Advertisement

ಚಾರ್ಲ್ಸ್‌ ಪಟ್ಟಾಭಿಷೇಕಕ್ಕೆ ಬೆಂಗಳೂರಿನ ವೈದ್ಯಗೆ ಆಹ್ವಾನ

09:34 PM May 02, 2023 | Team Udayavani |

ಲಂಡನ್‌/ಕೋಲ್ಕತಾ: ಬ್ರಿಟನ್‌ ರಾಜಮನೆತನದ ದೊರೆಯಾಗಿ ಮೂರನೇ ಚಾರ್ಲ್ಸ್‌ ಅವರಿಗೆ ಮುಂದಿನ ಮಂಗಳವಾರ (ಮೇ 6) ಲಂಡನ್‌ನ ವೆಸ್ಟ್‌ಮಿನಿಸ್ಟರ್‌ ಅಬೆಯಲ್ಲಿ ಪಟ್ಟಾಭಿಷೇಕ ನಡೆಯಲಿದೆ. ಅದಕ್ಕಾಗಿ ಭಾರತ ಮತ್ತು ಜಗತ್ತಿನ ಪ್ರಮುಖ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 2,200 ಮಂದಿಗೆ ವಿಶೇಷ ಆಹ್ವಾನಿಸಲಾಗಿದೆ. ಈ ಪೈಕಿ ಬೆಂಗಳೂರಿನ ಸಮನೇತನಹಳ್ಳಿಯಲ್ಲಿ ಇರುವ ಡಾ. ಇಸಾಕ್‌ ಮಥಾಯಿ ಅವರಿಗೆ ಕೂಡ ಆಹ್ವಾನ ಲಭಿಸಿದ್ದು, ಈಗಾಗಲೇ ಪತ್ನಿ ಸುಜ ಜತೆಗೆ ಲಂಡನ್‌ಗೆ ತೆರಳಿದ್ದಾರೆ.

Advertisement

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು “ಜೀವಮಾನದಲ್ಲಿ ಒಂದು ಬಾರಿ ಸಿಗುವ ಅವಕಾಶವಿದು. ಜಗತ್ತಿನ ಪ್ರಮುಖರು ಭಾಗವಹಿಸುವ ಐತಿಹಾಸಿಕ ಸಮಾರಂಭದಲ್ಲಿ ಪಾಲ್ಗೊಳ್ಳಲು ಖುಷಿಯಾಗುತ್ತಿದೆ” ಎಂದು ಹೇಳಿದ್ದಾರೆ. ಇಸಾಕ್‌ ಮಥಾಯಿ ಅವರು, ಮೇ 3ರಿಂದ ಶುರುವಾಗಲಿರುವ ಪಟ್ಟಾಭಿಷೇಕ ಪೂರ್ವ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.

ಬಾಂಧವ್ಯ ಹೇಗೆ?
ಸಮೇತನಹಳ್ಳಿಯಲ್ಲಿ ಇರುವ ಡಾ. ಮಥಾಯಿ ಅವರ ಆಸ್ಪತ್ರೆಗೆ 2010ರಿಂದ ರಾಣಿ ಕೆಮಿಲಾ ಭೇಟಿ ನೀಡುತ್ತಿದ್ದಾರೆ. 2019ರಲ್ಲಿ ಮೂರನೇ ಚಾರ್ಲ್ಸ್‌ ಬೆಂಗಳೂರಿಗೆ ಬಂದಿದ್ದಾಗ ಕೂಡ ಅವರು ಅಲ್ಲಿಗೆ ಭೇಟಿ ನೀಡಿದ್ದರು.

ಪ್ರಮುಖರು ಭಾಗಿ:
ಉಪರಾಷ್ಟ್ರಪತಿ ಜಗದೀಪ್‌ ಧನ್ಕರ್‌ ಸೇರಿದಂತೆ ಜಗತ್ತಿನ 100 ರಾಷ್ಟ್ರಗಳ ಸರ್ಕಾರಿ ಮುಖ್ಯಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಇದಲ್ಲದೆ ಭಾರತೀಯ ಮೂಲದ ಸೌರಭ್‌ ಫ‌ಡ್ಕೆ, ಕೆನಡಾದಲ್ಲಿರುವ ಜೇ ಪಟೇಲ್‌ ಸೇರಿದಂತೆ ಹಲವು ಮಂದಿ ಸ್ವಯಂ ಸೇವಾ ಕ್ಷೇತ್ರದಲ್ಲಿ ತೊಡಗಿಸಿಕೊಂಡ ಭಾರತದ ಮೂಲದವರಿಗೆ ವಿಶೇಷ ಆಹ್ವಾನ ನೀಡಲಾಗಿದೆ.

ರಾಜದಂಪತಿಗೆ ಕೊಲ್ಕತಾ ವಿನ್ಯಾಸಕಿಯ ವಸ್ತ್ರ
ಪಟ್ಟಾಭಿಷೇಕದ ಸಂದರ್ಭದಲ್ಲಿ ದೊರೆ ಮೂರನೇ ಚಾರ್ಲ್ಸ್‌ ಧರಿಸಲಿರುವ ವಿಶೇಷ ದಿರಿಸನ್ನು ಕೋಲ್ಕತದ ವಸ್ತ್ರ ವಿನ್ಯಾಸಕಾರ್ತಿ ಪ್ರಿಯಾಂಕ ಮಲಿಕ್‌ ಮಾಡಿದ್ದಾರೆ. ಈ ಬಗ್ಗೆ ಮೂರನೇ ಚಾರ್ಲ್ಸ್‌ ಅವರಿಂದಲೇ ಖುದ್ದು ಆಹ್ವಾನ ಬಂದಿತ್ತು ಎಂದು ಮಲಿಕ್‌ ಹೇಳಿದ್ದಾರೆ. ರಾಣಿ ಕೆಮಿಲಾಗೆ ಕೂಡ ಅವರೇ ಸಿದ್ಧಪಡಿಸಿದ ದಿರಿಸು ಧರಿಸಲಿದ್ದಾರೆ. ಕೋಲ್ಕತಾದಿಂದ 50 ಕಿಮೀ ದೂರದ ಗ್ರಾಮದಲ್ಲಿ ಜನಿಸಿದ ಮಲಿಕ್‌ ಇಟೆಲಿಯ ಮಿಲಾನ್‌, ಹಾರ್ವರ್ಡ್‌, ಸ್ಟಾನ್‌ಫಾರ್ಡ್‌ ವಿವಿಯಿಂದ ಪದವಿ ಪಡೆದಿದ್ದಾರೆ. ಜತೆಗೆ ಯು.ಕೆ.ಯ ರಾಯಲ್‌ ಕಾಮನ್ವೆಲ್ತ್‌ ಸೊಸೈಟಿಯ ಸದಸ್ಯೆ ಕೂಡ ಹೌದು.

Advertisement
Advertisement

Udayavani is now on Telegram. Click here to join our channel and stay updated with the latest news.

Next