ಬೆಂಗಳೂರು: ನೇಪಾಳದಿಂದ ಕರೆತಂದು ಬೆಂಗಳೂರಿನಲ್ಲಿ ಕೆಲಸ ಕೊಡಿಸಿದ ವ್ಯಕ್ತಿಯೊಬ್ಬನನ್ನು ಆತನ ಸೋದರ ಸಂಬಂಧಿಯೇ ಮದ್ಯದ ಅಮಲಿನಲ್ಲಿ ಇರಿದು ಕೊಂದಿರುವ ಘಟನೆ ಬಾಗಲೂರಿನ ಕಣ್ಣೂರು ಎಂಬಲ್ಲಿ ಶನಿವಾರ ರಾತ್ರಿ ಸಂಭವಿಸಿದೆ. ವಿನೋದ್ (31) ಕೊಲೆಯಾದ ವ್ಯಕ್ತಿ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಬಾಗಲೂರು ಠಾಣೆ ಪೊಲೀಸರು, ಆರೋಪಿ ಹೇಮ್‌ರಾಜ್ ಎಂಬಾತನನ್ನು ಬಂಧಿಸಿದ್ದಾರೆ.
ನೇಪಾಳ ಮೂಲದ ವಿನೋದ್ ಕಳೆದ ಹಲವು ವರ್ಷಗಳಿಂದ ಬಾಗಲೂರು ಬಳಿಯ ಕಣ್ಣೂರಿನ ಹಾರಿಜಾನ್ ನೋಟ್‌ಬುಕ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ. ಆತನ ಪತ್ನಿ ಮತ್ತು ಮಗು ನೇಪಾಳದಲ್ಲೇ ನೆಲೆಸಿದ್ದಾರೆ. ಇತ್ತೀಚೆಗೆ ನೇಪಾಳಕ್ಕೆ ತೆರಳಿದ್ದ ವಿನೋದ್ ಒಂದು ವಾರದ ಹಿಂದಷ್ಟೇ ತನ್ನ ಚಿಕ್ಕಪ್ಪನ ಮಗ ಹೇಮರಾಜ್ ಮತ್ತು ಆತನ ಇಬ್ಬರು ಸ್ನೇಹಿತರನ್ನು ಬೆಂಗಳೂರಿಗೆ ಕರೆತಂದು ಕೆಲಸ ಕೊಡಿಸಿದ್ದ. ನಾಲ್ವರೂ ಒಂದೇ ಕೊಠಡಿಯಲ್ಲೇ ವಾಸವಿದ್ದರು.
ಮದ್ಯದ ಪಾರ್ಟಿಯಲ್ಲಿ ಅನಾಹುತ: ಶನಿವಾರ ರಾತ್ರಿ ನಾಲ್ವರೂ ಸೇರಿ ಮದ್ಯ ಸೇವಿಸಿದ್ದಾರೆ. ಮದ್ಯದ ಅಮಲಿನಲ್ಲಿ ಹೇಮರಾಜ್ ಜೋರಾಗಿ ಕೂಗಲಾರಂಭಿಸಿದ್ದ. ಈ ಸಂದರ್ಭದಲ್ಲಿ ಆಕ್ಷೇಪ ವ್ಯಕ್ತಪಡಿಸಿದ ವಿನೋದ್, ಗಲಾಟೆ ಮಾಡಿದರೆ ಮಾಲೀಕರು ಮನೆ ಖಾಲಿ ಮಾಡಿಸುತ್ತಾರೆ. ಆದ್ದರಿಂದ ಸುಮ್ಮನಿರುವಂತೆ ಹೇಮರಾಜ್‌ನಿಗೆ ತಿಳಿಸಿದ್ದ. ಆದರೆ, ಹೇಮರಾಜ್ ಗಲಾಟೆ ಮುಂದುವರಿಸಿದ್ದರಿಂದ ಇಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದು ಪರಸ್ಪರ ಕೈ ಮಿಲಾಯಿಸಿಕೊಂಡಿದ್ದಾರೆ.
ವಿನೋದ್ ತನ್ನನ್ನು ಥಳಿಸಿದಾಗ ತಪ್ಪಿಸಿಕೊಳ್ಳಲು ಹೇಮರಾಜ್ ಅಡುಗೆ ಕೋಣೆಗೆ ತೆರಳಿದ್ದ. ಆದರೆ, ಅಲ್ಲಿಗೂ ನುಗ್ಗಿದ ವಿನೋದ್ ಮತ್ತೆ ಹಲ್ಲೆಗೆ ಮುಂದಾದಾಗ ಪಕ್ಕದಲ್ಲೇ ಇದ್ದ ಚಾಕು ತೆಗೆದುಕೊಂಡ ಹೇಮರಾಜ್, ವಿನೋದ್‌ನ ಹೊಟ್ಟೆಗೆ ಇರಿದಿದ್ದಾನೆ. ಇದರಿಂದ ರಕ್ತಸ್ರಾವವಾಗಿ ಕುಸಿದು ಬಿದ್ದ ವಿನೋದ್‌ನನ್ನು ಇಬ್ಬರು ಸ್ನೇಹಿತರು ಆಸ್ಪತ್ರೆಗೆ ಸಾಗಿಸಿದರಾದರೂ ಮಾರ್ಗಮಧ್ಯೆ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಚಾಕು ಇರಿತದಿಂದ ವಿನೋದ್ ಹೊಟ್ಟೆಯಭಾಗದಲ್ಲಿ ಎರಡು ಇಂಚು ಗಾಯವಾಗಿದೆ.
ದೈಹಿಕವಾಗಿ ಸಧೃಡವಾಗಿರದ ವಿನೋದ್ ಚಾಕು ಇರಿತದ ನಂತರ ಹೃದಯಾಘಾತದಿಂದ ಮೃತಟ್ಟಿರುವ ಸಾಧ್ಯತೆಯಿದೆ. ಸದ್ಯ ಮೃತದೇಹವನ್ನು ಅಂಬೇಡ್ಕರ್ ಆಸ್ಪತ್ರೆಯಲ್ಲಿ ಇರಿಸಲಾಗಿದ್ದು, ಆತನ ಪೋಷಕರಿಗೆ ಮಾಹಿತಿ ನೀಡಲಾಗಿದೆ, ಅವರು ಆಗಮಿಸಿದ ನಂತರ ಮರಣೋತ್ತರ ಪರೀಕ್ಷೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ತನ್ನಿಂದ ಇರಿತಕ್ಕೊಳಗಾದ ವಿನೋದ್ ಮೃತಪಟ್ಟ ಸುದ್ದಿ ತಿಳಿಯುತ್ತಿದ್ದಂತೆ ಹೇಮರಾಜ್ ಪರಾರಿಯಾಗಲು ಯತ್ನಿಸಿದ್ದು, ಮಾಹಿತಿ ತಿಳಿದ ಪೊಲೀಸರು ಆತನನ್ನು ಬೆನ್ನಟ್ಟಿ ಸೆರೆ ಹಿಡಿದಿದ್ದಾರೆ.