ಬೆಂಗಳೂರು: ಬೆಂಗಳೂರು,ಮೈಸೂರು ಸೇರಿದಂತೆ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಸತತ ಎರಡನೇ ದಿನವೂ ವರುಣನ ಕೃಪೆಯಿಂದ ಮಳೆಯಾಗಿದೆ. ಮಂಗಳವಾರ ಕೂಡ ಮಳೆ ಬೀಳುವ ವಾತಾವರಣ ಮುಂದುವರಿಯುವ ಸಾಧ್ಯತೆ ಇದೆ.
ಮಂಡ್ಯ, ಮೈಸೂರು, ತುಮಕೂರು, ಬೆಂಗಳೂರು ಸೇರಿದಂತೆ ಹಳೆಯ ಮೈಸೂರು ಭಾಗದ ಕೆಲ ಪ್ರದೇಶಗಳಲ್ಲಿ ಸೋಮವಾರ ಸಂಜೆ ಉತ್ತಮ ಮಳೆಯಾಗಿದೆ. ಮೈಸೂರಿನಲ್ಲಿ ಅತಿ ಹೆಚ್ಚು 38 ಮಿ.ಮೀ. ಮಳೆ ದಾಖಲಾಗಿದೆ.
ಬೆಂಗಳೂರಲ್ಲಿ ಆಲಿಕಲ್ಲು ಸಹಿತ 25 ಮಿ.ಮೀ. ಮಳೆಯಾಗಿದ್ದು, ಗಾಳಿಯ ರಭಸಕ್ಕೆ 30ಕ್ಕೂ ಹೆಚ್ಚು ಕಡೆ ಮರ ಮತ್ತು ಮರದ ರೆಂಬೆಗಳು ನೆಲಕಚ್ಚಿವೆ.
ಉಳಿದಂತೆ ವಿಜಯಪುರ, ಬಾಗಲಕೋಟೆ, ಚಿತ್ರದುರ್ಗ, ಚಿಕ್ಕಮಗಳೂರಿನಲ್ಲಿ ತುಂತುರು ಮಳೆಹನಿ ಬಿದ್ದಿದೆ. ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಉಷ್ಣಾಂಶ ಸಾಮಾನ್ಯಕ್ಕಿಂತ ಎರಡು ಡಿಗ್ರಿ ಸೆಲ್ಸಿಯಸ್ ಹೆಚ್ಚಿದ್ದು, ಜನ ಬಿಸಿಲಿನ ಧಗೆಗೆ ಬಸವಳಿದರು.
ಹಳೆಯ ಮೈಸೂರು ಭಾಗದಲ್ಲಿ ಆಗುತ್ತಿರುವುದು ಪೂರ್ವ ಮುಂಗಾರು ಮಳೆ. ಹೆಚ್ಚು-ಕಡಿಮೆ ಮಂಗಳವಾರ ಕೂಡ ಇದೇ ವಾತಾವರಣ ಮುಂದುವರಿಯಲಿದ್ದು, ಸ್ವಲ್ಪ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಬೆಂಗಳೂರು ಪ್ರಾದೇಶಿಕ ಕಚೇರಿ ಅಧಿಕಾರಿಗಳು ತಿಳಿಸಿದ್ದಾರೆ.