ಕುದೂರು: ಕೊರೊನಾ ಲಾಕ್‌ಡೌನ್ ಸಂದರ್ಭದಲ್ಲಿ ಸ್ಥಗಿತ ಗೊಂಡಿದ್ದ ಬೆಂಗಳೂರು -ಹಾಸನ ಡೆಮು ರೈಲು ಸಂಚಾರ ಇಂದಿನಿಂದ ಆರಂಭವಾಗಲಿದೆ. ಕೊರೊನಾ ಮೊದಲ ಅಲೆ ಬಳಿಕ ನಿಲ್ಲಿಸಿದ್ದ ಡೆಮು ರೈಲು ಹಾಸನ ನಡುವೆ ಸಂಚರಿಸುತ್ತಿತ್ತು. ಕೊರೊನಾ ನಿಯಂತ್ರಣದ ಹಿನ್ನಲೆ ರೈಲುಗಳ ಸಂಚಾರ ಸ್ಥಗಿತಗೊಂಡಿದ್ದ ಸಂದರ್ಭದಲ್ಲಿ ಡೆಮು ರೈಲು ಸಂಚಾರವೂ ಸ್ಥಗಿತವಾಗಿತ್ತು. ಡೆಮು ರೈಲಿಗೆ ಹೊಂದಿಕೊಂಡಿದ್ದ ನೌಕರರು ರೈಲಿನ ಸ್ಥಗಿತದಿಂದ ತೊಂದರೆ ಗಳಾಗಿದ್ದವು. ಉದಯವಾಣಿ ಹುಬ್ಬಳಿ ರೈಲ್ವೆ ವಿಭಾಗಾಧಿಕಾರಿಗಳಿಗೆ ಗಮನಕ್ಕೆ ತಂದು, ಸಾರ್ವಜನಿಕ ಸಮಸ್ಯೆಯನ್ನು ಆಲಿಸಿ, ಹೀಗೆ ಬಂದು ಹಾಗೆ ಹೋದ ರೈಲು ಎಂದು ಜನವರಿ ತಿಂಗಳಿನಲ್ಲಿ ವಿಶೇಷ ವರದಿ ಪ್ರಕಟವಾಗಿತ್ತು.
ತಾಲೂಕಿನ ಜನರಿಗೆ ಸಂತಸ: ಈಗ ರೈಲ್ವೆ ಇಲಾಖೆಯು ಡೆಮು ರೈಲು ಸಂಚಾರಕ್ಕೆ ವೇಳಾಪಟ್ಟಿ ಬಿಡುಗಡೆ ಮಾಡಿದೆ. ಹೀಗಾಗಿ ಮಾಗಡಿ, ಕುಣಿಗಲ್, ನೆಲಮಂಗಲ ತಾಲೂಕಿನ ಜನರು ಸಂತಸದಲ್ಲಿದ್ದಾರೆ. ಏ.8ರ ಶುಕ್ರವಾರದಿಂದ ಬೆಂಗಳೂರು-ಹಾಸನ ನಡುವೆ ಡೆಮು ರೈಲು ಸಂಚಾರ ಆರಂಭವಾಗಲಿದೆ. ಬೆಂಗಳೂರು ಸಿಟಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಡೆಮು ರೈಲು ಸಂಚಾರ ಪ್ರಾರಂಭವಾಗಲಿದೆ.
ವೇಳಾಪಟ್ಟಿ ವಿವರ: ಭಾನುವಾರ ಹೊರತುಪಡಿಸಿ, ವಾರದಲ್ಲಿ 6 ದಿನ ಸಂಚಾರ ಮಾಡಲಿದ್ದು, ರೈಲು ಪ್ರತಿ ದಿನ ಬೆಳಗ್ಗೆ 9.45ಕ್ಕೆ ಬೆಂಗಳೂರು ಸಿಟಿ ರೈಲು ನಿಲ್ದಾಣದಿಂದ ಹೊರಟು ಯಶವಂತ ಪುರ ರೈಲು ನಿಲ್ದಾಣಕ್ಕೆ 9.57ಕ್ಕೆ ಬರಲಿದೆ. ಅಲ್ಲಿ 3 ನಿಮಿಷ ನಿಲುಗಡೆಯಾಗಲಿದೆ. ನಂತರ ಅಲ್ಲಿಂದ ಮಾಗಡಿಯ ಸೋಲೂರು ನಿಲ್ದಾಣಕ್ಕೆ 10.45ಕ್ಕೆ ಬರಲಿದೆ. ತಿಪ್ಪಸಂದ್ರ ನಿಲ್ದಾಣಕ್ಕೆ 10.50ಕ್ಕೆ, ಕುಣಿಗಲ್ ನಿಲ್ದಾಣಕ್ಕೆ 11.05, ಶ್ರವಣಬೆಳಗೊಳ ನಿಲ್ದಾಣಕ್ಕೆ 12.30, ಚನ್ನರಾಯಪಟ್ಟಣ ರೈಲು ನಿಲ್ದಾಣಕ್ಕೆ 12.45, ಅಲ್ಲಿಂದ ಹಾಸನ ರೈಲು ನಿಲ್ದಾಣಕ್ಕೆ 1.45ಕ್ಕೆ ಬಂದು ಸೇರಲಿದೆ.
ಹಾಸನ ನಿಲ್ದಾಣದಲ್ಲಿ ಸುಮಾರು ಅರ್ಧ ಗಂಟೆ ನಿಲುಗಡೆಯಾದ ನಂತರ ಮಧ್ಯಾಹ್ನ 2.15ಕ್ಕೆ ಬೆಂಗಳೂರಿಗೆ ಹೊರಡುವ ಡೆಮು ರೈಲು ಚನ್ನರಾಯಪಟ್ಟಣಕ್ಕೆ 2.57, ಶ್ರವಣಬೆಳಗೊಳ ರೈಲು ನಿಲ್ದಾಣಕ್ಕೆ 3.10, ಕುಣಿಗಲ್ ನಿಲ್ದಾಣಕ್ಕೆ 4.26, ತಿಪ್ಪಸಂದ್ರಕ್ಕೆ 4.35, ಸೋಲೂರಿಗೆ 4.45, ಯಶವಂತಪುರ ನಿಲ್ದಾಣಕ್ಕೆ 5.30, ಬೆಂಗಳೂರು ಸಿಟಿ ರೈಲು ನಿಲ್ದಾಣಕ್ಕೆ ಸಂಜೆ 6 ಗಂಟೆಗೆ ತಲುಪಲಿದೆ.
ವಿಮಾನ ನಿಲ್ದಾಣಕ್ಕೂ ಅನುಕೂಲ: ಡೆಮು ರೈಲು ಮೆಜೆಸ್ಟಿಕ್ ರೈಲು ನಿಲ್ದಾಣ ತಲುಪಿದ ನಂತರ ದೇವನಹಳ್ಳಿ ಮಾರ್ಗವಾಗಿ ಚಿಕ್ಕಬಳ್ಳಾಪುರ ಮಾರ್ಗವಾಗಿ ಕೋಲಾರಕ್ಕೆ ತೆರಳಲಿದೆ. ಪುನಃ ಅದೇ ಮಾರ್ಗವಾಗಿ ಮರುದಿನ ಹಾಸನಕ್ಕೆ ಬರುವುದರಿಂದ ಚಿಕ್ಕಬಳ್ಳಾಪುರ ಮತ್ತು ಕೋಲಾರಕ್ಕೆ ತೆರಳುವ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಬೆಂಗಳೂರು ವಿಮಾನ ನಿಲ್ದಾಣಕ್ಕೆ ಹೋಗುವವರಿದ್ದರೆ ದೇವನಹಳ್ಳಿ ನಿಲ್ದಾಣದಲ್ಲಿ ಇಳಿದು ಹೋಗಬಹುದು.
ಎಲ್ಲಾ ನಿಲ್ದಾಣಗಳಲ್ಲೂ 8 ಬೋಗಿಗಳಿರುವ ಡೆಮು ರೈಲು ಹಾಸನ -ಬೆಂಗಳೂರು ಸಿಟಿ ರೈಲು ನಿಲ್ದಾಣಗಳ ನಡುವೆ 15 ನಿಲ್ದಾಣದಲ್ಲೂ ನಿಲುಗಡೆಯಾಗಲಿದೆ. ಮೆಜೆಸ್ಟಿಕ್‌ನಿಂದ ಹೊರಡುವ ಡೆಮು ರೈಲು ಪ್ರಯಾಣಿಕರ ದರ ಕೇವಲ 70 ರೂ., ಹೀಗಾಗಿ, ಬಹಳಷ್ಟು ಪ್ರಯಾಣಿಕರು ರೈಲು ಪ್ರಯಾಣವನ್ನೇ ಅವಲಂಬಿಸಬಹುದು ಎಂದು ನಿರೀಕ್ಷಿಸಲಾಗಿದೆ.
06583, 06584 ಎಂಬ ಸಂಖ್ಯೆಯ ರೈಲುಗಳು ಏ.8ರಿಂದ ಆರಂಭವಾಗಲಿದೆ. ರೈಲ್ವೆ ಇಲಾಖೆ ಸಕಲ ಸಿದ್ಧತೆ ಮಾಡಿ ಕೊಂಡಿದೆ. ಪ್ರಯಾಣಿಕರಿಗೆ ಅನುಕೂಲ ವಾಗಲು ವೇಳಾಪಟ್ಟಿ ಬಿಡುಗಡೆ ಮಾಡಲಾಗಿದೆ.
●ಗಿರೀಶ್, ರೈಲ್ವೆ ಸ್ಟೇಷನ್ ಮಾಸ್ಟರ್, ತಿಪ್ಪಸಂದ್ರ
●ಕೆ.ಎಸ್.ಮಂಜುನಾಥ್