Advertisement
ವಿಶೇಷ ದಿನಗಳಲ್ಲಿ ಬಸ್‌ಗಳ ದುಬಾರಿ ದರದಿಂದಾಗಿ ಬೆಂಗಳೂರಿನಿಂದ ಊರಿಗೆ ಬರಲು ಅನೇಕ ಮಂದಿ ಹಿಂದೇಟು ಹಾಕುತ್ತಿದ್ದುದ್ದು ಹೆಚ್ಚು. ಆದರೆ ಈಗ ಕರಾವಳಿಗೆ ಅದರಲ್ಲೂ ಉಡುಪಿ, ಕುಂದಾಪುರಕ್ಕೆ ನೇರವಾಗಿ ರೈಲು ಸೇವೆಯನ್ನು ಆರಂಭಿಸುತ್ತಿರುವುದರಿಂದ ಸಾವಿರಾರು ಮಂದಿ ರೈಲು ಪ್ರಯಾಣಿಕರಲ್ಲಿ ಮಂದಹಾಸ ಮೂಡಿದಂತಾಗಿದೆ.
ರಾಜ್ಯದವರೇ ಆಗಿರುವ ರೈಲ್ವೇ ಖಾತೆಯ ರಾಜ್ಯ ಸಚಿವ ಸುರೇಶ್ ಅಂಗಡಿಯವರು ಈ ಬೆಂಗಳೂರು – ವಾಸ್ಕೋ ರೈಲನ್ನು ಕರಾವಳಿಗೆ ಕೊಡುಗೆಯಾಗಿ ನೀಡಿದ್ದಾರೆ. ರೈಲು ಘೋಷಣೆಯಾಗಿದ್ದರೂ, ವೇಳಾಪಟ್ಟಿ, ಇನ್ನಿತರ ತಾಂತ್ರಿಕ ಅಡೆತಡೆಗಳು, ಕೆಲವು ಅಧಿಕಾರಿಗಳು ಅಡ್ಡಗಾಲು ಹಾಕಿದ್ದರೂ ಕೂಡ ಸಚಿವರೇ ಸ್ವತಃ ಮಧ್ಯಪ್ರವೇಶಿಸಿ ಎಲ್ಲ ಸಮಸ್ಯೆಗಳನ್ನು ನಿವಾರಿಸಿ, ಸಂಚಾರಕ್ಕೆ ಅಸ್ತು ಎಂದಿದ್ದಾರೆ. ಸಚಿವರ ಕರಾವಳಿಗರ ಮೇಲಿನ ಈ ಕಾಳಜಿಗೆ ಎಲ್ಲೆಡೆಯಿಂದ ಶ್ಲಾಘನೆ ವ್ಯಕ್ತವಾಗುತ್ತಿದೆ. ಇವರೊಂದಿಗೆ ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿಯ ಅವಿರತ ಶ್ರಮ, ಸಂಸದೆ ಶೋಭಾ ಕರಂದ್ಲಾಜೆ, ಸಚಿವ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ, ಸಹಿತ ಅನೇಕ ಮಂದಿ ಜನಪ್ರತಿನಿಧಿಗಳ ಪ್ರಯತ್ನದ ಫಲವಾಗಿ ಈಗ ಕರಾವಳಿಗೆ ಮತ್ತೂಂದು ಹೊಸ ರೈಲು ಬರುತ್ತಿದೆ. ಸ್ವಾಗತಕ್ಕೆ ಸಿದ್ಧತೆ
ಬೆಂಗಳೂರಿನಿಂದ ರೈಲು ಪ್ರಯಾಣವನ್ನು ಇನ್ನಷ್ಟು ಹತ್ತಿರವಾಗಿಸಲಿರುವ ಹೊಸ ರೈಲನ್ನು ಅದ್ದೂರಿಯಾಗಿ ಸ್ವಾಗತಿಸಲು ಕುಂದಾಪುರದಲ್ಲಿ ಸಿದ್ಧತೆ ನಡೆಯುತ್ತಿದೆ. ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿ, ರೈಲು ಪ್ರಯಾಣಿಕರು, ಸಾರ್ವಜನಿಕರು ಮಾ. 8ರಂದು ಬೆಳಗ್ಗೆ ಮೂಡ್ಲಕಟ್ಟೆಯ ರೈಲು ನಿಲ್ದಾಣದಲ್ಲಿ ಸ್ವಾಗತಿಸಲಿದ್ದಾರೆ.
Related Articles
ಕರಾವಳಿ ಜಿಲ್ಲೆಗಳಿಗೂ ಗೋವಾಕ್ಕೂ ನಂಟಿದ್ದು, ಈ ಹೊಸ ರೈಲಿನಿಂದಾಗಿ ಇದೇ ಮೊದಲ ಬಾರಿಗೆ ವಾಸ್ಕೋಗೆ ನೇರ ಸಂಪರ್ಕ ಸಾಧ್ಯವಾಗಲಿದೆ. ಈವರೆಗೆ ಕೇವಲ ಮಡಗಾಂವ್‌ವರೆಗೆ ಮಾತ್ರ ರೈಲು ಸಂಚಾರ ಇರುತ್ತಿತ್ತು. ಗೋವಾದ ವಿಮಾನ ನಿಲ್ದಾಣಕ್ಕೂ ತೆರಳಲು ಅನುಕೂಲವಾಗಲಿದೆ. ಗೋವಾದ ಪ್ರೇಕ್ಷಣೀಯ ಹಾಗೂ ಯಾತ್ರಾ ಸ್ಥಳಗಳಿಗೆ ಪ್ರವಾಸ ಮಾಡುವವರಿಗೂ ಈ ರೈಲು ಅನುಕೂಲಕರವಾಗಲಿದೆ.
Advertisement
ಯಾರಿಗೆಲ್ಲ ಪ್ರಯೋಜನಈ ಹೊಸ ರೈಲು ಬೆಂಗಳೂರಿನಿಂದ ಮಂಗಳೂರು ಸೆಂಟ್ರಲ್ ಹಾಗೂ ಜಂಕ್ಷನ್ ತಪ್ಪಿಸಿ ಪಡೀಲು ಮಾರ್ಗವಾಗಿ ಉಡುಪಿ ಕಡೆಗೆ ಸಂಚರಿಸುವುದರಿಂದ 2 ಗಂಟೆ ಮುಂಚಿತವಾಗಿ ಮುಂದಿನ ಎಲ್ಲ ನಿಲ್ದಾಣಗಳಿಗೆ ಬರಲಿದೆ. ಮುಂಚೆ ಬೆಂಗಳೂರಿನಿಂದ ಸಂಜೆ 7ಕ್ಕೆ ಹೊರಡುತ್ತಿದ್ದ ರೈಲು ಇಲ್ಲಿಗೆ ವಾರದ 4 ದಿನ ಬೆಳಗ್ಗೆ 8.25 ಕ್ಕೆ ಹಾಗೂ ವಾರದ 3 ದಿನ 10.55 ಕ್ಕೆ ಬರುತ್ತಿತ್ತು. ಅಂದರೆ ಕುಣಿಗಲ್ ಮಾರ್ಗವಾಗಿ 4 ದಿನ ಹಾಗೂ ಮೈಸೂರು ಮಾರ್ಗವಾಗಿ 3 ದಿನ ಸಂಚರಿಸುತ್ತಿತ್ತು. ಆದರೆ ಈ ರೈಲು ವಾರದ 7 ದಿನ ಕೂಡ ಕುಣಿಗಲ್ ಮಾರ್ಗವಾಗಿಯೇ ಸಂಚರಿಸಲಿದೆ. ಇದರಿಂದ ಮುಖ್ಯವಾಗಿ ಸುರತ್ಕಲ್, ಉಡುಪಿ, ಕುಂದಾಪುರ, ಬೈಂದೂರು, ಕಾರವಾರ ಮತ್ತಿತರರ ಪ್ರಮುಖ ಊರುಗಳ ಜನರಿಗೆ ಬಹಳಷ್ಟು ಅನುಕೂಲವಾಗಲಿದೆ.
ಒಟ್ಟು ರೈಲುಗಳು. ಹೊಸದಾಗಿ ಸಂಚರಿಸಲಿರುವ ಬೆಂಗಳೂರು – ವಾಸ್ಕೋ ರೈಲಿನ ನಿಲುಗಡೆಯಿಂದಾಗಿ ಮೂಡ್ಲಕಟ್ಟೆಯಲ್ಲಿರುವ ಕುಂದಾಪುರ ರೈಲು ನಿಲ್ದಾಣದಲ್ಲಿ 19 ರೈಲುಗಳ ನಿಲುಗಡೆಗೆ ಅವಕಾಶ ಕಲ್ಪಿಸಿದಂತಾಗಲಿದೆ. 7-8 ವರ್ಷಗಳ ಹಿಂದೆ ಕೇವಲ 7-8 ರೈಲುಗಳು ಮಾತ್ರ ಇಲ್ಲಿ ನಿಲ್ಲುತ್ತಿದ್ದವು. ಕೊಚುವೆಲಿ – ಗಂಗಾನಗರ, ಕೊಯಮತ್ತೂರು – ಗಂಗಾನಗರ ಎಕ್ಸ್‌ಪ್ರೆಸ್ ರೈಲುಗಳಿಗೆ ಕಳೆದ ವರ್ಷವಷ್ಟೇ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿತ್ತು. ನೈಋತ್ಯ ರೈಲ್ವೇಗೆ ಸೇರಿಸಿ
ಒಂದು ರೈಲು ಘೋಷಣೆಯಾಗಿ, ಅದನ್ನು ಅನುಷ್ಠಾನಕ್ಕೆ ತರಬೇಕಾದರೆ ಕೊಂಕಣ್ ರೈಲ್ವೇ, ನೈಋತ್ಯ ರೈಲ್ವೇ ಹಾಗೂ ದಕ್ಷಿಣ ರೈಲ್ವೇಯ ಅನುಮತಿಯ ಜತೆಗೆ ಎಲ್ಲರ ಸಮನ್ವಯ ಮಾಡುವುದೇ ಸವಾಲಾಗಿರುತ್ತದೆ. ಅದಕ್ಕಾಗಿ ಮಂಗಳೂರು – ಕಾರವಾರದವರೆಗಿನ ರೈಲ್ವೇ ವ್ಯವಸ್ಥೆಯನ್ನು ನೋಡಿಕೊಳ್ಳುತ್ತಿರುವ ಕೊಂಕಣ್ ರೈಲ್ವೇಯನ್ನು ನೈಋತ್ಯ ರೈಲ್ವೇಗೆ ಸೇರಿಸಿದರೆ ಕರಾವಳಿಗರಿಗೆ ಬಹಳಷ್ಟು ಅನುಕೂಲವಾಗಲಿದೆ. ಈ ಬೆಂಗಳೂರು – ವಾಸ್ಕೋ ರೈಲು ನಮ್ಮ ದಶಕದ ಕನಸಿದು.
– ವಿವೇಕ್ ನಾಯಕ್, ಸಂಚಾಲಕರು, ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿ ಕುಂದಾಪುರ