Advertisement
ಘಾಟಿ ಪ್ರದೇಶದಲ್ಲಾಗುತ್ತಿರುವ ವರ್ಷ ಧಾರೆಗೆ ಸಕಲೇಶಪುರ-ಸುಬ್ರಹ್ಮಣ್ಯ ರೈಲು ಹಳಿಯ ಮೇಲೆ ಶಿರಿಬಾಗಿಲಿನಲ್ಲಿ ಜು. 4ರಂದು ಮಣ್ಣು ಜರಿದು ರೈಲು ಸಂಚಾರ ಎರಡು ತಾಸು ವಿಳಂಬವಾಗಿತ್ತು. ಮಂಗಳವಾರ ಮತ್ತೆ ಎರಡು ಕಡೆ ಮಣ್ಣು ಜರಿದ ಪರಿಣಾಮ ರೈಲುಗಳ ಸಂಚಾರ ಮಾರ್ಗವನ್ನು ಬದಲಿಸಲಾಗಿತ್ತು.
ಬುಧವಾರ ಸಂಜೆ ತನಕ ಈ ಮಾರ್ಗದಲ್ಲಿ ಯಾವುದೇ ಗುಡ್ಡ ಕುಸಿತ ಘಟನೆಗಳು ನಡೆದಿಲ್ಲ. ಹಗಲಿನ ರೈಲುಗಳು ನಿರಾತಂಕವಾಗಿ ಸಂಚರಿಸಿವೆ. ರಾತ್ರಿ 9 ಗಂಟೆಗೆ ಸಂಚರಿಸುವ ಕಾರವಾರ-ಕಣ್ಣೂರು ಎಕ್ಸ್‌ಪ್ರೆಸ್ ಹಾಗೂ ರಾತ್ರಿ 11 ಗಂಟೆಗೆ ಸಂಚರಿಸುವ ಮಂಗಳೂರು ಸೆಂಟ್ರಲ್-ಯಶವಂತಪುರ ರೈಲು ಸಂಚಾರದಲ್ಲೂ ಯಾವುದೇ ವ್ಯತ್ಯಯ ಆಗಲಾರದು ಎನ್ನುವ ವಿಶ್ವಾಸ ಇಲಾಖೆ ಅಧಿಕಾರಿಗಳದ್ದು.
ಘಾಟಿ ಪ್ರದೇಶದಲ್ಲಿ ಭಾರೀ ಮಳೆ ಯಾಗುತ್ತಿದ್ದು ರೈಲು ಮಾರ್ಗದ ಮೇಲೆ ನಿಗಾ ಇಡಲಾಗಿದೆ. ತಡರಾತ್ರಿ ಕಾರ್ಯಾಚರಣೆ
ಹಳಿ ಮೇಲೆ ಬಿದ್ದ ಮಣ್ಣು ತೆರವು ಕಾರ್ಯಾಚರಣೆ ಬುಧವಾರ ಸಂಜೆಯಿಂದ ಮುಂಜಾವ 3 ಗಂಟೆ ತನಕವೂ ನಡೆದಿತ್ತು. ಸಕಲೇಶಪುರ ಹಾಗೂ ಸುಬ್ರಹ್ಮಣ್ಯ ರೈಲ್ವೇ ಕಾರ್ಮಿಕರನ್ನು ಕುಸಿತ ಸಂಭವಿಸಿದ ಸ್ಥಳಕ್ಕೆ ಕರೆದೊಯ್ದು ಮಣ್ಣು ತೆರವುಗೊಳಿಸಲಾಯಿತು.