Advertisement

ಚೆನ್ನೈ ಕಿಂಗ್ಸ್‌ಗೆ ಸೋಲು, ನಿರ್ಣಾಯಕ ಪಂದ್ಯದಲ್ಲಿ ಮಿಂಚಿದ ಡು ಪ್ಲೆಸಿಸ್‌ ಪಡೆ

11:25 PM May 04, 2022 | Team Udayavani |

ಪುಣೆ: ಪ್ಲೇಆಫ್ ಪೈಪೋಟಿಯಲ್ಲಿ ಉಳಿದುಕೊಳ್ಳಲು ಗೆಲ್ಲಲೇಬೇಕಾಗಿದ್ದ ಐಪಿಎಲ್‌ ಪಂದ್ಯದಲ್ಲಿ ಗೆದ್ದಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ನಿಟ್ಟುಸಿರುಬಿಟ್ಟಿದೆ. ಧೋನಿ ನಾಯಕತ್ವದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಮತ್ತೆ ಸೋಲಿನ ಹಾದಿಗೆ ಮರಳಿದೆ.

Advertisement

ಬುಧವಾರ ಮೊದಲು ಬ್ಯಾಟ್‌ ಮಾಡಿದ ಬೆಂಗಳೂರು 20 ಓವರ್‌ಗಳಲ್ಲಿ 8 ವಿಕೆಟಿಗೆ 173 ರನ್‌ ಗಳಿಸಿತು. ಇದನ್ನು ಬೆನ್ನತ್ತಿದ ಚೆನ್ನೈ 20 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 160 ರನ್‌ ಗಳಿಸಿತು. ಚೆನ್ನೈ ಪರ ಆರಂಭಿಕ ಡೆವೋನ್‌ ಕಾನ್ವೆ (56), ಆಲ್‌ರೌಂಡರ್‌ ಮೊಯಿನ್‌ ಅಲಿ (34) ಮಾತ್ರ ಅತ್ಯುತ್ತಮ ಬ್ಯಾಟಿಂಗ್‌ ಮಾಡಿದರು. ಬೆಂಗಳೂರು ವೇಗಿ ಹರ್ಷಲ್‌ ಪಟೇಲ್‌ (3), ಗ್ಲೆನ್‌ ಮ್ಯಾಕ್ಸ್‌ವೆಲ್‌ (2) ಅತ್ಯುತ್ತಮ ಬೌಲಿಂಗ್‌ ಮಾಡಿದರು.

ಬೆಂಗಳೂರು ಉತ್ತಮ ಮೊತ್ತ: ಮೊದಲು ಬ್ಯಾಟ್‌ ಮಾಡಿದ ಬೆಂಗಳೂರು ಪರ ಮಹಿಪಾಲ್‌ ಲೊಮ್ರಾರ್‌, ಫಾ ಡು ಪ್ಲೆಸಿಸ್‌, ವಿರಾಟ್‌ ಕೊಹ್ಲಿ, ದಿನೇಶ್‌ ಕಾರ್ತಿಕ್‌ ಬ್ಯಾಟಿಂಗ್‌ನಲ್ಲಿ ಮಿಂಚಿದರು. ಆದರೆ ಇವರನ್ನು ತಮ್ಮ “ತೀಕ್ಷ್ಣ’ ಬೌಲಿಂಗ್‌ನಿಂದ ಮಹೀಶ್‌ ತೀಕ್ಷಣ, ಮೊಯಿನ್‌ ಅಲಿ ನಿಯಂತ್ರಿಸಿದರು.

ಫಾ ಡು ಪ್ಲೆಸಿಸ್‌ ಮತ್ತು ವಿರಾಟ್‌ ಕೊಹ್ಲಿ ಆರ್‌ಸಿಬಿಗೆ ಬಿರುಸಿನ ಆರಂಭವಿತ್ತರು. ಚೆನ್ನೈ ಬೌಲರ್‌ಗಳನ್ನು ದಂಡಿಸುತ್ತ ಸಾಗಿ ಹತ್ತರ ಸರಾಸರಿಯಲ್ಲಿ ರನ್‌ ಪೇರಿಸತೊಡಗಿದರು. ಪವರ್‌ ಪ್ಲೇಯಲ್ಲಿ 57 ರನ್‌ ರಾಶಿ ಹಾಕಿದರು. ಇದು ಪ್ರಸಕ್ತ ಐಪಿಎಲ್‌ನಲ್ಲಿ ಆರ್‌ಸಿಬಿಯ ಅತ್ಯಧಿಕ ಪವರ್‌ ಪ್ಲೇ ಗಳಿಕೆಯಾಗಿದೆ. ಇದಕ್ಕೂ ಮೊದಲು ರಾಜಸ್ಥಾನ್‌ ವಿರುದ್ಧ ನೋಲಾಸ್‌ 48 ರನ್‌ ಗಳಿಸಿತ್ತು.

ತಂಡದ ಪ್ರಧಾನ ಬೌಲರ್‌ ಮುಕೇಶ್‌ ಚೌಧರಿ ಇಲ್ಲಿ ಯಾವುದೇ ಪರಿಣಾಮ ಬೀರಲಿಲ್ಲ. ಚೌಧರಿ ಎಸೆತವನ್ನೇ ಸಿಕ್ಸರ್‌ಗೆ ಬಡಿದಟ್ಟಿದ ಡು ಪ್ಲೆಸಿಸ್‌ ಆರಂಭಿಕ ವಿಕೆಟಿಗೆ 50 ರನ್‌ ಜತೆಯಾಟ ಪೂರೈಸಿದರು. ಈ ಜೋಡಿಯನ್ನು ಬೇರ್ಪಡಿಸಲು ಮೊಯಿನ್‌ ಅಲಿ ಬರಬೇಕಾಯಿತು. ಅವರು ಎರಡನೇ ಎಸೆತದಲ್ಲೇ ಡು ಪ್ಲೆಸಿಸ್‌ ವಿಕೆಟ್‌ ಕಿತ್ತು ಚೆನ್ನೈಗೆ ಮೊದಲ ಬ್ರೇಕ್‌ ಒದಗಿಸಿದರು. ಆರ್‌ಸಿಬಿ ಕಪ್ತಾನನ ಗಳಿಕೆ 22 ಎಸೆತಗಳಿಂದ 38 ರನ್‌ (4 ಬೌಂಡರಿ, 1 ಸಿಕ್ಸರ್‌). ಮೊದಲ ವಿಕೆಟಿಗೆ 7.2 ಓವರ್‌ಗಳಿಂದ 62 ರನ್‌ ಬಂತು.

Advertisement

ಗ್ಲೆನ್‌ ಮ್ಯಾಕ್ಸ್‌ವೆಲ್‌ ಅವರನ್ನು ಒನ್‌ಡೌನ್‌ನಲ್ಲಿ ಬ್ಯಾಟಿಂಗ್‌ಗೆ ಇಳಿಸಿದ ಪ್ರಯೋಗ ಯಶಸ್ವಿಯಾಗಲಿಲ್ಲ. ಬೇಕು-ಬೇಡ ಎಂಬ ಗೊಂದಲದಲ್ಲಿ ಅವರು ರನೌಟಾದರು. ಅಲಿ ತಮ್ಮ ಮುಂದಿನ ಓವರ್‌ನಲ್ಲೇ ಕೊಹ್ಲಿ ಅವರನ್ನು ಬೌಲ್ಡ್‌ ಮಾಡಿದರು. ಕೊಹ್ಲಿ ಗಳಿಕೆ 33 ಎಸೆತಗಳಿಂದ 30 ರನ್‌. ಅರ್ಧ ಹಾದಿ ಪೂರ್ತಿಗೊಳ್ಳುವ ವೇಳೆ ಆರ್‌ಸಿಬಿ 3 ವಿಕೆಟಿಗೆ 79 ರನ್‌ ಮಾಡಿತ್ತು. ರಜತ್‌ ಪಾಟೀದಾರ್‌-ಮಹಿಪಾಲ್‌ ಲೊಮ್ರಾರ್‌ ಸೇರಿಕೊಂಡು 15ನೇ ಓವರ್‌ ಮುಕ್ತಾಯಕ್ಕೆ ಮೊತ್ತವನ್ನು 123ಕ್ಕೆ ಏರಿಸಿದರು.

ಡೆತ್‌ ಓವರ್‌ನ ಮೊದಲ ಎಸೆತದಲ್ಲೇ ಮುಕೇಶ್‌ ಚೌಧರಿ ಈ ಜೋಡಿಯನ್ನು ಬೇರ್ಪಡಿಸಿದರು. ಬಳಿಕ ಮಹೀಶ್‌ ತೀಕ್ಷಣ ತೀಕ್ಷ್ಣ ದಾಳಿಯೊಂದನ್ನು ನಡೆಸಿ ಒಂದೇ ಓವರ್‌ನಲ್ಲಿ 3 ವಿಕೆಟ್‌ ಉಡಾಯಿಸಿದರು. ಆರ್‌ಸಿಬಿ ದಿಢೀರ್‌ ಕುಸಿತಕ್ಕೆ ಸಿಲುಕಿತು. ಸತತ 2 ಎಸೆತಗಳಲ್ಲಿ ಲೊಮ್ರಾರ್‌ ಮತ್ತು ಹಸರಂಗ ವಿಕೆಟ್‌ ಕೆಡವಿದ ತೀಕ್ಷಣ, ಅಂತಿಮ ಎಸೆತದಲ್ಲಿ ಶಹಬಾಜ್‌ಗೆ ಪೆವಿಲಿಯನ್‌ ಹಾದಿ ತೋರಿಸಿದರು. ಆದರೆ ದಿನೇಶ್‌ ಕಾರ್ತಿಕ್‌ ಸಿಡಿದು ನಿಂತರು. ಕೊನೆಯ 5 ಓವರ್‌ಗಳಲ್ಲಿ 5 ವಿಕೆಟ್‌ ಉದುರಿಸಿಕೊಂಡರೂ 49 ರನ್‌ ಗಳಿಸುವಲ್ಲಿ ಆರ್‌ಸಿಬಿ ಯಶಸ್ವಿಯಾಗಿತ್ತು.

ಸ್ಯಾಂಟ್ನರ್‌ ಬದಲು ಅಲಿ: ಚೆನ್ನೈ ಈ ಪಂದ್ಯಕ್ಕಾಗಿ ಒಂದು ಬದಲಾವಣೆ ಮಾಡಿಕೊಂಡಿತು. ನ್ಯೂಜಿಲೆಂಡ್‌ ಆಲ್‌ರೌಂಡರ್‌ ಮಿಚೆಲ್‌ ಸ್ಯಾಂಟ್ನರ್‌ ಬದಲು ಇಂಗ್ಲೆಂಡ್‌ ಸವ್ಯಸಾಚಿ ಮೊಯಿನ್‌ ಅಲಿ ಅವರನ್ನು ಆಡಿಸಿತು. ಆದರೆ ಆರ್‌ಸಿಬಿ ತಂಡದಲ್ಲಿ ಯಾವುದೇ ಬದಲಾವಣೆ ಆಗಲಿಲ್ಲ.

ಸಂಕ್ಷಿಪ್ತ ಸ್ಕೋರ್‌: ಬೆಂಗಳೂರು 20 ಓವರ್‌, 173/8 (ಮಹಿಪಾಲ್‌ ಲೊಮ್ರಾರ್‌ 42, ಡು ಪ್ಲೆಸಿಸ್‌ 38, ಮಹೀಶ್‌ ತೀಕ್ಷಣ 27ಕ್ಕೆ 3, ಮೊಯಿನ್‌ ಅಲಿ 28ಕ್ಕೆ 2). ಚೆನ್ನೈ 20 ಓವರ್‌, 160/8 (ಕಾನ್ವೆ 56, ಹರ್ಷಲ್‌ ಪಟೇಲ್‌ 35ಕ್ಕೆ 3, ಮ್ಯಾಕ್ಸ್‌ವೆಲ್‌ 22ಕ್ಕೆ 2).

Advertisement

Udayavani is now on Telegram. Click here to join our channel and stay updated with the latest news.

Next