Advertisement

Bangalore Karaga: ಇಂದಿನಿಂದ ಐತಿಹಾಸಿಕ ಬೆಂಗಳೂರು ಕರಗ

08:16 AM Apr 15, 2024 | Team Udayavani |

ಬೆಂಗಳೂರು: ಐತಿಹಾಸಿಕ ಬೆಂಗಳೂರು ಕರಗ ಉತ್ಸವ ಕ್ಷಣಗಣನೆ ಆರಂಭವಾಗಿದ್ದು, ಧರ್ಮರಾಯಸ್ವಾಮಿ ದೇಗುಲದಲ್ಲಿ ಪೂಜಾ ಕೈಂಕರ್ಯಗಳು ಮೇಳೈಸಿವೆ. ಏ.15ರಂದು ರಾತ್ರಿ 10 ಗಂಟೆಗೆ ದೇವರ ಉತ್ಸವ ನಡೆ ಯಲಿದ್ದು, ಮುಂಜಾನೆ 3 ಗಂಟೆಗೆ ಧ್ವಜಾರೋಹ ಣದೊಂದಿಗೆ ಉತ್ಸವಕ್ಕೆ ಚಾಲನೆ ದೊರೆಯಲಿದೆ.

Advertisement

ಕರಗದ 9 ದಿನಗಳು ದೇವಾಲಯದಲ್ಲಿ ವಿಶೇಷ ಪೂಜೆ ನಡೆಯಲಿದ್ದು, 20ರಂದು ಆರತಿ ದೀಪ ಬೆಳಗುವ ಕಾರ್ಯಕ್ರಮ ನಡೆಯಲಿದೆ. ವಿಶೇಷ ಅಂದರೆ ಈ ವರ್ಷ 3 ಸಾವಿರಕ್ಕೂ ಅಧಿಕ ವೀರಕುಮಾರರು ಭಾಗವಹಿ ಸಲಿದ್ದಾರೆ. ಅವರಿಗೆ ಧರ್ಮರಾಯಸ್ವಾಮಿ ದೇವಸ್ಥಾನ ದಿಂದ ಉಚಿತವಾಗಿ ಕೆಂಪು ವಸ್ತ್ರ, ಪೇಟ ನೀಡಲಾಗು ವುದು. ಜತೆಗೆ ದೀಕ್ಷೆ ತೆಗೆದುಕೊಳ್ಳುವವರಿಗೆ ದೀಕ್ಷಾ ಖಡ್ಗಗಳನ್ನು ಉಚಿತವಾಗಿ ನೀಡಲಾಗುವುದು ಎಂದು ಧರ್ಮರಾಯಸ್ವಾಮಿ ದೇವಾಲಯದ ವ್ಯವಸ್ಥಾಪನಾ ಸಮಿತಿ ತಿಳಿಸಿದೆ.

ಏ.23ರಂದು ಕರಗ ಶಕ್ತ್ಯೂ ತ್ಸವ: ಸಂಪಂಗಿ ಕೆರೆ ಅಂಗಳದ ಶಕ್ತಿ ಪೀಠದಲ್ಲಿ ಏ.21ರಂದು ರಾತ್ರಿ 3 ಗಂಟೆಗೆ ಹಸಿ ಕರಗ ನಡೆಯಲಿದೆ. 22ರಂದು ರಾತ್ರಿ 12 ಗಂಟೆಗೆ ಪೊಂಗಲು ಸೇವೆ (ಪುರಾಣ ಕಥನ) ಜತೆಗೆ 23ರಂದು ರಾತ್ರಿ 12.30ಕ್ಕೆ ಕರಗ ಶಕ್ತ್ಯೂ ತ್ಸವ ಮತ್ತು ಧರ್ಮರಾಯ ಸ್ವಾಮಿ ಮಹಾರಥೋತ್ಸವ ಜರುಗಲಿದೆ. 24ರಂದು ರಾತ್ರಿ 4ಗಂಟೆಗೆ ದೇವಸ್ಥಾನದಲ್ಲಿ ಗಾವು ಶಾಂತಿ ಕಾರ್ಯಕ್ರಮ ಮತ್ತು 25ರಂದು ವಸಂತೋತ್ಸವ ಧ್ವಜಾರೋಹಣ ಕಾರ್ಯಕ್ರಮ ನಡೆಯಲಿದೆ ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ಸತೀಶ್‌ ಹೇಳಿದ್ದಾರೆ.

23ರಂದು ರಾತ್ರಿ 11.30ಕ್ಕೆ ರಥಗಳು ಪೂರ್ವಾಭಿ ಮುಖವಾಗಿ ಸ್ವಲ್ಪದೂರ ಚಲಿಸಿ ನಗರ್ತ ಪೇಟೆ, ದೊಡ್ಡ ಪೇಟೆ ಮೂಲಕ ಪ್ರಾತಃಕಾಲದ ವೇಳೆಗೆ ಶ್ರೀಕೃಷ್ಣರಾಜ ಮಾರ್ಕೆಟ್‌ ಚೌಕವನ್ನು ಸುತ್ತುವರಿದ ನಂತರ ದೇವಸ್ಥಾನವನ್ನು ತಲುಪಲಿದೆ ಎಂದಿದ್ದಾರೆ.

ತಮಿಳುನಾಡು ಸೇರಿದಂತೆ ಹಲವು ಕಡೆಗಳಿಂದ 200 ಮಂದಿ ಹೂವು ಸಿದ್ಧಪಡಿಸುವ ತಂಡ ಆಗಮಿಸಲಿದೆ. ಕರಗಕ್ಕೆ ಸೇಲಂ ಮೊಗ್ಗನ್ನು ಬಳಕೆ ಮಾಡುವುದು ರೂಢಿ. ಹೀಗಾಗಿ ಕರಗ ಮುಗಿಯುವವರೆಗೆ ಪ್ರತಿದಿನ ಸೇಲಂನಿಂದ ಮಲ್ಲಿಗೆ ಮೊಗ್ಗು ಬೆಂಗಳೂರಿಗೆ ಪೂರೈಕೆ ಆಗಲಿದೆ. ಮೈಸೂರು ಮಲ್ಲಿಗೆಯನ್ನೂ ಬಳಸಲಾಗುತ್ತದೆ. ಈ ಬಾರಿ ಕೇರಳದಿಂದ ಸಾಂಸ್ಕೃತಿಕ ತಂಡ ಕೂಡ ಆಗಮಿಸಲಿದೆ ಎಂದು ತಿಳಿಸಿದ್ದಾರೆ.

Advertisement

ಜ್ಞಾನೇಂದ್ರ ಅವರೇ ಕರಗ ಹೊರುತ್ತಾರೆ: ಧರ್ಮರಾ ಯಸ್ವಾಮಿ ದೇವಾಲಯದ ವ್ಯವಸ್ಥಾಪನಾ ಸಮಿತಿ ಸದಸ್ಯರೂ ಆಗಿರುವ ಅರ್ಚಕ ಎ.ಜ್ಞಾನೇಂದ್ರ ಅವರು ಈ ಬಾರಿಯೂ ಕರಗ ಹೊರಲಿದ್ದಾರೆ. ಈಗಾಗಲೇ ದೇವಾಲಯ ಸೇರಿರುವ ಅವರು, ಜ್ಞಾನ, ಯೋಗ ಸೇರಿ ಧಾರ್ಮಿಕ ಕೈಂಕರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ದ್ರೌಪದಿ ಸಹಿತ ಧರ್ಮರಾಯ ಸ್ವಾಮಿ ಪರಿವಾರವನ್ನು ಹೊತ್ತು ಸಾಗುವ ಬೃಹತ್‌ ಮರದ ತೇರು ಆಲಂಕೃತಗೊಂಡಿದ್ದು ರಥೋತ್ಸವಕ್ಕೆ ಅಣಿಯಾಗಿದೆ. ಜರಗನಹಳ್ಳಿಯ ಕುಲಬಾಂಧವರು ಪ್ರತಿ ವರ್ಷದಂತೆ ಬಿದಿರಿನ ಮರವನ್ನು ತರಲಿದ್ದು, ಅದನ್ನು ದೇವಾಲಯದ ಆವರಣದಲ್ಲಿ ನೆಟ್ಟು, ಸೋಮವಾರ ರಾತ್ರಿ ರಥೋತ್ಸವ ಹಾಗೂ ಧ್ವಜಾರೋಹಣ ಮಾಡುವ ಮೂಲಕ ಉತ್ಸವಕ್ಕೆ ಚಾಲನೆ ನೀಡಲಾಗುವುದು. ಉತ್ಸವದ ಯಶಸ್ಸಿಗೆ ವಹಿ°ಕುಲ ಕ್ಷತ್ರಿಯ ಸಮಾಜ ಬಾಂಧವರು, ಗೌಡರು, ಗಣಾಚಾರಿಗಳು, ಗಂಟೆ ಪೂಜಾರಿಗಳು, ಚಾಕರೀದಾರರು ಸಿದ್ಧತೆಯಲ್ಲಿ ತೊಡಗಿಕೊಂಡಿದ್ದಾರೆ ಎಂದು ದೇವಸ್ಥಾನದ ವ್ಯವಸ್ಥಾಪಕ ಮಂಡಳಿ ತಿಳಿಸಿದೆ.

ರಸ್ತೆ ದುರಸ್ತಿ ಆಗದ ಗಲ್ಲಿಗೆ ಕರಗ ಬರಲ್ಲ, ಬಿಡಿ ಮಲ್ಲಿಗೆ ಹೂಗಳನ್ನೂ ಮಾತ್ರ ಅರ್ಪಿಸಿ: ಕರಗ ಸಮಿತಿ ಮನವಿ ರಸ್ತೆ ದುರಸ್ತಿ ಆಗಿರುವ ಪ್ರದೇಶ ಮತ್ತು ಗಲ್ಲಿಗಳಿಗೆ ಕರಗ ಬರಲಾಗುವುದಿಲ್ಲ. ಅಂತಹ ಸ್ಥಳಗಳಲ್ಲಿ ರಸ್ತೆಯ ಮುಖ್ಯ ಭಾಗದಲ್ಲಿಯೇ ಪೂಜೆ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಧರ್ಮರಾಯಸ್ವಾಮಿ ದೇವಾಲಯದ ವ್ಯವಸ್ಥಾಪನಾ ಸಮಿತಿ ಭಕ್ತರಲ್ಲಿ ಮನವಿ ಮಾಡಿದೆ. ಭಕ್ತರು ಕರಗದ ಮೇಲೆ ಬಿಡಿ ಮಲ್ಲಿಗೆ ಹೂವುಗಳನ್ನು ಮಾತ್ರ ಸಮರ್ಪಿಸಬೇಕು. ಗಂಧದ ಪುಡಿ, ಅರಿಶಿನಪುಡಿ, ಕುಂಕುಮ, ಕಲ್ಯಾಣ ಸೇವೆ, ಬಾಳೆಹಣ್ಣು, ಧವನ ಮುಂತಾದ ಪೂಜಾ ಸಾಮಗ್ರಿಗಳನ್ನು ಕರಗದ ಮೇಲೆ ಅರ್ಪಿಸುವಂತಿಲ್ಲ ಎಂದಿದೆ.

ಕರಗ ಉತ್ಸವಕ್ಕೆ ಪಾಲಿಕೆ 1.5 ಕೋಟಿ ರೂ. ಮೀಸಲಿಟ್ಟಿದೆ. ಆದರೆ, ಇನ್ನೂ ಬಿಡುಗಡೆ ಮಾಡಿಲ್ಲ. ಈ ಹಿನ್ನೆಲೆಯಲ್ಲಿ ಸಮಿತಿಯಿಂದಲೇ ಸಿದ್ಧತಾ ಕಾರ್ಯ ಕೈಗೊಳ್ಳಲಾಗಿದೆ. ಶೀಘ್ರದಲ್ಲೇ ಅನುದಾನ ಬಿಡುಗಡೆ ಮಾಡುವ ನಿರೀಕ್ಷೆಯಿದೆ.-ಕೆ.ಸತೀಶ್‌, ಅಧ್ಯಕ್ಷ, ಧರ್ಮರಾಯ ದೇಗುಲ ವ್ಯವಸ್ಥಾಪನಾ ಸಮಿತಿ.

ಐತಿಹಾಸಿಕ ಬೆಂಗಳೂರು ಕರಗಕ್ಕೆ ಚುನಾವಣಾ ನೀತಿ ಸಂಹಿತೆ ಅಡ್ಡಿ ಆಗುವುದಿಲ್ಲ. ಪ್ರತಿ ವರ್ಷ ಪಾಲಿಕೆ ಕರಗ ಉತ್ಸವಕ್ಕೆ ಅನುದಾನ ನೀಡುತ್ತದೆ. ಅದೇ ರೀತಿಯಲ್ಲಿ ಈ ವರ್ಷವೂ ಬಿಡುಗಡೆ ಮಾಡಲಿದೆ.-ಪಿ.ಆರ್‌.ರಮೇಶ್‌, ಕಾಂಗ್ರೆಸ್‌ ಹಿರಿಯ ಮುಖಂಡ.

Advertisement

Udayavani is now on Telegram. Click here to join our channel and stay updated with the latest news.

Next