ಬೆಂಗಳೂರು: ನಾಡಪ್ರಭು ಕೆಂಪೇಗೌಡರು ಕಟ್ಟಿದ ಬೆಂಗಳೂರು ನಗರದ ಇಂದಿನ ಎಲ್ಲ ಕರ್ಮಕಾಂಡಕ್ಕೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ವೇ ಕಾರಣ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇರ ಆರೋಪ ಮಾಡಿದರು.
ನಿಯಮ 69ರ ಅಡಿ ಅತಿವೃಷ್ಟಿ ಬಗ್ಗೆ ವಿಧಾನಸಭೆಯಲ್ಲಿ ಸುದೀರ್ಘವಾಗಿ ಮಾತನಾಡಿದ ಅವರು, ಇದ್ದ ಎಲ್ಲಾ ಕೆರೆಗಳನ್ನು ಮುಚ್ಚಿ ಬಡಾವಣೆಗಳನ್ನು ಮಾಡಿ, ಕಾಲುವೆಗಳನ್ನು ಮುಚ್ಚಿ ಬೆಂಗಳೂರು ಸೌಂದರ್ಯವನ್ನು ನಾಶ ಮಾಡಿತು. ನಾನಂತೂ ಅಧಿಕಾರದಲ್ಲಿ ಇದ್ದಾಗ ನಗರಕ್ಕೆ ಮಾರಕವಾಗುವ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ ಎಂದರು.
ಮಳೆ ಅನಾಹುತ ಈಗಿನಿಂದ ಆಗಿದ್ದಲ್ಲ. 1999 ಈಚೆಗೆ ಐಟಿ ಕ್ಷೇತ್ರ ವೇಗವಾಗಿ ಬೆಳೆಯಲು ತೊಡಗಿತು. ಆಗ ಬೆಂಗಳೂರಿನ ಅಭಿವೃದ್ಧಿ ಬೇಕಾಬಿಟ್ಟಿ ದೊಡ್ಡ ಮಟ್ಟಿಗೆ ಆಯಿತು. ಮುಂದಾಗಬಹುದಾದ ಅನಾಹುತದ ಬಗ್ಗೆ ಯಾರೂ ಗಮನ ಕೊಟ್ಟಿಲ್ಲ ಎಂದು ಅವರು ಹೇಳಿದರು. ಯಾವತ್ತು ಬಿಡಿಎ ಹುಟ್ಟಿಕೊಂಡಿತೋ ಆಗಲೇ ಬೆಂಗಳೂರಿಗೆ ಗಂಡಾಂತರ ಪ್ರಾರಂಭವಾಯಿತು. ಕೆರೆಗಳಿದ್ದಿದ್ದರೆ ಈ ರೀತಿ ನೆರೆ ಪರಿಸ್ಥಿತಿ ಎದುರಾಗುತ್ತಿರಲಿಲ್ಲ. ಕೆರೆ ಅಭಿವೃದ್ಧಿಪಡಿಸಿದ್ದರೇ ನೀರಿನ ಸಮಸ್ಯೆನೇ ಆಗುತ್ತಿರಲಿಲ್ಲ. ಮೇಕೆದಾಟುಗೆ ಪಾದಯಾತ್ರೆ ಬೇಕಾಗಿತ್ತಾ? ಮೇಕೆದಾಟಿಗಾಗಿ ಪಾದಯಾತ್ರೆ ಮಾಡುವ ಅವಶ್ಯಕತೆನೇ ಇರಲಿಲ್ಲ ಎಂದು ವಿವರಿಸಿದರು.
ಕೆರೆ ಮುಚ್ಚಿ ನಿರ್ಮಿಸಲಾದ ಜೆಪಿ ನಗರ, ಡಾಲರ್ಸ್ ಕಾಲೋನಿಯಲ್ಲಿ ಬಡವರಿಗೆ ನಿವೇಶನ ಕೊಟ್ಟಿದ್ದೀರಾ? ಅಲ್ಲಿ ಎಲ್ಲ ಐಎಎಸ್ ಅಧಿಕಾರಿಗಳು, ಶ್ರೀಮಂತರಿಗೆ ನಿವೇಶನ ಕೊಟ್ಟಿದ್ದೀರಿ. ಹಲವು ಕೆರೆಯನ್ನು ಮುಚ್ಚಿ ಹಾಕಿದ್ದಾರೆ. ಇದಕ್ಕೆಲ್ಲ ಕಾರಣ ಬಿಡಿಎ. ಬಿಡಿಎ 4 ಸಾವಿರ ಎಕರೆ ಬಡಾವಣೆಗಾಗಿ ಭೂಮಿ ನೋಟಿಫೈ ಮಾಡುತ್ತದೆ. ಮತ್ತೆ ಯಾರಾದರೂ ಪ್ರಭಾವ ಬೀರಿದರೆ ಡಿನೋಟಿಫೈ ಮಾಡುತ್ತದೆ. ಆ ಪ್ರಾಧಿಕಾರಕ್ಕೆ ಒಂದು ಸ್ಪಷ್ಟತೆ ಇಲ್ಲ. ಒಂದು ನಿರ್ದಿಷ್ಟ ನೀಲನಕ್ಷೆ ಇಲ್ಲ ಎಂದು ವಾಗ್ಧಾಳಿ ನಡೆಸಿದರು. ಒಂದು ಕಾಲದಲ್ಲಿ ಬೆಂಗಳೂರನ್ನು ಸಿಂಗಾಪುರ ಮಾಡಲು ಹೊರಟಿದ್ದರು. ಸಿಂಗಾಪುರ ಮಾಡಲು ಹೋಗಿಯೇ ಈ ತರ ಆಗಿದೆ ಎಂದು ಹಿಂದಿನ ಸರ್ಕಾರಗಳಿಗೆ ಪರೋಕ್ಷವಾಗಿ ಕುಮಾರಸ್ವಾಮಿ ಟಾಂಗ್ ನೀಡಿದರು.
ಅಶ್ವತ್ಥನಾರಾಯಣ ವಿರುದ್ಧ ಟೀಕಾ ಪ್ರಹಾರ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಹೈವೇ ಯೋಜನೆಯಿಂದ ಕೆಲ ಸಮಸ್ಯೆ ಎದುರಾಗಿದೆ. ಅವೈಜ್ಞಾನಿಕ ಕಾಮಗಾರಿ ರಸ್ತೆಯಲ್ಲಿ ಪ್ರವಾಹಕ್ಕೆ ಕಾರಣ. ಅಲ್ಲದೆ ರಾಮನಗರ ನಗರ ಪ್ರದೇಶದಲ್ಲಿ ನೆರೆ ಉಂಟಾಗಲು ರಾಮನಗರ ಪಕ್ಕದ ಕೆರೆ ಕೋಡಿ ಒಡೆದಿರುವುದೇ ಕಾರಣ. ಘಟಾನುಘಟಿ ನಾಯಕರು ಇರುವ ಜಿಲ್ಲೆಯಲ್ಲಿ ಯಾರೂ ಏನೂ ಮಾಡಲು ಆಗಿಲ್ಲ. ಮೂರು ವರ್ಷದಲ್ಲಿ ನಾವು ಬಂದು ಎಲ್ಲವನ್ನೂ ಮಾಡಿದ್ದೇವು ಎಂದು ಉಸ್ತುವಾರಿ ಸಚಿವರು ವೀರಾವೇಶದಿಂದ ಮಾತನಾಡಿದ್ದರು. ಅವರು ಏನು ಮಾಡಿದ್ದಾರೆ ಎಂಬುದು ಸದನದ ಮುಂದೆ ಇಡುವುದು ಸೂಕ್ತ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿಎನ್ ಅಶ್ವತ್ಥನಾರಾಯಣ ವಿರುದ್ಧ ಟೀಕಾ ಪ್ರಹಾರ ನಡೆಸಿದರು. 10 ವರ್ಷದಿಂದ ರಾಮನಗರದ ಅಭಿವೃದ್ಧಿ ಏನಾಗಿದೆ? ಕಳೆದ 3 ವರ್ಷದಿಂದ ಏನು ಅಭಿವೃದ್ಧಿ ಮಾಡಿದ್ದಾರೆ ಎಂಬ ಬಗ್ಗೆ ಸದನದ ಮುಂದೆ ಇಡಲಿ. ನನ್ನಿಂದ ಏನಾದರು ಲೋಪ ಆಗಿದೆಯಾ ಎಂಬ ಬಗ್ಗೆಯೂ ನನಗೂ ತಿಳಿಯುತ್ತದೆ ಎಂದು ಸಚಿವ ಅಶ್ವತ್ಥನಾರಾಯಣಗೆ ತಿರುಗೇಟು ನೀಡಿದರು ಅವರು.