Advertisement

ಬೆಂಗಳೂರು-ಕಾರವಾರ ರೈಲು ಸಂಚಾರ ಮಾರ್ಗ ಬದಲಾವಣೆಗೆ ಮನವಿ

07:10 AM Sep 02, 2017 | Team Udayavani |

ಬೈಂದೂರು: ಹಾಸನ ಹಾಗೂ  ಮೈಸೂರು ಮಾರ್ಗವಾಗಿ ಸಂಚರಿಸುತ್ತಿರುವ ಬೆಂಗಳೂರು- ಕಾರವಾರ- ಬೆಂಗಳೂರು ಎಕ್ಸ್‌ ಪ್ರಸ್‌ ರೈಲನ್ನು ನೂತನವಾಗಿ ಚಾಲನೆಗೊಂಡ ಹಾಸನ- ಶ್ರವಣಬೆಳಗೊಳ- ಯಶವಂತಪುರ ಮಾರ್ಗವಾಗಿ ಸಂಚರಿಸುವಂತೆ ಮಾಡ ಬೇಕೆಂದು ಬೈಂದೂರಿನ ಮೂಕಾಂಬಿಕಾ ರೈಲ್ವೇ ಯಾತ್ರಿ ಸಂಘದ ಅಧ್ಯಕ್ಷ ಹಾಗೂ ರಾಷ್ಟ್ರೀಯ ರೈಲ್ವೇ ಗ್ರಾಹಕರ ಸಮಾಲೋಚನ ಸಮಿತಿಯ ಸದಸ್ಯ ಕೆ. ವೆಂಕಟೇಶ ಕಿಣಿ ದಕ್ಷಿಣ ಪಶ್ಚಿಮ ರೈಲ್ವೇಯ ಹುಬ್ಬಳ್ಳಿ ವಲಯದ ಮಹಾ ಪ್ರಬಂಧಕರನ್ನು ವಿನಂತಿಸಿದ್ದಾರೆ. 

Advertisement

ಕರಾವಳಿ ಕರ್ನಾಟಕವನ್ನು ರಾಜ್ಯ ರಾಜಧಾನಿಯೊಂದಿಗೆ ಬೆಸೆಯುವ ಈ ಏಕೈಕ ಪ್ರಮುಖ ರೈಲು ಈಗ 750 ಕಿ.ಮೀ. ದೀರ್ಘ‌ವಾದ ಸುತ್ತುಬಳಸಿನ ಮಾರ್ಗದಲ್ಲಿ ಸಾಗುತ್ತದೆ. ಇದರ ಪ್ರಯಾಣಕ್ಕೆ 18 ಗಂಟೆಗಳು ತಗಲುತ್ತವೆ. ಪರಿಣಾಮವಾಗಿ ಬೆಂಗಳೂರು-ಕಾರವಾರ ನಡುವಿನ ಪ್ರಯಾ ಣಿಕರಿಗೆ ಅನುಕೂಲವಾಗುತ್ತಿಲ್ಲ. ಹೀಗಾಗಿ ಹಲವಾರು ಜನರು ಹತ್ತು ಗಂಟೆಯಲ್ಲಿ ಕ್ರಮಿಸುವ ಬಸ್‌ಗಳನ್ನು ಆಶ್ರಯಿಸುತ್ತಿದ್ದಾರೆ. ರೈಲ್ವೇಗೆ ಇದರಿಂದ ಆದಾಯ ನಷ್ಟ ಆಗುವುದರ ಜತೆಗೆ ರೈಲ್ವೇ ಸೇವೆಯ ಕುರಿತು ಜನರಲ್ಲಿ ಸದ್ಭಾವನೆ ಮೂಡುವುದಿಲ್ಲ. ರಾಜ್ಯದ ಎಲ್ಲ ಜಿಲ್ಲೆಗಳಿಂದ ಬೆಂಗಳೂರಿಗೆ ಶೀಘ್ರ ತಲಪುವ  ರಾತ್ರಿ ರೈಲುಗಳಿವೆ. ಆದರೆ ಕರಾವಳಿಗೆ ಈ ಸೌಲಭ್ಯವಿಲ್ಲ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ. 

ಬೆಂಗಳೂರು-ಕಾರವಾರ ನೇರ ರೈಲು ಸಂಚಾರದ ಪ್ರಸ್ತಾವನೆ ಹಿಂದೆ ಹುಬ್ಬಳ್ಳಿಯಲ್ಲಿ ನಡೆದ ವಲಯ ರೈಲ್ವೇ ಗ್ರಾಹಕರ ಸಮಾಲೋಚನಾ ಸಮಿತಿಯ ಸಭೆಯಲ್ಲಿ ಚರ್ಚಿಸಲಾಗಿತ್ತು. ಆಗ ಅದನ್ನು ಮೈಸೂರು ಪ್ರತಿನಿಧಿ ವಿರೋಧಿಸಿದ್ದರಿಂದ ನಿರ್ಧಾರ ಕೈಗೊಳ್ಳಲಿಲ್ಲ. ಈ ರೈಲನ್ನು ಮೈಸೂರಿನಿಂದ ಆರಂಭಿಸಿ ಬೆಂಗಳೂರು-ಯಶವಂತಪುರ- ಶ್ರವಣಬೆಳಗೊಳ- ಹಾಸನ ಮೂಲಕ ಓಡಿಸಿದರೆ ಎಲ್ಲ ಪ್ರದೇಶಗಳ ಅಗತ್ಯ ಈಡೇರುತ್ತದೆ. ಅದಕ್ಕೆ ಹೊಂದಿಕೆಯಾಗುವಂತೆ ಮೈಸೂರು-ಧಾರವಾಡ ಎಕ್ಸ್‌ಪ್ರೆಸ್‌ ರೈಲಿನ ವೇಳೆಯನ್ನು ಬದಲಾಯಿಸುವ ಮೂಲಕ ಮೈಸೂರು-ಹಾಸನ ನಡುವಿನ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡ ಬಹುದು. ಇದರೊಂದಿಗೆ ಬೆಂಗಳೂರು- ಕಾರವಾರ ರೈಲಿನ ಮಂಗಳೂರು-ಕಣ್ಣೂರು ಬೋಗಿಗಳನ್ನು ಮಂಗಳೂರು ಜಂಕ್ಷನ್‌ನಲ್ಲಿ ಜೋಡಿಸುವಂತೆ ಮಾಡಿದರೆ ಅಲ್ಲಿಯೂ 45 ನಿಮಿಷ ಉಳಿತಾಯವಾಗಿ ಒಟ್ಟು ಪ್ರಯಾಣದ ಅವಧಿ 4 ಗಂಟೆ 45 ನಿಮಿಷ ಕಡಿಮೆಯಾಗುತ್ತದೆ ಎಂಬ ಸಲಹೆಯನ್ನು ತಮ್ಮ ಪತ್ರದಲ್ಲಿ ನೀಡಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next