Advertisement

ಇಂದಿನಿಂದ ಬೆಂಗಳೂರಲ್ಲಿ “ಮೇಕ್‌ ಇನ್‌ ಇಂಡಿಯಾ’

03:45 AM Feb 13, 2017 | Harsha Rao |

ಬೆಂಗಳೂರು: ಇನ್ವೆಸ್ಟ್‌ ಕರ್ನಾಟಕ, ಪ್ರವಾಸಿ ಭಾರತ್‌ ನಂತರ ಇದೀಗ “ಮೇಕ್‌ ಇನ್‌ ಇಂಡಿಯಾ’ ಉದ್ದಿಮೆದಾರರ ಸಮ್ಮೇಳನಕ್ಕೆ ಕರ್ನಾಟಕ ಸಾಕ್ಷಿಯಾಗುತ್ತಿದ್ದು, ಬಂಡವಾಳ ಹೂಡಿಕೆ ಆಕರ್ಷಿಸುವ ಕುರಿತ ಎರಡು ದಿನಗಳ ಸಮ್ಮೇಳನ ನಗರದಲ್ಲಿ ಸೋಮವಾರದಿಂದ ಪ್ರಾರಂಭವಾಗುತ್ತಿದೆ.

Advertisement

ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಹಾಗೂ ಭಾರತೀಯ ಕೈಗಾರಿಕೆಗಳ ಒಕ್ಕೂಟದ ಸಹಯೋಗದಲ್ಲಿ ನಗರದ ಅಶೋಕ ಹೋಟೆಲ್‌ನಲ್ಲಿ ನಡೆಯುವ ಈ ಉದ್ದಿಮೆದಾರರ ಸಮಾವೇಶಕ್ಕೆ ಹಣಕಾಸು ಸಚಿವ ಅರುಣ್‌ ಜೇಟ್ಲಿ ಚಾಲನೆ
ನೀಡಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ನಗರಾಭಿವೃದ್ಧಿ ಸಚಿವ ಎಂ.ವೆಂಕಯ್ಯ ನಾಯ್ಡು, ರೈಲ್ವೆ ಸಚಿವ ಸುರೇಶ್‌ ಪ್ರಭು, ಸಂಸದೀಯ ವ್ಯವಹಾರಗಳ ಖಾತೆ ಸಚಿವ ಅನಂತ ಕುಮಾರ್‌ ಮುಂತಾದವರು ಭಾಗವಹಿಸಲಿದ್ದಾರೆ.
ದೇಶದಲ್ಲಿ ಬಂಡವಾಳ ಹೂಡಿಕೆಯನ್ನು ಉತ್ತೇಜಿಸುವ ಮೂಲಕ ಉತ್ಪಾದನಾ ವಲಯದಲ್ಲಿ ಹೆಚ್ಚಿನ ಉದ್ಯೋಗಾವಕಾಶ ಸೃಷ್ಟಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಆಯೋಜಿಸುತ್ತಿರುವ “ಮೇಕ್‌ ಇನ್‌ ಇಂಡಿಯಾ’ ಸಮ್ಮೇಳನ ಈ ಮೊದಲು ದೆಹಲಿ ಮತ್ತು ಮುಂಬಯಿನಲ್ಲಿ ನಡೆದಿದ್ದು, ಆ ಬಳಿಕ ಇದೀಗ ಬೆಂಗಳೂರಿನಲ್ಲಿ ನಡೆಯುತ್ತಿರುವುದು ಗಮನಾರ್ಹ.

ದೇಶ-ವಿದೇಶಗಳ ಉದ್ದಿಮೆದಾರರು ಹಾಗೂ ಕೈಗಾರಿಕಾ ವಲಯದ ಪ್ರಮುಖರು ಭಾಗವಹಿಸುವ “ಮೇಕ್‌ ಇನ್‌ ಇಂಡಿಯಾ’ ಸಮಾವೇಶ ಒಂದೆಡೆ ನಡೆಯುತ್ತಿದ್ದರೆ, ಮತ್ತೂಂದೆಡೆ, ದೇಶದ ವೈಮಾನಿಕ ಹಾಗೂ ರಕ್ಷಣಾ ವಲಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಬಂಡವಾಳ ಹೂಡಿಕೆಗೆ ಅವಕಾಶ ಕಲ್ಪಿಸುವ “ಏರೋ ಇಂಡಿಯಾ’ ಏರ್‌ಶೋ ಕೂಡ ಜಕ್ಕೂರಿನ ವಾಯುನೆಲೆಯಲ್ಲಿ ಮಂಗಳವಾರದಿಂದ ಶುರುವಾಗಲಿದೆ. ಈ ರೀತಿ ಏಕ ಕಾಲದಲ್ಲಿ ರಾಜಧಾನಿಯಲ್ಲಿ ಎರಡು ಪ್ರಮುಖ ಜಾಗತಿಕಮಟ್ಟದ ಸಮ್ಮೇಳನಗಳು ನಡೆಯುತ್ತಿರುವುದರ ಪರಿಣಾಮ, ಭವಿಷ್ಯದಲ್ಲಿ ಕರ್ನಾಟಕಕ್ಕೆ ಹೆಚ್ಚಿನ ಪ್ರಮಾಣದ ಬಂಡವಾಳ ಹರಿದು ಬರುವ ಸಾಧ್ಯತೆಯಿದೆ. ಆ ಮೂಲಕ, ರಾಜ್ಯದ ಸಣ್ಣ ಮತ್ತು ಮಧ್ಯಮ ಕೈಗಾರಿಕಾ ವಲಯದ ಅಭಿವೃದ್ಧಿಗೆ ಹೆಚ್ಚಿನ ಒತ್ತು ಸಿಗಲಿದೆ.

“ಮೇಕ್‌ ಇನ್‌ ಇಂಡಿಯಾ’ ಸಮ್ಮೇಳನದಲ್ಲಿ ಏರೋಸ್ಪೇಸ್‌, ರಕ್ಷಣೆ, ಜೈವಿಕ ತಂತ್ರಜ್ಞಾನ, ಔಷಧ, ಜವಳಿ, ಎಂಜಿನಿಯರಿಂಗ್‌, ಮೆಷಿನ್‌ ಟೂಲ್ಸ್‌, ಎಲೆಕ್ಟಾನ್ಸ್‌ ಆ್ಯಂಡ್‌ ಇಲೆಕ್ಟ್ರಿಕಲ್‌, ಕೃಷಿ ಮತ್ತು ಆಹಾರ ಸಂಸ್ಕರಣೆ, ಆಟೊ ಮತ್ತು ಬಿಡಿ ಭಾಗಗಳು, ಪ್ಲಾಸ್ಟಿಕ್‌ ಮತ್ತು ಕೆಮಿಕಲ್ಸ್‌ ಸೇರಿ ಒಟ್ಟು ಹತ್ತು ವಿಷಯಗಳ ಬಗ್ಗೆ ವಿಚಾರಗೋಷ್ಠಿ ನಡೆಯಲಿವೆ. ಅಲ್ಲದೆ, ಸುಮಾರು 39ಕ್ಕೂ ಅಧಿಕ ವ್ಯವಹಾರಗಳ ಕುರಿತು ಮಾತುಕತೆ ನಡೆಯಲಿದ್ದು, ಒಟ್ಟು ಸುಮಾರು 55ಕ್ಕೂ ಹೆಚ್ಚು ವಿಶ್ವದರ್ಜೆ ಕಂಪನಿಗಳು ಭಾಗವಹಿಸಲಿವೆ. ದೇವನಹಳ್ಳಿಯಲ್ಲಿ ನಿರ್ಮಾಣ ಹಂತದಲ್ಲಿರುವ ಏರೋಸ್ಪೇಸ್‌ ಪಾರ್ಕ್‌ ಸೇರಿ ರಾಜ್ಯದಲ್ಲಿ ಈಗ ಪ್ರಗತಿ ಯಲ್ಲಿರುವ ಪ್ರಮುಖ ಐಟಿ-ಬಿಟಿ ಹಾಗೂ ಇತರೆ ಕೈಗಾರಿಕಾ ಯೋಜನೆಗಳ ಬಗ್ಗೆಯೂ ಪ್ರಚಾರ ಮಾಡುವ ಮೂಲಕ ಬಂಡವಾಳ ಹೂಡಿಕೆ ಆಕರ್ಷಣೆಗೆ ಈ ಸಮ್ಮೇಳನ ವೇದಿಕೆಯಾಗಲಿದೆ.

ರಾಜ್ಯದಲ್ಲಿ ನಡೆಯುತ್ತಿರೋದು ಖುಷಿ ತಂದಿದೆ
ಮೇಕ್‌ ಇನ್‌ ಇಂಡಿಯಾ ಸಮ್ಮೇಳನ ಈ ಬಾರಿ ಕರ್ನಾಟಕದಲ್ಲಿ ನಡೆಯುತ್ತಿರುವುದು ಹೆಚ್ಚು ಖುಷಿ ತಂದಿದೆ. ಇದರಿಂದ ರಾಜ್ಯದಲ್ಲಿರುವ ಮಧ್ಯಮ ಮತ್ತು ಸಣ್ಣ ಪ್ರಮಾಣದ ಕೈಗಾರಿಕೆಗಳಿಗೆ ಹೆಚ್ಚಿನ ಉತ್ತೇಜನ ದೊರೆಯಲಿದೆ. ಈ ಸಮ್ಮೇಳನವು ಆಹಾರ ಸಂಸ್ಕರಣೆ, ಏರೋಸ್ಪೇಸ್‌, ರಕ್ಷಣೆ ಸೇರಿ ಹಲವು ಕ್ಷೇತ್ರಗಳಲ್ಲಿ ಬಂಡವಾಳ ಹೂಡಿಕೆ, ಮೂಲಸೌಕರ್ಯ ಒದಗಿಸುವ ಬಗ್ಗೆ ಚರ್ಚೆಗೆ ಅವಕಾಶ ಕಲ್ಪಿಸಲಿದೆ ಎಂದು ಕೈಗಾರಿಕಾ ಸಚಿವ ಆರ್‌.ವಿ.ದೇಶಪಾಂಡೆ
ಹೇಳಿದರು. ಜಗತ್ತಿನಲ್ಲಿ ಸಾಕಷ್ಟು ಬದಲಾವಣೆಯಾಗುತ್ತಿದ್ದು, ಅದಕ್ಕೆ ತಕ್ಕಂತೆ ನಮ್ಮಲ್ಲಿರುವ ಕೈಗಾರಿಕೆಗಳು, ಉತ್ಪಾದನಾ ವಲಯಗಳು ಕೂಡ ಅಧುನೀಕರಣಗೊಳ್ಳಬೇಕಿದೆ. ಇದರಿಂದ ಭವಿಷ್ಯದಲ್ಲಿ ನಿರೀಕ್ಷೆಗೂ ಮೀರಿದ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ. ಈ ಹಿನ್ನೆಲೆಯಲ್ಲಿ ಮೊದಲ ಬಾರಿಗೆ ರಾಜ್ಯದಲ್ಲಿ ನಡೆಯುತ್ತಿರುವ ಈ ಮೇಕಿಂಗ್‌ ಇನ್‌ ಇಂಡಿಯಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವುದಕ್ಕೆ ಎಲ್ಲ ರೀತಿಯ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ಅವರು “ಉದಯವಾಣಿ’ಗೆ ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next