ಉಡುಪಿ: ನಾಡು ಕಟ್ಟಲು, ಬೆಂಗಳೂರನ್ನು ನಾಡಿನ ರಾಜಧಾನಿಯಾಗಿಸಲು ಕೆಂಪೇಗೌಡರು ನೀಡಿದ ಕೊಡುಗೆ ಅಮೂಲ್ಯ ಎಂದು ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ ಹೇಳಿದರು.
ಅವರು ಶುಕ್ರವಾರ ಜಿಲ್ಲಾಡಳಿತ, ಜಿ.ಪಂ., ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆದಿಉಡುಪಿ ಪ್ರೌಢಶಾಲೆಯಲ್ಲಿ ಆಯೋಜಿಸಿದ ಕೆಂಪೇಗೌಡ ಜಯಂತಿಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ಅನುರಾದ ಜಿ ಅವರು, ಐದು ಶತಮಾನಗಳ ಹಿಂದೆ ಬೆಂಗಳೂರಿನ ಬೆಳವಣಿಗೆಗೆ ಅಡಿಪಾಯ ಹಾಕಿದ ಮಹಾನ್ ವ್ಯಕ್ತಿ ಎಂದರು. ವಿಶೇಷ ಉಪನ್ಯಾಸವನ್ನು ಹಿರಿಯಡ್ಕ ಸ.ಪ.ಪೂ. ಕಾಲೇಜಿನ ಕನ್ನಡ ಉಪನ್ಯಾಸಕಿ ನಳಿನಾದೇವಿ ಎಂ. ಆರ್. ನೀಡಿ, ಮಹಾದೊಡ್ಡ ನಗರವಾಗಿ ಇಂದು ಕಂಗೊಳಿಸಲು ಕೆಂಪೇಗೌಡರು ಮತ್ತು ಅವರ ಕುಟುಂಬದ ತ್ಯಾಗ ಬಲಿದಾನಗಳು ಸ್ಮರಣೀಯ. ಬೆಂಗಳೂರು ರಾಜಧಾನಿಯಾದ ಹಿನ್ನೆಲೆ, ಕೆರೆ, ದೇವಾಲಯಗಳು, ಎಲ್ಲ ವರ್ಗದವರಿಗೆ ಪೇಟೆ ನಿರ್ಮಾಣ, ಭೈರವ ನಾಣ್ಯ ಚಲಾವಣೆ ಮುಂತಾದ ಜನಪರ ಲೋಕೋಪಯೋಗಿ ಕಾರ್ಯಕ್ರಮಗಳನ್ನು ಅಧಿಕಾರವಧಿಯಲ್ಲಿ ಮಾಡಿರುವ ಬಗ್ಗೆ ಮಾಹಿತಿ ನೀಡಿದರು. ಮುಖ್ಯ ಶಿಕ್ಷಕಿ ಕವಿತಾ, ಆಡಳಿತ ಮಂಡಳಿ ಕಾರ್ಯದರ್ಶಿ ಟಿ. ಗಣೇಶ್ ರಾವ್ ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿ ಕುಮಾರ್ ಸ್ವಾಗತಿಸಿ ಶಂಕರ್‌ದಾಸ್ ಚಟ್ಕಳ್ ನಿರೂಪಿಸಿದರು. ಶಾಲಾ ಮಕ್ಕಳಿಗೆ ಸೈಕಲ್ ವಿತರಣೆ ನಡೆಯಿತು.