ಬೆಂಗಳೂರು: ಇತ್ತೀಚೆಗೆ ಅಮೃತಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಜೋಡಿ ಕೊಲೆ ಪ್ರಕರಣ ಸಂಬಂಧ ಅಮೃತಹಳ್ಳಿ ಠಾಣೆ ಪೊಲೀಸರು 30 ದಿನಗಳೊಳಗೆ ತನಿಖೆ ಪೂರ್ಣಗೊಳಿಸಿ ನಾಲ್ವರು ಆರೋಪಿಗಳ ವಿರುದ್ಧ ಕೋರ್ಟ್‌ಗೆ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ. ಆರೋಪಿಗಳಾದ ದೇಶ್ಪಾಲ್ ನೆಟ್‌ವರ್ಕ್ ಪ್ರೈ.ಲಿ. (ಜಿ-ನೆಟ್) ಕಂಪನಿ ಮಾಲೀಕ ಅರುಣ್ ಕುಮಾರ್, ಶಬರೀಶ್ ಅಲಿಯಾಸ್ ಫೆಲೀಕ್ಸ್, ಸಂತೋಷ್ ಹಾಗೂ ವಿನಯರೆಡ್ಡಿ ವಿರುದ್ಧ 1,350 ಪುಟಗಳ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದಾರೆ.
ಆರೋಪಿಗಳು ಅಮೃತಹಳ್ಳಿ ಪಂಪಾ ಬಡಾವಣೆಯಲ್ಲಿ 6ನೇ ಅಡ್ಡರಸ್ತೆಯ ಏರೋನಿಕ್ಸ್ ಮೀಡಿಯಾ ಪ್ರೈ.ಲಿ.ಗೆ ಜು. 11ರಂದು ಮಧ್ಯಾಹ್ನ 3.50ರ ಸುಮಾರಿಗೆ ನುಗ್ಗಿ ವ್ಯವಸ್ಥಾಪಕ ನಿರ್ದೇಶಕ ಫಣೀಂದ್ರ ಸುಬ್ರಮಣ್ಯ ಮತ್ತು ಮುಖ್ಯ ಕಾರ್ಯ ನಿರ್ವಾಹಕ ವಿನುಕುಮಾರ್‌ನನ್ನು ಕೊಲೆಗೈದು ಪರಾರಿಯಾಗಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಅಮೃತಹಳ್ಳಿ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳು ಬಂಧಿಸಿದ್ದರು.
100ಕ್ಕೂ ಅಧಿಕ ವಸ್ತುಗಳು ಜಪ್ತಿ: ಕೊಲೆಯಾದ ಫಣಿಂದ್ರ ಮತ್ತು ವಿನುಕುಮಾರ್ ಈ ಹಿಂದೆ ಜಿ-ನೆಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಇತ್ತೀಚೆಗೆ ಕೆಲಸ ಬಿಟ್ಟು ಸ್ವಂತ ಏರೋ ನಿಕ್ಸ್ ಮೀಡಿಯಾ ಪ್ರೈ.ಲಿ. ಪ್ರಾರಂಭಿಸಿದ್ದರು. ಅಂತೆಯೆ ತಮ್ಮ ಜತೆಗೆ ಈ ಹಿಂದೆ ಜಿ-ನೆಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಕೆಲ ನೌಕರರನ್ನು ತಮ್ಮ ಕಂಪನಿಗೆ ನೇಮಿಸಿಕೊಂಡಿದ್ದರು. ಹೀಗಾಗಿ ಜಿ-ನೆಟ್ ಕಂಪನಿ ಮಾಲೀಕ ಅರುಣ್, ಫಣೀಂದ್ರ ಮತ್ತು ವಿನುಕುಮಾರ್ ವಿರುದ್ಧ ದ್ವೇಷ ಸಾಧಿಸುತ್ತಿದ್ದ. ಅದಕ್ಕೆ ತನ್ನ ಉದ್ಯೋಗಿಗಳಾದ ಫೆಲೀಕ್ಸ್, ಸಂತೋಷ್, ವಿನಯ ರೆಡ್ಡಿ ಜತೆಗೂಡಿ ಸಂಚು ರೂಪಿಸಿ ಹಂತಕರಿಗೆ ಮಾರಕಾಸ್ತ್ರ ಹಾಗೂ ಹಣಕಾಸಿನ ನೆರವು ನೀಡಿದ್ದ.
ಹೀಗಾಗಿ ಆರೋಪಿಗಳು ಜೋಡಿ ಕೊಲೆ ಮಾಡಿದ್ದರು ಎಂಬುದು ತನಿಖೆಯಿಂದ ಬಯಲಾಗಿದೆ. ಪೊಲೀಸರು ಪ್ರಕರಣದ ತನಿಖೆ ವೇಳೆ 100ಕ್ಕೂ ಅಧಿಕ ವಸ್ತುಗಳನ್ನು ಅಮಾನತ್ತುಪಡಿಸಿಕೊಂಡಿದ್ದಾರೆ. 22 ಪಂಚನಾಮೆ ಮಾಹಿತಿ, 126 ಮಂದಿ ಸಾಕ್ಷಿದಾರ ಹೇಳಿಕೆ ಸೇರಿ ಒಟ್ಟು 1,350 ಪುಟಗಳ ದೋಷಾರೋಪಪಟ್ಟಿ ಸಿದ್ಧಪಡಿಸಿ ಘಟನೆ ನಡೆದ 30 ದಿನಗಳೊಳಗೆ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.