ಬೆಂಗಳೂರು: ಇತ್ತೀಚೆಗೆ ಮಾದಕ ವಸ್ತು ಮಾರಾಟ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಕೇರಳ ಮೂಲದ ಯುವತಿ ಸೇರಿ ಇಬ್ಬರು ಟ್ಯಾಟೂ ಆರ್ಟಿಸ್ಟ್‌ಗಳು ವಾಸವಾಗಿದ್ದ ಚಂದಾಪುರದಲ್ಲಿರುವ ಫ್ಲ್ಯಾಟ್‌ನಲ್ಲಿ 25 ಲಕ್ಷ ರೂ. ಮೌಲ್ಯದ ಮಾದಕ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಇದೇ ವೇಳೆ ಆರೋಪಿಗಳ ವಿಚಾರಣೆಯಲ್ಲಿ ಕೊಲಂಬಿಯಾದ ಮಾದಕ ವಸ್ತು ಮಾರಾಟ ದೊರೆ ಪಾಂಬ್ಲೋ ಎಸ್ಕೊಬರ್‌ನ ಮಾದರಿಯಲ್ಲಿ ಡ್ರಗ್ಸ್ ಪೆಡ್ಲರ್‌ಗಳಾಗಬೇಕು ಎಂಬ ಗುರಿಯಿತ್ತು ಎಂಬುದು ಬೆಳಕಿಗೆ ಬಂದಿದೆ.
ನ.15ರಂದು ಮಾದಕ ವಸ್ತು ಮಾರಾಟದಲ್ಲಿ ತೊಡಗಿದ್ದ ಆರೋಪದ ಮೇಲೆ ವಿಷ್ಣುಪ್ರಿಯಾ (37) ಮತ್ತು ಸಿಗಿಲ್ ವರ್ಗೀಸ್ (35) ಎಂಬುವರನ್ನು ಬಂಧಿಸಲಾಗಿತ್ತು. ಇದೀಗ ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೊಳ ಪಡಿಸಿದಾಗ, ಇಬ್ಬರು ಲಿವಿಂಗ್ ಟುಗೇದರ್ ಮಾದರಿಯಲ್ಲಿ ಚಂದಾಪುರದ ಫ್ಲ್ಯಾಟ್‌ನಲ್ಲಿ ವಾಸವಾಗಿದ್ದು, ಅಲ್ಲಿಂದ ಡ್ರಗ್ಸ್ ಡಿಲೀಂಗ್ ಮಾಡುತ್ತಿದ್ದರು ಎಂಬುದು ಗೊತ್ತಾಗಿದೆ.
ಹೀಗಾಗಿ ಆರೋಪಿಗಳ ಪೈಕಿ ಸಿಗಿಲ್ ವರ್ಗೀಸ್‌ನನ್ನು ವಶಕ್ಕೆ ವಿಚಾರಣೆ ನಡೆಸಿ ಅವರ ಫ್ಲ್ಯಾಟ್ ಮೇಲೆ ದಾಳಿ ನಡೆಸಿದಾಗ 25 ಲಕ್ಷ ರೂ. ಮೌಲ್ಯದ 100 ಗ್ರಾಂ ಎಂಡಿಎಂಎ ಕ್ರಿಸ್ಟಲ್, 150 ಗ್ರಾಂ ಎಲ್‌ಎಲ್‌ಡಿ ಸ್ಟ್ರೀಪ್ಸ್ ಗಳು, 25 ಎಂಡಿಎಂಎ ಮಾತ್ರೆಗಳು, ಡ್ರಗ್ಸ್ ವ್ಯವಹಾರಕ್ಕೆ ಸಂಬಂಧಿಸಿದಂತೆ ಒಂದು ಡೈರಿ ಹಾಗೂ ಕೊಲಂಬಿಯಾದ ಡ್ರಗ್ಸ್ ದೊರೆ ಪಾಂಬ್ಲೋ ಎಸ್ಕೊಬರ್‌ನ ಫೋಟೋ ಪತ್ತೆಯಾಗಿದೆ ಎಂದು ಸಿಸಿಬಿ ಪೊಲೀಸರು ಹೇಳಿದರು.
ಡ್ರಗ್ಸ್ ದೊರೆಯೇ ರೋಲ್‌ಮಾಡೆಲ್: ಪ್ರೇಮಿಗಳ ವಿಚಾರಣೆಯಲ್ಲಿ ಕೊಲಂಬಿಯಾದ ಡ್ರಗ್ಸ್ ದೊರೆ ಪಾಂಬ್ಲೊ ಎಸ್ಕೊಬರ್‌ನನ್ನು ಡ್ರಗ್ಸ್ ದಂಧೆಯಲ್ಲಿ ರೋಲ್ ಮಾಡೆಲ್ ಆಗಿದ್ದು, ಆತನ ಮಾದರಿಯಲ್ಲಿ ಡ್ಸಗ್ಸ್ ಡಿಲೀಂಗ್ ಮಾಡಬೇಕು. ಜತೆಗೆ ಡ್ರಗ್ಸ್ ಲೋಕದ ದೊರೆ ಆಗಬೇಕು ಎಂಬ ಉದ್ದೇಶ ಹೊಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಮುಖ ಪರಿಚಯ ಇಲದೇ ಡ್ರಗ್ಸ್ ಮಾರಾಟ
ಆರೋಪಿಗಳು “ಫೇಸ್‌ಲೆಸ್ ರಷ್ಯನ್ ಟ್ರೆಸ್ಯೂರ್ ಅಂಟ್ ಮಾಡೆಲ್’ ಮಾದರಿ ಯಲ್ಲಿ ಗ್ರಾಹಕರಿಗೆ ತಮ್ಮ ಮುಖ ಪರಿಚಯ ಇಲ್ಲದೇ ವ್ಯವಹಾರ ನಡೆಸುತ್ತಿದ್ದರು. ಅಂದರೆ, ನಿರ್ದಿಷ್ಟವಾದ ಚರಂಡಿ, ಕಂಬ, ಮರ, ರಸ್ತೆ ಬದಿಯ ತೊಟ್ಟಿಗಳಲ್ಲಿ ಡ್ರಗ್ಸ್ ಇಟ್ಟು ಸ್ಥಳದ ಫೋಟೋ, ವಿಡಿಯೋ, ಲೋಕೇಷನ್ ಕಳುಹಿಸಿ ಆನ್‌ಲೈನ್‌ನಲ್ಲಿ ಹಣ ಪಡೆಯುತ್ತಿದ್ದರು. ಅದರಿಂದ ಪರಸ್ಪರ ಭೇಟಿ ಆಗುತ್ತಿರಲಿಲ್ಲ. ಆರೋಪಿಗಳನ್ನು ಈ ಹಿಂದೆ ಹುಳಿಮಾವು ಠಾಣೆ ಪೊಲೀಸರು ಬಂಧಿಸಿದ್ದರು. ಬಳಿಕ ಜೈಲಿನಿಂದ ಬಿಡುಗಡೆಯಾಗಿ, ಅನಂತರವು ದಂಧೆಯಲ್ಲಿ ಸಕ್ರಿಯವಾಗಿದ್ದರು ಪೊಲೀಸರು ಹೇಳಿದರು.