ಬೆಂಗಳೂರು: ಕೇವಲ ಒಂದು ದಿನದ ಎಳೆಯ ಹಸುಗೂಸನ್ನು ಎರಡು ಕಟ್ಟಡಗಳ ನಡುವಿನ ಸಂದಿಯಲ್ಲಿ ಎಸೆದು ಹೋಗಿರುವ ಅಮಾನವೀಯ ಘಟನೆ ತಿಲಕ್‌ನಗರ ಠಾಣಾ ವ್ಯಾಪ್ತಿಯ ಆರ್‌ಬಿಐ ಲೇಔಟ್‌ನಲ್ಲಿ ನಡೆದಿದೆ.
ಆರ್‌ಬಿಐ ಲೇಔಟ್‌ನ ನಿವಾಸಿಗಳಿಗೆ ಬುಧವಾರ ರಾತ್ರಿ ಎರಡು ಕಟ್ಟಡಗಳ ಸಂದಿಯಿಂದ ಸಣ್ಣ ಮಗುವೊಂದು ಕೀರಲು ಧ್ವನಿಯಲ್ಲಿ ಕಿರುಚುವ ಸದ್ದು ಕೇಳಿಸಿತ್ತು. ಅನುಮಾನಗೊಂಡು ಪರಿಶೀಲಿಸಿದಾಗ ಎಲ್ಲೂ ಪತ್ತೆಯಾಗಿರಲಿಲ್ಲ. ಗುರುವಾರ ಬೆಳಗ್ಗೆ ಕಟ್ಟಡದ ಸಂದಿಯಲ್ಲಿ ಸ್ಥಳೀಯರಿಗೆ ಹಸುಗೂಸು ಕಂಡು ಬಂದಿತ್ತು. ಕೂಡಲೇ ಅದನ್ನು ರಕ್ಷಿಸಿ ಇಂದಿರಾ ಗಾಂಧಿ ಆಸ್ಪತ್ರೆಗೆ ದಾಖಲಿಸಿದ್ದರು. ಮಗುವಿನ ತಲೆ ಮತ್ತು ಮೈಯ ಕೆಲವು ಭಾಗಗಳಲ್ಲಿ ಇಲಿಗಳು ಕಚ್ಚಿದ್ದ ಗಾಯಗಳಾಗಿವೆ. ಘಟನೆ ಸಂಬಂಧ ತಿಲಕ ನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಲಿ, ಹೆಗ್ಗಣ ಕಚ್ಚಿದರೂ ಮಗು:
ಪಾರು ಆರ್‌ಬಿಐ ಲೇಔಟ್‌ನಲ್ಲಿ ಒತ್ತೂತ್ತಾಗಿ ಹಲವು ಮನೆಗಳಿವೆ. ಇಲ್ಲಿನ ಎರಡು ಕಟ್ಟಡಗಳ ನಡುವಿನ ಇರುಕಿನ ಜಾಗದಲ್ಲಿ ಬುಧವಾರ ರಾತ್ರಿ ಅಪರಿಚಿತರು ಈ ಎಳೆಯ ಹಸುಳೆಯನ್ನು ಎಸೆದು ಹೋಗಿರುವ ಸಾಧ್ಯತೆಗಳಿವೆ ಎಂಬ ಶಂಕೆ ವ್ಯಕ್ತವಾಗಿದೆ. ಇದು ಅನೈತಿಕ ಸಂಬಂಧಕ್ಕೆ ಹುಟ್ಟಿದ ಮಗುವೇ ಅಥವಾ ಯಾರಾದರೂ ಮಗು ಬೇಡ ಎಂದೇ ಎಸೆದು ಹೋದರೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಭಾಗದ ಸಿಸಿ ಕ್ಯಾಮರಾ ಪರಿಶೀಲಿಸಲಾಗುತ್ತಿದೆ. ಈ ಕಟ್ಟಡಗಳಲ್ಲಿದ್ದ ಇಲಿಗಳು ಮಗುವಿಗೆ ಕಚ್ಚಿ ಗಾಯಗೊಳಿಸಿವೆ. ರಾತ್ರಿ ಇಲಿ, ಹೆಗ್ಗಣಗಳ ಕಡಿತದಿಂದ ಕೀರಲು ಧ್ವನಿಯಲ್ಲಿ ಅತ್ತಿರಬಹುದು. ಮಗು ಪ್ರಾಣ ಉಳಿದಿರುವುದೇ ಅಚ್ಚರಿ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.