅವರ ಸಹೋದರ ಎಚ್.ಎನ್.ಅಶೋಕ್, ಮಾಜಿ ಜಿಪಂ ಸದಸ್ಯ ಬೆಳಗುಂಬ ವಿಜಯಕುಮಾರ್ ಕೂಡ ಆಸಕ್ತಿ ತೋರಿದ್ದಾರೆ. ಆದರೆ, ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ ಮತ್ತು ಸಂಸದ ಡಿ.ಕೆ.ಸುರೇಶ್ ಒಲವು ಯಾರ ಮೇಲಿದೆ ಎಂಬುದು ನಿಗೂಢವಾಗಿದೆ.
ಸಹೋದರರ ಸವಾಲ್: ಈ ಬಾರಿ ನಡೆಯುವ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದಿಂದ ಮಾಗಡಿ ಕ್ಷೇತ್ರಕ್ಕೆ ಸಹೋದರರ ಸವಾಲ್ ಎದುರಾಗುವುದು ಖಚಿತವಾಗಿದೆ. 5ನೇ ಬಾರಿಗೆ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧೆಗೆ ಹಾಲಿ ನಿರ್ದೇಶಕ ನರಸಿಂಹಮೂರ್ತಿ ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿಯಲು ತಯಾರಿ ಮಾಡಿಕೊಂಡಿದ್ದಾರೆ. ಇದರ ಜೊತೆಗೆ ಅವರ ಸಹೋದರ ಮಾಗಡಿ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪೂಜಾರಿ ಪಾಳ್ಯದ ಕೃಷ್ಣಮೂರ್ತಿ ಕೂಡ ಜೆಡಿಎಸ್ ಪಕ್ಷದಿಂದ ಪ್ರಬಲ ಆಕಾಂಕ್ಷಿಯಾಗಿದ್ದು, ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದ ನಾಯಕರು ಇವರಿಬ್ಬರನ್ನೇ ಅಂತಿಮವಾಗಿ ಕಣಕ್ಕಿಳಿಸಿದರೆ ಸಹೋದರರ ಸವಾಲ್ ಎದುರಾಗುವುದು ಖಚಿತವಾಗುತ್ತದೆ.
ಶಾಸಕರ ತಿರ್ಮಾನವೇ ಅಂತಿಮ: ಇನ್ನೂ ಕುದೂರು ಕ್ಷೇತ್ರಕ್ಕೆ ಕಾಂಗ್ರೆಸ್‌ನಿಂದ ಜಿಪಂ ಮಾಜಿ ಅಧ್ಯಕ್ಷ ಎಂ.ಕೆ.ಧನಂಜಯ, ಕೆಇಬಿ ರಾಜಣ್ಣ ಮತ್ತು ವೀರಶೈವ ಮುಖಂಡ ಶಿವಪ್ರಸಾದ್ ಹೆಸರು ಕೇಳಿ ಬರುತ್ತಿದೆ. ಶಾಸಕ ಎ.ಮಂಜುನಾಥ್ ತಿರ್ಮಾನವೇ ಅಂತಿಮವಾಗಿದೆ. ಕುದೂರು ಕ್ಷೇತ್ರದಿಂದ ಸೋಲೂರು ಹೋಬಳಿಯ ಸಂತೋಷ್, ಬ್ಯಾಡರಹಳ್ಳಿ ರಾಜು, ಕನ್ನಸಂದ್ರ ಮಂಜುನಾಥ್ ನಡುವೆ ಪೈಪೋಟಿ ನಡೆಯಲಿದೆ. ರಾಜ್ಯದಲ್ಲಿ ಮೈತ್ರಿ ಸರ್ಕಾರ ಅಧಿಕಾರದಲ್ಲಿದ್ದು, ಮೈತ್ರಿ ನಿಯಮ ಪಾಲಿಸುತ್ತಾರೆಯೂ ಅಥವಾ ಚುನಾವಣೆ ನಡೆಸುತ್ತಾರೆಯೂ ಎಂದು ಕಾದು ನೋಡಬೇಕಿದೆ.
ಸ್ಪರ್ಧೆ ಮಾಡಬೇಕು ಎಂದು ಅಂದುಕೊಂಡಿದ್ದೇನೆ. ಮಾಜಿ ಶಾಸಕ ಬಾಲಕೃಷ್ಣ ತೀರ್ಮಾನಕ್ಕೆ ಬದ್ಧನಾಗಿದ್ದೇನೆ. ಈಗಾಗಲೇ ನನಗೆ ಸಾಕಷ್ಟು ಜವಾಬ್ದಾರಿ ಇದ್ದು, ಯೋಚಿಸಿ ತೀರ್ಮಾನ ತೆಗೆದುಕೊಳ್ಳುತೇನೆ.
-ಎಚ್.ಎನ್.ಅಶೋಕ್, ಜಿಪಂ ಸದಸ್ಯರು
ಚುನಾವಣೆಯನ್ನು ಪ್ರತಿಷ್ಠೆಯನ್ನಾಗಿ ತೆಗೆದುಕೊಂಡಿದ್ದು, ನಾನು ಕೂಡ ಪ್ರಬಲ ಅಭ್ಯರ್ಥಿ. ಒಪ್ಪಿಗೆ ಪಡೆದೆ ಚುನಾವಣೆಗೆ ನಿಲ್ಲುತ್ತೇನೆ. ಶಾಸಕ ಎ.ಮಂಜು ತೀರ್ಮಾನಕ್ಕೆ ಬದ್ಧನಾಗಿದ್ದೇನೆ.
-ಪೂಜಾರಿಪಾಳ್ಯದ ಕೃಷ್ಣಮೂರ್ತಿ, ಮಾಗಡಿ ಪ್ರಾಧಿಕಾರದ ಅಧ್ಯಕ್ಷ
ಕುದೂರು ಕ್ಷೇತ್ರದಿಂದ ನಾನು ಕೂಡ ಆಕಾಂಕ್ಷಿಯಾಗಿದ್ದು, ಮಾಜಿ ಶಾಸಕ ಬಾಲಕೃಷ್ಣ ಒಪ್ಪಿಗೆ ಪಡೆದು ಚುನಾವಣೆಗೆ ನಿಲ್ಲುತ್ತೇನೆ.
-ರಾಜಣ್ಣ ಕೆಇಬಿ