Advertisement

3,400 ಕೋಟಿ ವ್ಯಯಿಸಿದರೂ ಪ್ರವಾಹ ತಪ್ಪಲಿಲ್ಲ  

12:51 PM Sep 13, 2022 | Team Udayavani |

ಬೆಂಗಳೂರು: ರಾಜಕಾಲುವೆ ಒತ್ತುವರಿ ತೆರವು, ಅಭಿವೃದ್ಧಿಯಿಂದಷ್ಟೆ ನಗರದಲ್ಲಿ ಸೃಷ್ಟಿಯಾಗುವ ಪ್ರವಾಹ ಪರಿಸ್ಥಿತಿ ತಡೆಯಬಹುದು ಎಂದು ಬಿಬಿಎಂಪಿ ಅಧಿಕಾರಿಗಳು ಹೇಳುತ್ತಿದ್ದಾರೆ. ಅದಕ್ಕೆ ತಕ್ಕಂತೆ 2019- 20ರಿಂದ 2022-23ರವರೆಗೆ 3,400 ಕೋಟಿ ರೂ.ಗೂ ಹೆಚ್ಚಿನ ಹಣ ವ್ಯಯಿಸಲಾಗಿದೆ. ಆದರೂ ಈವರೆಗೆ ಪ್ರವಾಹಕ್ಕೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿಲ್ಲ.

Advertisement

ಒಂದು ಕಾಲದಲ್ಲಿ ಬೆಂಗಳೂರಿನಲ್ಲಿ ಸಾವಿರಕ್ಕೂ ಹೆಚ್ಚಿನ ಕೆರೆಗಳು, 2 ಸಾವಿರ ಕಿ.ಮೀ. ಹೆಚ್ಚಿನ ಉದ್ದದ ಮಳೆ ನೀರುಗಾಲುವೆ (ರಾಜಕಾಲುವೆ) ಗಳಿದ್ದವು. ಆದರೆ, ಸದ್ಯ ನಗರದಲ್ಲಿ 210 ಕೆರೆಗಳು, 842 ಕಿ.ಮೀ. ಉದ್ದದ ಮಳೆ ನೀರುಗಾಲುವೆಗಳಿವೆ. ಅದರಲ್ಲಿ 50ಕ್ಕೂ ಹೆಚ್ಚಿನ ಕೆರೆಗಳ ಅಭಿವೃದ್ಧಿ ಮಾಡಲಾಗಿದ್ದು, 32 ಕೆರೆಗಳ ಅಭಿವೃದ್ಧಿ ಕಾರ್ಯ ಚಾಲ್ತಿಯಲ್ಲಿದೆ. ಅದೇ ರೀತಿ ರಾಜಕಾಲುವೆಅಭಿವೃದ್ಧಿಗೆ ಸಂಬಂಧಿಸಿದಂತೆ ಈವರೆಗೆ 400 ಕಿ.ಮೀ. ಉದ್ದದ ರಾಜಕಾಲುವೆಗಳಿಗೆ ಕಾಂಕ್ರಿಟ್‌ ಸೈಡ್‌ವಾಲ್‌ ನಿರ್ಮಾಣ ಕಾರ್ಯಪೂರ್ಣ ಗೊಳಿಸಲಾಗಿದೆ.

ಅದರಂತೆ ಕಳೆದ ನಾಲ್ಕೈದು ವರ್ಷ ಗಳಲ್ಲಿ ರಾಜಕಾಲುವೆ ದುರಸ್ತಿ, ಅಭಿವೃದ್ಧಿಗಾಗಿಯೇ 3,400 ಕೋಟಿ ರೂ. ವ್ಯಯಿಸಲಾಗಿದೆ. ಅದರಲ್ಲೂ 2021ಕ್ಕೂ ಹಿಂದಿನ 5 ವರ್ಷಗಳಲ್ಲಿ 312 ಕಿ.ಮೀ. ಉದ್ದದ ರಾಜಕಾಲುವೆಗಳ ಸೈಡ್‌ವಾಲ್‌ ನಿರ್ಮಾಣ, ಹೂಳು ತೆಗೆಯುವುದು ಸೇರಿ ಇನ್ನಿತರ ಕಾಮಗಾರಿಗಳಿಗಾಗಿ 2,169 ಕೋಟಿ ರೂ.ವ್ಯಯಿಸಲಾಗಿದೆ.

2016ನಂತರ ಆಸಕ್ತಿ: ರಾಜ ಕಾಲುವೆ ಒತ್ತುವರಿ ತೆರವು, ಅಭಿವೃದ್ಧಿ ಕುರಿತುಕೇವಲ ಮಾತನಾಡುತ್ತಿದ್ದ ಆಡ ಳಿತ ನಡೆಸುವವರು 2016ರಲ್ಲಿ ಸೃಷ್ಟಿ ಯಾದ ಪ್ರವಾಹದ ನಂತರ ಎಚ್ಚೆತ್ತು ಕೊಂಡು ಬಿಬಿಎಂಪಿ ಮತ್ತುರಾಜ್ಯ ಸರ್ಕಾರ ರಾಜಕಾಲುವೆ ಒತ್ತುವರಿ ಪತ್ತೆ ಮುಂದಾಗಿತ್ತು. ಅದರಂತೆ 2,626 ಒತ್ತುವರಿ ಪತ್ತೆ ಮಾಡಿ, 2018-19ರ ಅಂತ್ಯದ ವೇಳೆಗೆ 1900ಕ್ಕೂ ಹೆಚ್ಚಿನ ಒತ್ತುವರಿ ತೆರವು ಮಾಡಲಾಗಿತ್ತು. ಅದರ ಜತೆಗೆ 312 ಕಿ.ಮೀ. ಉದ್ದದ ರಾಜಕಾಲುವೆಗಳ ಅಭಿವೃದ್ಧಿಗೆ ನಿರ್ಧರಿಸಿ 2,169 ಕೋಟಿ ರೂ. ಖರ್ಚು ಮಾಡಲಾಗಿತ್ತು.

ನಾಲ್ಕು ವರ್ಷಗಳಲ್ಲಿ 3,460 ಕೋಟಿ ರೂ.: ಅದೇ ರೀತಿ 2019-20ರಿಂದ 2022-23ರವರೆಗೆ ರಾಜ ಕಾಲುವೆ ಅಭಿವೃದ್ಧಿಗಾಗಿಯೇ ರಾಜ್ಯ ಸರ್ಕಾರ ಬಿಬಿಎಂಪಿ 3,460 ಕೋಟಿ ರೂ. ನೀಡಿದೆ. 2019-20ರಲ್ಲಿ 1,060 ಕೋಟಿ ರೂ. ನೀಡಿದ್ದ ಸರ್ಕಾರ 75 ಕಿ.ಮೀ. ಉದ್ದದ ರಾಜಕಾಲುವೆಗಳ ಸಂಪೂರ್ಣ ಅಭಿವೃದ್ಧಿಗೆಸೂಚಿಸಿತ್ತು. ಅದೇ ರೀತಿ 2021-22ರಲ್ಲಿ ಮತ್ತೆ ಪ್ರವಾಹಸೃಷ್ಟಿಯಾದಾಗ 900 ಕೋಟಿ ರೂ. ಮೊತ್ತದಲ್ಲಿ 51.5 ಕಿ.ಮೀ. ಉದ್ದದ ರಾಜಕಾಲುವೆಗಳ ದುರಸ್ತಿಗೆ ಸೂಚಿಸಲಾಗಿತ್ತು. ಈ ವರ್ಷ ಮೇ ತಿಂಗಳಲ್ಲಿ ಸೃಷ್ಟಿಯಾದ ಪ್ರವಾಹದ ನಂತರ ಸಿಎಂ ಬೊಮ್ಮಾಯಿ ಅವರು ಅಧಿಕಾರಿಗಳ ಸಭೆ ನಡೆಸಿ, 171 ಕಿ.ಮೀ. ಉದ್ದದ ರಾಜ ಕಾಲುವೆ ಅಭಿವೃದ್ಧಿಗಾಗಿ 1500 ಕೋಟಿ ರೂ. ನೀಡುವುದಾಗಿ ಘೋಷಿಸಿದರು. ಅದೇ ರೀತಿ ಯಲ್ಲಿ ಅನುದಾನ ನೀಡಿ ರಾಜಕಾಲುವೆ ಅಭಿವೃದ್ಧಿಗೆ ಸಂಬಂಧಿಸಿದ ಯೋಜನಾ ವರದಿಗೆ ಅನುಮೋದನೆ ನೀಡಲಾಗಿದೆ.

Advertisement

ಕಳಪೆ ಕಾಮಗಾರಿ, ವಿಳಂಬ :

ರಾಜಕಾಲುವೆ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ವಾರ್ಷಿಕ ಸಾವಿರಾರು ಕೋಟಿ ರೂ. ವ್ಯಯಿಸುತ್ತಿದೆ.ಆದರೆ, ಅದಕ್ಕೆ ತಕ್ಕಂತೆ ಗುಣಮಟ್ಟದ ಕಾಮಗಾರಿಗಳುನಡೆಯುತ್ತಿಲ್ಲ. ಕಳೆದ ವರ್ಷ ನಿರ್ಮಿಸಲಾದ ರಾಜಕಾಲುವೆ ಸೈಡ್‌ವಾಲ್‌ಗ‌ಳು ಈ ವರ್ಷದಮಳೆಗೆ ಬೀಳುತ್ತಿವೆ. ಅದೇ ರೀತಿ ರಾಜಕಾಲುವೆ ಅಭಿವೃದ್ಧಿ ಕಾಮಗಾರಿಗಳಲ್ಲಾಗುತ್ತಿರುವ ವಿಳಂಬದಿಂದಾಗಿ ಮಳೆ ನೀರು ಸರಾಗವಾಗಿ ಹರಿಯಲುಸಮರ್ಪಕ ವ್ಯವಸ್ಥೆಯಿಲ್ಲದಂತಾಗಿ ಪ್ರವಾಹ ಸೃಷ್ಟಿಯಾಗುತ್ತಿದೆ. ಕೆಲವೆಡೆ ಶಾಶ್ವತ ಪರಿಹಾರ ದೊರೆತಿದೆಯಾದರೂ, ಉಳಿದೆಡೆ ಇನ್ನೂ ಪರಿಹಾರ ದೊರೆತಿಲ್ಲ.

ಕೋರಮಂಗಲ ಕಣಿವೆಗಾಗಿಯೇ 175 ಕೋಟಿ ರೂ. :

ಕೋರಮಂಗಲ ಕಣಿವೆ ವ್ಯಾಪ್ತಿಯ ರಾಜಕಾಲುವೆಯನ್ನು ಗುಜರಾತ್‌ನ ಸಬರಮತಿಪಾತ್‌ವೇ ಮಾದರಿಯಲ್ಲಿ ಅಭಿವೃದ್ಧಿಪಡಿಸುವ ಯೋಜನೆಗೆ ಈಗಾಗಲೆ ಚಾಲನೆ ನೀಡಲಾಗಿದೆ.175 ಕೋಟಿ ರೂ. ವೆಚ್ಚದಲ್ಲಿ 28 ಕಿ.ಮೀ.ಉದ್ದದ ರಾಜಕಾಲುವೆಯನ್ನು ಅಭಿವೃದ್ಧಿಮಾಡಲಾಗುತ್ತಿದ್ದು, ಶೇ. 90 ಕಾಮಗಾರಿ ಪೂರ್ಣಗೊಂಡಿದೆ.

 

ಗಿರೀಶ್‌ ಗರಗ

Advertisement

Udayavani is now on Telegram. Click here to join our channel and stay updated with the latest news.

Next