Advertisement

Namma Metro: “ನಮ್ಮ ಮೆಟ್ರೋ’ಗೆ ನೂತನ ಸಾರಥಿ ನೇಮಕ

12:55 PM Jan 12, 2024 | Team Udayavani |

ಬೆಂಗಳೂರು:  “ನಮ್ಮ ಮೆಟ್ರೋ’ ಯೋಜನೆಗಳಿಗೆ ವೇಗ ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರ, ಆ ಯೋಜನೆಗೆ ನೂತನ ಸಾರಥಿಯನ್ನು ನೇಮಿಸಿದೆ.

Advertisement

ಐಎಎಸ್‌ ಅಧಿಕಾರಿ ಎಂ. ಮಹೇಶ್ವರರಾವ್‌ ಅವರನ್ನು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್‌)ಕ್ಕೆ ಈಗ ವ್ಯವಸ್ಥಾಪಕ ನಿರ್ದೇಶಕರು ನೇಮಿಸಿದೆ. ಈ ಮೂಲಕ ಉದ್ದೇಶಿತ ನಿಗಮಕ್ಕೆ ಪೂರ್ಣಾವಧಿ ವ್ಯವಸ್ಥಾಪಕ ನಿರ್ದೇಶಕರು ನಿಯೋಜನೆಗೊಂಡಂತಾಗಿದೆ.

ಈ ಸಂಬಂಧ ಗುರುವಾರ ಸ್ವತಃ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ತಕ್ಷಣದಿಂದ ಜಾರಿಗೆ ಬರುವಂತೆ ಆದೇಶ ಹೊರಡಿಸಿದೆ. ಇದರೊಂದಿಗೆ ಪ್ರಭಾರ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಐಎಎಸ್‌ ಅಧಿಕಾರಿ ಅಂಜುಂ ಪರ್ವೇಜ್‌ ಅವರನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ಮುಂದುವರಿಯಲಿದ್ದಾರೆ. 2023ರ ಡಿಸೆಂಬರ್‌ 28ರಂದು ರಾಜ್ಯ ಸರ್ಕಾರವು ಕೇಂದ್ರಕ್ಕೆ ಮಹೇಶ್ವರರಾವ್‌ ಅವರನ್ನು ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಿಸುವ ಸಂಬಂಧ ಪ್ರಸ್ತಾವನೆ ಸಲ್ಲಿಸಿತ್ತು. ಅದನ್ನು ಅನುಮೋದಿಸಿ ಆದೇಶ ಹೊರಡಿಸಲಾಗಿದೆ.

ಅಷ್ಟೇ ಅಲ್ಲ, ನೂತನ ವ್ಯವಸ್ಥಾಪಕ ನಿರ್ದೇಶಕರಾಗಿ ಹೊಸದಾಗಿ ನೇಮಕಗೊಂಡ ಮಹೇಶ್ವರರಾವ್‌ ಅವರ ವರ್ಗಾವಣೆ ಅಥವಾ ತೆಗೆದಹಾಕುವಾಗ ರಾಜ್ಯ ಸರ್ಕಾರವು ಕೇಂದ್ರದ ಅನುಮತಿ ಪಡೆಯಬೇಕು. ಜತೆಗೆ ವ್ಯವಸ್ಥಾಪಕ ನಿರ್ದೇಶಕರಿಗೆ ಯಾವುದೇ ಹೆಚ್ಚುವರಿ ಜವಾಬ್ದಾರಿಗಳನ್ನು ವಹಿಸುವಾಗಲೂ ತಮ್ಮ ಒಪ್ಪಿಗೆ ಪಡೆಯಬೇಕು. ಸಂಪೂರ್ಣವಾಗಿ “ನಮ್ಮ ಮೆಟ್ರೋ’ ಯೋಜನೆ ನಿರ್ವಹಣೆಗೇ ಮೀಸಲಿರಿಸಬೇಕು ಎಂದು ಸ್ಪಷ್ಟವಾಗಿ ತಾಕೀತು ಮಾಡಿದೆ.

1995ನೇ ಐಎಎಸ್‌ ಬ್ಯಾಚ್‌ನ ಮಹೇಶ್ವರರಾವ್‌ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಜಂಟಿ ಕಾರ್ಯದರ್ಶಿ ಹಾಗೂ ಹಣಕಾಸು ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿ ದ್ದಾರೆ. ಸುಮಾರು 3 ವರ್ಷಗಳ ಕಾಲ ಇಸ್ರೋ ನಲ್ಲಿದ್ದ ಅವರು, ಈಚೆಗೆ ಆ ಜವಾಬ್ದಾರಿಯಿಂದ ಬಿಡುಗಡೆಗೊಂಡಿದ್ದರು. ಈಗ ಅವರನ್ನು “ನಮ್ಮ ಮೆಟ್ರೋ’ ಯೋಜನೆ ಜವಾಬ್ದಾರಿ ವಹಿಸಲಾಗಿದೆ.

Advertisement

ಅಂಜುಂ ಅವಧಿಯಲ್ಲಿ ನೇರಳೆ ಮಾರ್ಗ ಪೂರ್ಣ: ಇನ್ನು ಅಂಜುಂ ಪರ್ವೇಜ್‌ ಕಳೆದ ಸುಮಾರು ಎರಡೂ ವರೆ ವರ್ಷಗಳಿಂದ ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು. ಈ ಅವಧಿಯಲ್ಲಿ ಬೈಯಪ್ಪನ ಹಳ್ಳಿ- ವೈಟ್‌ಫೀಲ್ಡ್‌ ಮತ್ತು ಕೆಂಗೇರಿ- ಚಲ್ಲಘಟ್ಟ ನಡು ವಿನ ಮೆಟ್ರೋ ಮಾರ್ಗ ವಾಣಿಜ್ಯ ಸೇವೆ ಮುಕ್ತಗೊಂ ಡಿತು. ಇದಲ್ಲದೆ, ಸುರಂಗ ಮಾರ್ಗ ನಿರ್ಮಾಣ ಕಾರ್ಯ ಚುರುಕಿನಿಂದ ಸಾಗಿತ್ತು. ಡೈರಿ ವೃತ್ತದಿಂದ ಟ್ಯಾನರಿ ರಸ್ತೆಯ ವೆಂಕಟೇಶಪುರದವರೆಗೆ ಪೂರ್ಣಗೊಂ ಡಿತು. ಪ್ರತಿಷ್ಠಿತ ಎಲೆಕ್ಟ್ರಾನಿಕ್‌ ಸಿಟಿಗೆ ಸಂಪರ್ಕ ಕಲ್ಪಿಸುವ ರೈಲು ಕಂ ರಸ್ತೆಯ ಹಳದಿ ಮಾರ್ಗ ಕೂಡ ಬಹುತೇಕ ಪೂರ್ಣಗೊಂಡಿದ್ದು, ರೈಲುಗಳ ಆಗಮನವಾಗುತ್ತಿದ್ದಂತೆ ಪರೀಕ್ಷಾರ್ಥ ಸಂಚಾರ ಆರಂಭಗೊಳ್ಳುವ ಹಂತ ತಲುಪಿದೆ. ಸರಿಸುಮಾರು ಒಂದು ವರ್ಷದ ಹಿಂದೆ ಹೆಣ್ಣೂರು ಕ್ರಾಸ್‌ ಬಳಿ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್‌ ಕಬ್ಬಿಣದ ಚೌಕಟ್ಟು ಉರುಳಿಬಿದ್ದು ತಾಯಿ-ಮಗು ಸ್ಥಳದಲ್ಲೇ ಮೃತಪಟ್ಟ ಕಹಿ ಘಟನೆಯೂ ಈ ಅವಧಿಯಲ್ಲಿ ನಡೆಯಿತು.

ಸಂಸದ ತೇಜಸ್ವಿಸೂರ್ಯ ಅಭಿನಂದನೆ :

ಬಿಎಂಆರ್‌ಸಿಎಲ್‌ಗೆ ಪೂರ್ಣಾವಧಿ ವ್ಯವಸ್ಥಾಪಕ ನಿರ್ದೇಶಕರನ್ನು ನೇಮಕ ಮಾಡಿದ್ದಕ್ಕೆ ಸಂಸದ ತೇಜಸ್ವಿಸೂರ್ಯ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹದೀìಪ್‌ಸಿಂಗ್‌ ಪುರಿ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. “ಕೊನೆಗೂ ಪೂರ್ಣಾವಧಿ ಎಂಡಿ ಅನ್ನು ನೇಮಕ ಮಾಡಿರುವುದು ಸಮಾಧಾನ ತಂದಿದೆ. ಇನ್ಮುಂದೆಯಾದರೂ ನಮ್ಮ ಮೆಟ್ರೋ ಯೋಜನೆ ತ್ವರಿತ ಗತಿಯಲ್ಲಿ ಸಾಗಲಿದೆ ಎಂಬ ವಿಶ್ವಾಸ ಇದೆ’ ಎಂದು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹೇಳಿದ್ದಾರೆ.  ಈ ಸಂಬಂಧ ಹಿಂದೆ ಸಂಸದ ತೇಜಸ್ವಿಸೂರ್ಯ ಹಲವು ಬಾರಿ ಕೇಂದ್ರ ಸಚಿವರನ್ನು ಭೇಟಿಯಾಗಿ ಮನವಿಗಳನ್ನು ಸಲ್ಲಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next