ಬೆಂಗಳೂರು: ರಾಜ್ಯ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ಜವಾಹರಲಾಲ್ ನೆಹರು ಅತ್ಯಾಧುನಿಕ ಸಂಶೋಧನಾ ಕೇಂದ್ರ ಸಹಯೋಗದಲ್ಲಿ ಡಿ.7 ಹಾಗೂ 8ರಂದು ನಗರದ ಲಲಿತ್ ಅಶೋಕ ಹೋಟೆಲ್‌ನಲ್ಲಿ ಒಂಬತ್ತನೇ ಆವೃತ್ತಿಯ “ಬೆಂಗಳೂರು ಇಂಡಿಯಾ ನ್ಯಾನೋ-2017′ ಸಮ್ಮೇಳನ ನಡೆಯಲಿದೆ.
ಸಮ್ಮೇಳನದ ಪೂರ್ವಭಾವಿಯಾಗಿ ನಗರದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ನ್ಯಾನೋ ತಂತ್ರಜ್ಞಾನ ವಿಷನ್ ಗ್ರೂಪ್‌ನ ಮುಖ್ಯಸ್ಥರಾದ ಹಿರಿಯ ವಿಜ್ಞಾನಿ ಪ್ರೊ.ಸಿ.ಎನ್.ಆರ್.ರಾವ್ ಮಾತನಾಡಿ, “ನ್ಯಾನೋ ಟೆಕ್ ಸಮ್ಮೇಳನವನ್ನು 2007ರಲ್ಲಿ ಆರಂಭಿಸಿದಾಗ ನ್ಯಾನೋ ತಂತ್ರಜ್ಞಾನವು ಮುಂದಿನ ತಲೆಮಾರಿನ ವಿಜ್ಞಾನವಾಗಲಿದೆ ಎಂದು ಯಾರೊಬ್ಬರೂ ಊಹಿಸಿರಲಿಲ್ಲ.
ಆದರೆ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿವಿಧ ವಲಯಗಳಲ್ಲಿ ನ್ಯಾನೋ ತಂತ್ರಜ್ಞಾನವು ಮಹತ್ವದ್ದಾಗಿದೆ. ಉದ್ಯಮ, ಸಂಶೋಧನೆ ಹಾಗೂ ಶೈಕ್ಷಣಿಕ ವಲಯದ ತಜ್ಞರು ಒಂದೆಡೆ ಒಟ್ಟುಗೂಡಿ ಚರ್ಚೆ ನಡೆಸಲಿದ್ದಾರೆ ಎಂದು ಹೇಳಿದರು. ಐಟಿಬಿಟಿ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತಾ, “ನ್ಯಾನೋ ವಿಜ್ಞಾನ ಮತ್ತು ನ್ಯಾನೋ ತಂತ್ರಜ್ಞಾನ ಸೇರಿದಂತೆ ವೈಜ್ಞಾನಿಕ ವಿಜ್ಞಾನ, ತಂತ್ರಜ್ಞಾನದ ಅಭಿವೃದ್ಧಿ, ಬಳಕೆಗೆ ರಾಜ್ಯ ಸರ್ಕಾರ ಹೆಚ್ಚಿನ ಆದ್ಯತೆ ನೀಡಿದೆ.
ಈ ಬಾರಿಯ ಸಮ್ಮೇಳನದಲ್ಲಿ ನ್ಯಾನೋ ಸೆನ್ಸಾರ್, ಇಂಧನ ಮತ್ತು ಔಷಧ ವಲಯದಲ್ಲಿ ನ್ಯಾನೋ ತಂತ್ರಜ್ಞಾನ ಸೇರಿದಂತೆ ಹೊಸ ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆಯಲಿದೆ. ಯುವ ಉದ್ಯಮಿಗಳು, ಯುವ ಸಂಶೋಧಕರು ತಮ್ಮ ಹೊಸ ಪರಿಕಲ್ಪನೆಗಳನ್ನು ಪ್ರದರ್ಶಿಸಲು ಅವಕಾಶ ಕಲ್ಪಿಸಲಾಗಿದೆ. 13ಕ್ಕೂ ಹೆಚ್ಚು ಸಂವಾದ, ಗೋಷ್ಠಿಗಳಲ್ಲಿ 30ಕ್ಕೂ ಹೆಚ್ಚು ತಜ್ಞರು ವಿಷಯ ಮಂಡಿಸಲಿದ್ದಾರೆ ಎಂದು ತಿಳಿಸಿದರು.