Advertisement

ರಾಜಧಾನಿಯಲ್ಲಿ ಲಾಕ್ ಡೌನ್ ನಿರ್ಧಾರ ಇದು ನಿರ್ಣಾಯಕ ಸಮಯ

11:44 AM Jul 13, 2020 | sudhir |

ಕೋವಿಡ್-19 ಪ್ರಕರಣಗಳ ಸಂಖ್ಯೆಯಲ್ಲಿ ಕೆಲವು ದಿನಗಳಿಂದ ಭಾರೀ ಏರಿಕೆ ಕಾಣಿಸಿಕೊಳ್ಳಲಾರಂಭಿಸಿದೆ. ರವಿವಾರವೊಂದೇ ದಿನ ದೇಶದಲ್ಲಿ 28 ಸಾವಿರಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗಿದ್ದರೆ, 24 ಗಂಟೆಗಳ ಅವಧಿಯಲ್ಲಿ 551 ಜನ ಮೃತಪಟ್ಟಿದ್ದಾರೆ. ನಿರಂತರ ಮೂರು ದಿನ ನಿತ್ಯ ಸೋಂಕಿತರ ಪ್ರಮಾಣ 26 ಸಾವಿರಕ್ಕೂ ಅಧಿಕ ದಾಖಲಾಗಿದೆ.

Advertisement

ರಾಜ್ಯದಲ್ಲಿ, ಅದರಲ್ಲೂ ಮುಖ್ಯವಾಗಿ ರಾಜಧಾನಿ ಬೆಂಗಳೂರಿನಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 12 ಸಾವಿರ ದಾಟಿದೆ. ಬೆಂಗಳೂರಲ್ಲಿ ನಿತ್ಯ ಸೋಂಕಿತರ ಸಂಖ್ಯೆಯಲ್ಲಿ ಆಗುತ್ತಿರುವ ಈ ಹೆಚ್ಚಳವು ರಾಜ್ಯವನ್ನು ದೇಶದ ಹಾಟ್ ಸ್ಪಾಟ್ ಗಳಲ್ಲಿ ಮೂರನೇ ಸ್ಥಾನಕ್ಕೆ ಒಯ್ದಿದೆ (ಸಕ್ರಿಯ ಪ್ರಕರಣಗಳ ಆಧಾರದಲ್ಲಿ). ಈ ಹಿಂದೆ ಮಹಾರಾಷ್ಟ್ರ, ತಮಿಳುನಾಡು ಅನಂತರ ದಿಲ್ಲಿಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಅಧಿಕವಿತ್ತು. ಆದರೆ, ಕೆಲವು ದಿನಗಳಿಂದ ಅಲ್ಲಿ ಚೇತರಿಕೆ ಪ್ರಮಾಣವು ಗಮನಾರ್ಹವಾಗಿ ಹೆಚ್ಚಾಗಿದ್ದು, ಅತಿವೇಗವಾಗಿ ಗುಣಮುಖವಾಗುತ್ತಿರುವ ಹಾಟ್ ಸ್ಪಾಟ್‌ ರಾಜ್ಯಗಳಲ್ಲಿ ದಿಲ್ಲಿ ಮುಂಚೂಣಿಯಲ್ಲಿದೆ.

ರವಿವಾರ ಅಪರಾಹ್ನದ ವೇಳೆಗೆ ದಿಲ್ಲಿಯಲ್ಲಿ 19,895 ಸಕ್ರಿಯ ಪ್ರಕರಣಗಳಿದ್ದರೆ, ಕರ್ನಾಟಕದಲ್ಲಿ 20,879 ಪ್ರಕರಣಗಳು ಪತ್ತೆಯಾಗಿವೆ! ರಾಜ್ಯದ ಒಟ್ಟು ಪ್ರಕರಣಗಳಲ್ಲಿ ಬೆಂಗಳೂರು ಒಂದರಲ್ಲೇ 61 ಪ್ರತಿಶತ ಪ್ರಕರಣಗಳು ಇದುವರೆಗೆ ಪತ್ತೆಯಾಗಿವೆ. ಅನ್ ಲಾಕ್‌ ಪ್ರಕ್ರಿಯೆ ಆರಂಭವಾಗುವುದಕ್ಕಿಂತ ಮುಂಚೆ ಬೆಂಗಳೂರು ಕೋವಿಡ್‌ ನಿಯಂತ್ರಣದಲ್ಲಿ ದೇಶಕ್ಕೆ ಮಾದರಿಯಾಗಿತ್ತು. ಆದರೆ ಸರಕಾರವು ಆರ್ಥಿಕತೆಗೆ ಮರು ವೇಗ ಕೊಡಲು ನಿರ್ಬಂಧಗಳನ್ನು ತೆಗೆದುಹಾಕಿದ ನಂತರದಿಂದ ಪರಿಸ್ಥಿತಿಯು ಹದಗೆಡಲಾರಂಭಿಸಿತು.

ರಾಜಧಾನಿಯಲ್ಲಿ ಕೋವಿಡ್-19 ಎಷ್ಟು ವೇಗವಾಗಿ ಹರಡುತ್ತಿದೆಯೆಂದರೆ ಅದು ಮುಖ್ಯಮಂತ್ರಿಗಳ ಗೃಹ ಕಚೇರಿಯನ್ನೂ ತಲುಪಿದೆ. ಕೃಷ್ಣಾದ ಕೆಲವು ಸಿಬಂದಿ ಮತ್ತು ಮುಖ್ಯಮಂತ್ರಿಗಳ ಹೆಚ್ಚುವರಿ ಚಾಲಕರು ಕೊರೊನಾ ಪಾಸಿಟಿವ್‌ ಆಗಿರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ದ್ವಿತೀಯ ಸಂಪರ್ಕಿತರು ಎಂಬ ಕಾರಣಕ್ಕೆ ಮುಖ್ಯಮಂತ್ರಿ ಬಿಎಸ್ ವೈ ತಮ್ಮ ಮನೆಯಲ್ಲೇ ಕ್ವಾರಂಟೈನ್ ಒಳಗಾಗಿದ್ದಾರೆ. ಹಠಾತ್ತನೆ ಕೋವಿಡ್‌ ಪ್ರಕರಣಗಳು ಹೆಚ್ಚಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಆರೋಗ್ಯ ಮತ್ತು ಆಡಳಿತ ವಲಯದ ಮೇಲೆ ಒತ್ತಡ ಬಿದ್ದಿದೆ. ಹೀಗಾಗಿ ರಾಜ್ಯ ಸರಕಾರವು ಸೋಂಕು ನಿಯಂತ್ರಣದ ದೃಷ್ಟಿಯಿಂದ, ತಜ್ಞರ ಸಲಹೆಗಳನ್ನು ಗಮನದಲ್ಲಿಟ್ಟುಕೊಂಡು, ಜುಲೈ 14ರ ರಾತ್ರಿ 8:00ರಿಂದ 7 ದಿನಗಳವರೆಗೆ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಫೆಗಳಲ್ಲಿ ಲಾಕ್ ಡೌನ್‌ ಘೋಷಿಸಿದೆ.

ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಇದು ನಿಸ್ಸಂಶಯವಾಗಿಯೂ ನಿರ್ಣಾಯಕ ಸಮಯ. ಈಗ ಜಾರಿಯಾಗಲಿರುವ ಲಾಕ್ ಡೌನ್‌ ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ಬರುವುದನ್ನು ಹಾಗೂ ಜನರಿಗೆ ಯಾವುದೇ ರೀತಿಯಲ್ಲೂ ಅಗತ್ಯ ವಸ್ತುಗಳ ಕೊರತೆ ಎದುರಾಗದಂತೆ ಸರಕಾರ ನೋಡಿಕೊಳ್ಳಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಜನರೂ ಸಹ, ಸರಕಾರದ ಈ ನಿರ್ಣಯವನ್ನು ಗಂಭೀರವಾಗಿ ಪರಿಗಣಿಸಿ ತಮ್ಮ ಸುರಕ್ಷತೆಯಲ್ಲಿ ತಾವಿರಬೇಕು.

Advertisement
Advertisement

Udayavani is now on Telegram. Click here to join our channel and stay updated with the latest news.

Next