ಬೆಂಗಳೂರು: ಕೆ.ಆರ್.ಸರ್ಕಲ್ ಬಳಿಯ ಅಂಡರ್‌ಪಾಸ್‌ನಲ್ಲಿ ಕಾರು ಮುಳುಗಡೆಯಾಗಿ ಮಹಿಳಾ ಟೆಕ್ಕಿ ಮೃತಪಟ್ಟ ಪ್ರಕರಣ ಸಂಬಂಧ ಖಾಸಗಿ ಟ್ರಾವೆಲ್ಸ್ ಕಂಪನಿಯ ಚಾಲಕನನ್ನು ಹಲಸೂರುಗೇಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಹುಣಸೂರು ಮೂಲದ ಹರೀಶ್(37) ಬಂಧಿತ ಚಾಲಕ.
ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿ ತೋರಿದ ಆರೋಪದ ಮೇಲೆ ಬಂಧಿಸಲಾಗಿದೆ. ಭಾನುವಾರ ಸುರಿದ ಭಾರೀ ಮಳೆಗೆ ಕೆ.ಆರ್. ಸರ್ಕಲ್ ಬಳಿಯ ಅಂಡರ್‌ಪಾಸ್‌ನಲ್ಲಿ ಹರೀಶ್‌ನ ಕಾರು ಸಿಲುಕಿ ಎಲೆಕ್ಟ್ರಾನಿಕ್ ಸಿಟಿ ನಿವಾಸಿ, ಮಹಿಳಾ ಟೆಕ್ಕಿ ಭಾನುರೇಖಾ ಎಂಬುವರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದರು.
ಆಂಧ್ರಪ್ರದೇಶ ಮೂಲದ ಭಾನುರೇಖಾ, ಎಲೆಕ್ಟ್ರಾನಿಕ್ ಸಿಟಿಯಲ್ಲಿ ವಾಸವಾಗಿದ್ದು, ಇನ್ಫೋಸಿಸ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ಭಾನುವಾರ ಆಂಧ್ರಪ್ರದೇಶದಿಂದ ಬಂದಿದ್ದ ಕುಟುಂಬ ಸದಸ್ಯರಿಗೆ ಬೆಂಗಳೂರು ಸುತ್ತಾಡಿಸಲು ಖಾಸಗಿ ಟ್ರಾವೆಲ್ಸ್ ಕಂಪನಿಯ ಕಾರು ಬುಕ್ ಮಾಡಿದ್ದರು. ಕಬ್ಬನ್ ಪಾರ್ಕ್‌ಗೆ ಹೋಗಿ ವಾಪಸ್ ಎಲೆಕ್ಟ್ರಾನಿಕ್ ಸಿಟಿಯ ಮನೆಗೆ ಹೋಗುತ್ತಿದ್ದರು. ಆಗ ಕಾರು ಚಾಲಕ ಹರೀಶ್, ಕೆ.ಆರ್.ಸರ್ಕಲ್ ಬಳಿಯ ಅಂಡರ್ ಪಾಸ್‌ನಲ್ಲಿ ಕಾರು ಚಲಾಯಿಸಲು ಮುಂದಾಗಿದ್ದಾನೆ. ಆಗ ಪ್ರಯಾಣಿಕರು ನೀರು ತುಂಬಿದೆ ಬೇಡ ಎಂದರೂ ಕೇಳದ ಚಾಲಕ ಹರೀಶ್, ನೀರು ತುಂಬಿದ ಅಂಡರ್‌ಪಾಸ್‌ನಲ್ಲಿಯೇ ಕಾರು ಚಲಾಯಿಸಿದ್ದಾನೆ. ಟೈಯರ್ ವರೆಗೂ ನೀರು ಬಂದಿದ್ದರಿಂದ ಕಾರು ಆಫ್ ಆಗಿದೆ. ಆಗಲೂ ಪ್ರಯಾಣಿಕರು ಕಾರಿನಿಂದ ಇಳಿಯಲು ಯತ್ನಿಸಿದಾಗ, ಆರೋಪಿ ಮತ್ತೆ ಕಾರು ಸ್ಟಾರ್ಟ್ ಮಾಡುತ್ತೇನೆ ಎಂದಿದ್ದಾನೆ. ಆದರೆ, ಕಾರು ಸ್ಟಾರ್ಟ್ ಮಾಡುವಷ್ಟರಲ್ಲಿ ನಿರೀಕ್ಷೆಗೂ ಹೆಚ್ಚಿನ ನೀರು ಅಂಡರ್‌ಪಾಸ್‌ನಲ್ಲಿ ತುಂಬಿಕೊಂಡಿದ್ದು, ಕಾರಿನ ಒಳಗಡೆ ನೀರು ತುಂಬಿಕೊಂಡಿದೆ.
ಕೂಡಲೇ ಸ್ಥಳೀಯರು ನೀರಿಗೆ ಜಿಗಿದು ರಕ್ಷಣೆಗೆ ಧಾವಿಸಿದ್ದಾರೆ. ಅಷ್ಟರಲ್ಲಿ ಭಾನುರೇಖಾ ಅಸ್ವಸ್ಥಗೊಂಡಿದ್ದರು. ಕೂಡಲೇ ಸಮೀಪ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ಆಸ್ಪತ್ರೆ ಸಿಬ್ಬಂದಿ ಕೆಲ ಹೊತ್ತು ದಾಖಲಿಸಿಕೊಳ್ಳಲು ನಿರ್ಲಕ್ಷ್ಯ ವಹಿಸಿದ್ದರಿಂದ ಭಾನುರೇಖಾ ಮೃತಪಟ್ಟಿದ್ದರು ಎಂದು ಹೇಳಲಾಗಿದೆ.
ಘಟನೆ ಸಂಬಂಧ ಕಾರು ಚಾಲಕ ಹರೀಶ್ ಮತ್ತು ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಭಾನುರೇಖಾ ಸಹೋದರ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಹರೀಶ್‌ನನ್ನು ಬಂಧಿಸಲಾಗಿದೆ. ಬಿಬಿಎಂಪಿಗೆ ಸಂಬಂಧಿಸಿದ ಅಧಿಕಾರಿಗಳಿಗೆ ನೋಟಿಸ್ ಕೊಟ್ಟು ವಿಚಾರಣೆ ನಡೆಸಲಾಗುತ್ತದೆ ಎಂದು ಪೊಲೀಸರು ಹೇಳಿದರು.
ಹಲಸೂರು ಗೇಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.