ಬೆಂಗಳೂರು: ಪೋಷಕರು ಮನೆ ಕೆಲಸ ಮಾಡು ಎಂದಿದಕ್ಕೆ ಬಾಲಕನೊಬ್ಬ ಮನೆಯ ಟೆರೆಸ್ ಮೇಲೆ ಹೋಗಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೆಬ್ಟಾಳ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಚೋಳನಾಯಕನಹಳ್ಳಿಯ ಗೋವಿಂದಪ್ಪ ಎಂಬುವರ ಪುತ್ರ ಸಾಯಿ ಕುಮಾರ್ (13) ಆತ್ಮಹತ್ಯೆ ಮಾಡಿಕೊಂಡ ಬಾಲಕ.
ಗೋವಿಂದಪ್ಪ ಸಣ್ಣ-ಪುಟ್ಟ ಕೆಲಸ ಮಾಡಿಕೊಂಡಿದ್ದು, ಚೋಳನಾಯಕನಹಳ್ಳಿಯಲ್ಲಿ ಕುಟುಂಬದ ಜತೆ ವಾಸವಾಗಿದ್ದಾರೆ. ಪುತ್ರ ಸಾಯಿಕುಮಾರ್ ಖಾಸಗಿ ಶಾಲೆಯಲ್ಲಿ 7ನೇ ತರಗತಿ ವ್ಯಾಸಂಗ ಮಾಡುತ್ತಿದ್ದ. ಮನೆಯಲ್ಲಿ ಹೋಮ್ ವರ್ಕ್ ಮತ್ತು ಇತರೆ ಯಾವುದೇ ಕೆಲಸ ಮಾಡುತ್ತಿರಲಿಲ್ಲ. ಹೀಗಾಗಿ ಆತನ ಪೋಷಕರು ಬೈದು ಬುದ್ಧಿವಾದ ಹೇಳಿದ್ದಾರೆ. ಅದರಿಂದ ಬೇಸರಗೊಂಡ ಸಾಯಿ ಕುಮಾರ್, ಶುಕ್ರವಾರ ಮಧ್ಯಾಹ್ನ ಮನೆಯ ಟೆರೆಸ್ ಮೇಲೆ ಹೋಗಿ ಬಟ್ಟೆ ಒಣ ಹಾಕುವ ಕಬ್ಬಿಣ ಕಂಬಿಗೆ ಹಗ್ಗದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಂಜೆ ಬಹಳ ಹೊತ್ತಾದರೂ ಮಗ ಮನೆಗೆ ಬಂದಿಲ್ಲ. ಅದರಿಂದ ಆತಂಕಗೊಂಡ ಪೋಷಕರು ಎಲ್ಲೆಡೆ ಹುಡುಕಾಟ ನಡೆಸಿದ್ದಾರೆ. ರಾತ್ರಿ 8 ಗಂಟೆ ಸುಮಾರಿಗೆ ಮನೆಯ ಟೆರೆಸ್ ಮೇಲೆ ಹೋದಾಗ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದರು. ಹೆಬ್ಟಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.