ಮಂಗಳೂರು: ಬೆಂಗಳೂರಿನಿಂದ ಮಂಗಳೂರಿಗೆ ವಾರದಲ್ಲಿ ಮೂರು ದಿನ ಸಂಚರಿಸುವ ಯಶವಂತಪುರ- ಮಂಗಳೂರು ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 16585/86) ಹೊಸ ರೈಲ್ವೆ ಸೇವೆಗೆ ಗುರುವಾರದಂದು ಬೆಳಗ್ಗೆ 11 ಗಂಟೆಗೆ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಚಾಲನೆ ದೊರೆಯಲಿದೆ. ಫೆ.22 ರಿಂದ ಈ ರೈಲು ತನ್ನ ಸೇವೆ ಆರಂಭಿಸಲಿದೆ.
ಸಂಸದ ನಳಿನ್ ಕುಮಾರ್ ಕಟೀಲು ನೂತನ ರೈಲಿಗೆ ಹಸಿರು ನಿಶಾನೆ ತೋರಿಸಲಿದ್ದು, ಉಸ್ತುವಾರಿ ಸಚಿವ ಯು.ಟಿ.ಖಾದರ್ ಅಧ್ಯಕ್ಷತೆ ವಹಿಸಲಿದ್ದಾರೆ. ಸೋಮ ವಾರ, ಬುಧವಾರ, ಶುಕ್ರವಾರ ಮಂಗಳೂರಿ ನಿಂದ ಹಾಗೂ ಭಾನುವಾರ, ಮಂಗಳವಾರ ಹಾಗೂ ಗುರುವಾರ ಬೆಂಗಳೂರಿನಿಂದ ಈ ರೈಲು ಹೊರಡ ಲಿದೆ. ಬೆಂಗಳೂರಿನಿಂದ ಸಂಜೆ 4.30ಕ್ಕೆ ಹೊರಡುವ ಈ ರೈಲು, ಮರುದಿನ ಬೆಳಗ್ಗೆ 4ರ ಸುಮಾರಿಗೆ
ಮಂಗಳೂರಿಗೆ ತಲುಪಲಿದೆ ಹಾಗೂ ರಾತ್ರಿ 7 ಗಂಟೆಗೆ ಮಂಗಳೂರಿನಿಂದ ಹೊರಡುವ ರೈಲು ಮರುದಿನ ಮುಂಜಾನೆ 4.30ಕ್ಕೆ ಬೆಂಗಳೂರು ತಲುಪಲಿದೆ.
364 ಕಿ.ಮೀ.ಪ್ರಯಾಣಕ್ಕೆ ಪ್ರಸ್ತಾವಿತ ಸಮಯದ ಪ್ರಕಾರ, ಬೆಂಗಳೂರಿನಿಂದ ಮಂಗಳೂರಿಗೆ 11.30 ಗಂಟೆ ಹಾಗೂ ಮಂಗಳೂರಿನಿಂದ ಬೆಂಗಳೂರಿಗೆ 9.30 ಗಂಟೆಯಾಗಲಿದೆ. ಘಾಟಿ ಪ್ರದೇಶದಲ್ಲಿ ರೈಲ್ವೆ ಸುರಕ್ಷತೆಯ ಹಿನ್ನೆಲೆ ಹಾಗೂ ಇತರ ರೈಲುಗಳ ಕ್ರಾಸಿಂಗ್ ಇರುವ ಕಾರಣ ದಿಂದ ಬೆಂಗಳೂರಿನಿಂದ ಹೊರಟ ರೈಲು ತಡವಾಗಿ ಮಂಗಳೂರಿಗೆ ತಲುಪುವಂತಾ ಗುತ್ತದೆ.
ಸಂಜೆ 4ರ ಸುಮಾರಿಗೆ ರೈಲು ಹೊರಡುವ ಸಮಯ ಸೇರಿದಂತೆ ಹೊಸ ರೈಲಿನ ವೇಳಾಪಟ್ಟಿಯು ಕರಾವಳಿಗರಿಗೆ ಅನುಕೂಲಕರವಾಗಿಲ್ಲ ಹಾಗೂ ಸಮಯ ದಲ್ಲಿ ಬದಲಾವಣೆ ಮಾಡ ಬೇಕು ಎಂಬ ಬೇಡಿಕೆ ಕೂಡ ಇದೇ ವೇಳೆ ಕೇಳಿ ಬಂದಿದೆ.
ಪ್ರಸಕ್ತ ಮಂಗಳೂರು ಸೆಂಟ್ರಲ್‌ನಿಂದ ಪ್ರತಿ ದಿನ ಯಶವಂತಪುರ ಎಕ್ಸ್‌ಪ್ರೆಸ್ ರೈಲು ರಾತ್ರಿ 8.55ಕ್ಕೆ ಹೊರಟು ಮರುದಿನ ಬೆಳಗ್ಗೆ 7.30ಕ್ಕೆ ಬೆಂಗಳೂರು ತಲುಪುತ್ತದೆ. ಇದು ಮೂರು ದಿನ ಮೈಸೂರು ಹಾಗೂ 4 ದಿನ ಶ್ರವಣ ಬೆಳಗೋಳ ಮಾರ್ಗವಾಗಿ ಸಂಚರಿಸುತ್ತಿದೆ.
ಇನ್ನೊಂದೆಡೆ, ಮಂಗಳೂರು ಜಂಕ್ಷನ್‌ನಿಂದ ಪ್ರತಿ ದಿನ (ಭಾನುವಾರ ಹೊರತುಪಡಿಸಿ) ಬೆಳಗ್ಗೆ 11.30ಕ್ಕೆ ಹೊರಡುವ ಗೊಮ್ಮಟೇಶ್ವರ ಎಕ್ಸ್‌ಪ್ರೆಸ್ ರೈಲು ರಾತ್ರಿ 8.30ರ ಸುಮಾರಿಗೆ ಬೆಂಗಳೂರು ತಲುಪುತ್ತದೆ. ಇದು ಶ್ರವಣ ಬೆಳಗೋಳ ಮಾರ್ಗವಾಗಿ ಸಂಚರಿಸುತ್ತಿದೆ.