Advertisement

ಬೆಂಗಳೂರು ಮೆಟ್ರೋ ನಿಲ್ದಾಣ : ಉಡುಪಿ ಎಂಜಿನಿಯರ್‌ರಿಂದ ವಿನ್ಯಾಸ

08:50 AM Aug 05, 2017 | Team Udayavani |

ಉಡುಪಿ: ಇತ್ತೀಚೆಗೆ ರಾಷ್ಟ್ರಪತಿಯವರು ಲೋಕಾರ್ಪಣೆ ಮಾಡಿದ ಏಶ್ಯಾದ ಅತಿ ದೊಡ್ಡ ನೆಲಮಹಡಿಯ ಮೆಟ್ರೋ ನಿಲ್ದಾಣವಾದ ಬೆಂಗಳೂರು ಮೆಟ್ರೋ ನಿಲ್ದಾಣದ ವಿನ್ಯಾಸ ರೂಪಿಸಿದವರು ಉಡುಪಿಯ ಎಂಜಿನಿಯರ್‌. ಈ ಮೆಟ್ರೋ ನಿಲ್ದಾಣ ನೆಲಮಟ್ಟದಿಂದ 18 ಮೀ. ಕೆಳಗೆ ಉತ್ತರ – ದಕ್ಷಿಣ ದಿಕ್ಕಿನಲ್ಲಿ ರೈಲು ಸಂಚರಿಸುವಾಗಲೇ, ಅದಕ್ಕೆ 6 ಮೀ. ಎತ್ತರದಲ್ಲಿ ಪೂರ್ವ – ಪಶ್ಚಿಮ ದಿಕ್ಕಿನಲ್ಲಿ ಇನ್ನೊಂದು ರೈಲು ಸಂಚರಿಸುತ್ತದೆ. ಮಧ್ಯದಲ್ಲಿ ಸೇತುವೆ ಇದೆ. ಸುಮಾರು 140 ಮೀ. ಉದ್ದದ ಈ ನಿಲ್ದಾಣದಲ್ಲಿ ಈಗ ಕಾಣುತ್ತಿರುವುದು ನೆಲ ಮಟ್ಟದಿಂದ 10 ಮೀ. ಎತ್ತರದ ಛಾವಣಿ. ಇದಕ್ಕೂ ಮೇಲೆ ಆರು ಮಹಡಿಗಳನ್ನು ನಿರ್ಮಿಸಲು (ಮಾಲ್‌ ಇತ್ಯಾದಿಗಳಿಗಾಗಿ) ಅವಕಾಶ ಇದೆ.

Advertisement

ನಿಲ್ದಾಣದ ವಿನ್ಯಾಸ ರೂಪಿಸಿದ ಸಂಸ್ಥೆ ಮಾಟ್‌ ಮ್ಯಾಕ್‌ಡೊನಾಲ್ಡ್‌. ಕಾಮಗಾರಿಯ ಉಸ್ತುವಾರಿ ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತ. ಮಾಟ್‌ ಮ್ಯಾಕ್‌ಡೊನಾಲ್ಡ್‌ ಸಂಸ್ಥೆಯಲ್ಲಿ ಎಂಜಿನಿಯರ್‌ ಆಗಿದ್ದ ಅಂಬಲಪಾಡಿಯ ಗುರುರಾಜ ರಾವ್‌ ನೇತೃತ್ವದ ತಂಡ ವಿನ್ಯಾಸವನ್ನು ಸುಮಾರು ಎರಡು ವರ್ಷಗಳಲ್ಲಿ ರೂಪಿಸಿತು. ‘ಇದೊಂದು ಸವಾಲಿನ ಕೆಲಸವಾಗಿತ್ತು. ಬಹಳ ಶ್ರಮಪಟ್ಟು ವಿನ್ಯಾಸ ರೂಪಿಸಿದ್ದೆವು’ ಎನ್ನುತ್ತಾರೆ ಗುರುರಾಜ ರಾವ್‌.

ಕೆಲವು ತಿಂಗಳ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶಿಲಾನ್ಯಾಸ ನೆರವೇರಿಸಿದ ಅನಿವಾಸಿ ಭಾರತೀಯ ಉದ್ಯಮಿ ಡಾ| ಬಿ.ಆರ್‌.ಶೆಟ್ಟಿಯವರು ನಿರ್ಮಿಸುವ ಆಸ್ಪತ್ರೆಯ ವಿನ್ಯಾಸವನ್ನೂ ಗುರುರಾಜ ರಾವ್‌ ಅವರು ಏಸ್‌ ಟೆಕ್ನೊಕ್ರಾಟ್ಸ್‌ ಪ್ರೈ.ಲಿ. ಮೂಲಕ ರೂಪಿಸಿದ್ದಾರೆ. ಮಣಿಪಾಲದ ಎಂಐಟಿಯಲ್ಲಿ ಪದವಿ, ಸುರತ್ಕಲ್‌ ಎನ್‌ಐಟಿಕೆಯಲ್ಲಿ ಸ್ಟ್ರಕ್ಚರಲ್‌ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದ ರಾವ್‌, ಸಂಗೀತ, ಯೋಗ ಇತ್ಯಾದಿ ಕ್ಷೇತ್ರಗಳಲ್ಲಿಯೂ ಸಕ್ರಿಯರು.

Advertisement

Udayavani is now on Telegram. Click here to join our channel and stay updated with the latest news.

Next