Advertisement

ರಣಜಿ: ಮೋರೆ ಹೊಡೆತಕ್ಕೆ ಮಗುಚಿದ ರೈಲ್ವೇಸ್‌

09:54 AM Jan 31, 2020 | sudhir |

ಹೊಸದಿಲ್ಲಿ: ಅಂತಿಮ ದಿನದ ಆಟದಲ್ಲಿ ಅಕ್ಷರಶಃ ಪವಾಡ ಮಾಡಿದ ಕರ್ನಾಟಕ ತಂಡ ರಣಜಿ ಎಲೈಟ್‌ ಬಿ ಗುಂಪಿನ ಪಂದ್ಯದಲ್ಲಿ ರೈಲ್ವೇಸ್‌ ವಿರುದ್ಧ 10 ವಿಕೆಟ್‌ಗಳ ಪ್ರಚಂಡ ಗೆಲುವು ಸಾಧಿಸಿದೆ. ಇದರೊಂದಿಗೆ ರಾಜ್ಯದ ಕ್ವಾರ್ಟರ್‌ ಫೈನಲ್‌ ಹಾದಿ ಸುಗಮಗೊಂಡಿದೆ.

Advertisement

ಮಳೆ ಹಾಗೂ ಪ್ರತಿಕೂಲ ಹವಾ ಮಾನದಿಂದ ಈ ಪಂದ್ಯ ಸ್ಪಷ್ಟ ಫ‌ಲಿತಾಂಶ ಕಾಣುವ ನಿರೀಕ್ಷೆ ಯಾರಲ್ಲೂ ಇರಲಿಲ್ಲ. ಆದರೆ ಗುರುವಾರದ ಕೊನೆಯ ದಿನದಾಟದಲ್ಲಿ ರೋನಿತ್‌ ಮೋರೆ (32ಕ್ಕೆ 6), ಅಭಿಮನ್ಯು ಮಿಥುನ್‌ (17ಕ್ಕೆ 3) ಘಾತಕವಾಗಿ ಪರಿಣ ಮಿಸಿದರು. ಇವರಿಬ್ಬರ ಘಾತಕ ದಾಳಿಗೆ ಸಿಲುಕಿದ ರೈಲ್ವೇಸ್‌ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಕೇವಲ 79 ರನ್ನಿಗೆ ಆಲೌ ಟಾಯಿತು.

ಗೆಲುವಿಗೆ ಬೇಕಿದ್ದ 51 ರನ್‌ ಗುರಿ ಬೆನ್ನಟ್ಟಿದ ಕರ್ನಾಟಕ, ರೋಹನ್‌ ಕದಮ್‌ (27)-ದೇವದತ್ತ ಪಡಿಕ್ಕಲ್‌ (24) ಅವರ ಅಜೇಯ ಜತೆಯಾಟದ ನೆರವಿನಿಂದ ಕೇವಲ 8.2 ಓವರ್‌ಗಳಲ್ಲಿ ಇದನ್ನು ಸಾಧಿಸಿತು.

ಪ್ರಸಕ್ತ ರಣಜಿ ಋತುವಿನಲ್ಲಿ ಇದು ಕರ್ನಾಟಕಕ್ಕೆ ಒಲಿದ 3ನೇ ಜಯ. ಇದಕ್ಕೂ ಮೊದಲು ತಮಿಳುನಾಡು, ಮುಂಬಯಿ ವಿರುದ್ಧ ಗೆಲುವು ಸಾಧಿ ಸಿತ್ತು. ಉತ್ತರ ಪ್ರದೇಶ, ಹಿಮಾಚಲ ಪ್ರದೇಶ, ಸೌರಾಷ್ಟ್ರ ವಿರುದ್ಧ ಡ್ರಾ ಸಾಧಿಸಿತ್ತು. ಕರ್ನಾಟಕವೀಗ ಒಟ್ಟು 24 ಅಂಕ ಪಡೆದು 4ನೇ ಸ್ಥಾನಿಯಾಗಿದೆ. ಆಂಧ್ರಪ್ರದೇಶ, ಗುಜರಾತ್‌, ಸೌರಾಷ್ಟ್ರ ಮೊದಲ 3 ಸ್ಥಾನದಲ್ಲಿವೆ.

ಕರ್ನಾಟಕದ ಮುಂದಿನ ಎದುರಾಳಿ ಮಧ್ಯಪ್ರದೇಶ. ಈ ಪಂದ್ಯ ಫೆ. 4ರಿಂದ ಶಿವಮೊಗ್ಗದಲ್ಲಿ ಆರಂಭವಾಗಲಿದೆ.

Advertisement

ಮುಗ್ಗರಿಸಿದ ರೈಲ್ವೇಸ್‌
4ನೇ ದಿನದಾಟ ಮುಂದುವರಿಸಿದ ಕರ್ನಾಟಕ 211 ರನ್‌ಗೆ ಆಲೌಟಾ ಯಿತು. ರೈಲ್ವೇಸ್‌ 2ನೇ ಇನ್ನಿಂಗ್ಸ್‌ ಆರಂಭಿಸುವ ಮುನ್ನ ಪಂದ್ಯ ಡ್ರಾಗೊಳ್ಳ ಬಹುದು ಎನ್ನುವ ನಿರೀಕ್ಷೆ ಇತ್ತು. ಆದರೆ ರೋನಿತ್‌ ಮೋರೆ, ಅಭಿಮನ್ಯು ಮಿಥುನ್‌ ಹಾಗೂ ಪ್ರತೀಕ್‌ ಜೈನ್‌ ಸೇರಿಕೊಂಡು ರೈಲ್ವೇಸ್‌ ಬ್ಯಾಟಿಂಗ್‌ ಸರದಿಯನ್ನು ಸೀಳುತ್ತ ಹೋದರು. ಆರಂಭಿಕ ಬ್ಯಾಟ್ಸ್‌ ಮನ್‌ ಮೃಣಾಲ್‌ ದೇವಧರ್‌ (38) ಹೊರತುಪಡಿಸಿ ಉಳಿದವರ್ಯಾರೂ ಎರಡಂಕೆಯ ಗಡಿ ತಲುಪಲಿಲ್ಲ. 4 ಮಂದಿ ಖಾತೆಯನ್ನೇ ತೆರೆಯಲಿಲ್ಲ.

ಸಂಕ್ಷಿಪ್ತ ಸ್ಕೋರ್‌
ರೈಲ್ವೇಸ್‌-182 ಮತ್ತು 79 (ದೇವಧರ್‌ 38, ಮೋರೆ 32ಕ್ಕೆ 6, ಮಿಥುನ್‌ 17ಕ್ಕೆ 3). ಕರ್ನಾಟಕ-211 (ಶರತ್‌ 62, ಪಡಿಕ್ಕಲ್‌ 55, ಗೌತಮ್‌ 41, ಮಿಶ್ರಾ 70ಕ್ಕೆ 5, ಸಂಗ್ವಾನ್‌ 57ಕ್ಕೆ 3) ಮತ್ತು ವಿಕೆಟ್‌ ನಷ್ಟವಿಲ್ಲದೆ 51 (ಕದಮ್‌ ಅಜೇಯ 27, ಪಡಿಕ್ಕಲ್‌ ಅಜೇಯ 24).

ಪಂದ್ಯಶ್ರೇಷ್ಠ: ರೋನಿತ್‌ ಮೋರೆ.

Advertisement

Udayavani is now on Telegram. Click here to join our channel and stay updated with the latest news.

Next