Advertisement
ಹೆಗ್ಗನಹಳ್ಳಿ ನಿವಾಸಿ ಸರ್ವರಿ ಬೇಗಂ (42), ಆಕೆಯ ಪುತ್ರ ಶಫಿ ಉರ್ ರೆಹಮಾನ್ (20), ಸುಪಾರಿ ಪಡೆದುಕೊಂಡಿದ್ದ ಥಣಿಸಂದ್ರದ ನಿವಾಸಿ ಅಫ್ತಾಬ್ (21), ಆತನ ಸಹಚರರಾದ ಪೀಣ್ಯದ ಸೈಯದ್ ಅವೆಜ್ ಪಾಷಾ (23) ಹಾಗೂ ಮಹಮ್ಮದ್ ಸೈಫ್ (20) ಎಂಬಾತನನ್ನು ಬಂಧಿಸಲಾಗಿದೆ. ಆರೋಪಿಗಳು ಮಹಮ್ಮದ್ ಹಂಜಲ (52) ಕೊಲೆಗೈದಿದ್ದರು. ಆರೋಪಿಗಳಿಂದ 98 ಸಾವಿರ ಹಣ ಜಪ್ತಿ ಮಾಡಲಾಗಿದೆ. ಘಟನೆ ನಡೆದ 18 ದಿನಗಳ ಬಳಿಕ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.
Related Articles
ಆರೋಪಿಗಳ ಪೈಕಿ ಅಫ್ತಾಬ್ ವಿರುದ್ಧ 2019ರಲ್ಲಿ ರಾಜಗೋಪಾಲನಗರ ಠಾಣೆಯಲ್ಲಿ ದಾಖಲಾಗಿದ್ದ ಕೊಲೆಯತ್ನ ಪ್ರಕರಣ ಮತ್ತು ತುಮಕೂರು ಠಾಣೆಯಲ್ಲಿ ಮೊಬೈಲ್ ಕಳವು ಪ್ರಕರಣಗಳು ದಾಖಲಾಗಿವೆ. ಈತನನ್ನು ಸಂಪರ್ಕಿಸಿದ ಶಫಿ ಉರ್ ರೆಹಮಾನ್ ಮತ್ತು ತಾಯಿ ಬೇಗಂ, 4.5 ಲಕ್ಷ ರೂ.ಗೆ ಪತಿಯ ಹತ್ಯೆಗೆ ಸುಪಾರಿ ಕೊಟ್ಟಿದ್ದರು. ಈ ಸಂಬಂಧ ಅಫ್ತಾಬ್, ತನ್ನ ಸಹಚರರಾದ ಮಹಮ್ಮದ್ ಸೈಫ್ ಹಾಗೂ ಸೈಯದ್ ಅವೆಜ್ ಜತೆ ಸೇರಿಕೊಂಡು ಮಹಮ್ಮದ್ ಹಂಜಲ್ ಹತ್ಯೆಗೆ ಸಂಚು ರೂಪಿಸಿದ್ದ.
Advertisement
ಫೆ.10ರಂದು ರಾತ್ರಿ ಸರ್ವರಿ ಬೇಗಂ ಪತಿಯ ಊಟದಲ್ಲಿ ಆರು ನಿದ್ರೆ ಮಾತ್ರೆ ಬೆರೆಸಿ ಕೊಟ್ಟಿದ್ದಳು. ಊಟ ಮಾಡಿ ಮಹಮ್ಮದ್ ನಿದ್ರೆಗೆ ಜಾರಿದ್ದ. ಬೆಳಗಿನ ಜಾವ 3.30ರ ಸುಮಾರಿಗೆ ಅಫ್ತಾಬ್ ತನ್ನ ಸಹಚರರ ಜತೆ ಮನೆಗೆ ಬಂದು ಮಹಮ್ಮದನನ್ನು ಉಸಿರುಗಟ್ಟಿಸಿ ಹತ್ಯೆ ಮಾಡಿ ಪರಾರಿಯಾಗಿದ್ದರು ಎಂದು ಪೊಲೀಸರು ಹೇಳಿದರು.
ಹೃದಯಾಘಾತದ ಕಥೆ ಕಟ್ಟಿದ ಪತ್ನಿ, ಪುತ್ರಮರು ದಿನ ಪತಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಪತ್ನಿ, ಪುತ್ರ ಸುಳ್ಳು ಸುದ್ದಿ ಹಬ್ಬಿಸಿದ್ದರು. ಅಲ್ಲದೆ, ಮೃತ ದೇಹವನ್ನು ತಿಗಳರಪಾಳ್ಯದ ಸ್ಮಶಾನದಲ್ಲಿ ಅಂತ್ಯಸಂಸ್ಕಾರ ಮಾಡಿದ್ದರು. ಅನಂತರ ಕೆಲ ದಿನಗಳ ಬಳಿಕ ಸ್ಥಳೀಯರೊಬ್ಬರು ಆರೋಪಿಗಳ ವರ್ತನೆ ಗಮನಿಸಿ ಅನುಮಾನಗೊಂಡು ಠಾಣೆಗೆ ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಇನ್‌ಸ್ಪೆಕ್ಟರ್ ಐಯಣ್ಣ ಬಿ.ರೆಡ್ಡಿ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ಬಳಿಕ ಸರ್ವರಿ ಬೇಗಂನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯಾಂಶ ಬೆಳಕಿಗೆ ಬಂದಿದೆ. ಬಳಿಕ ಎಲ್ಲ ಆರೋಪಿಗಳನ್ನು ಬಂಧಿಸಲಾಗಿದೆ. ಮೃತ ದೇಹವನ್ನು ಹೊರಗೆ ತೆಗೆದು ಮರಣೋತ್ತರ ಪರೀಕ್ಷೆ ನಡೆಸಬೇಕಿದೆ ಎಂದು ಪೊಲೀಸರು ಹೇಳಿದರು.