ಬೆಂಗಳೂರು: ಮದ್ಯದ ಅಮಲಿನಲ್ಲಿ ಇಬ್ಬರು ಸ್ನೇಹಿತರ ನಡುವೆ ನಡೆದ ಜಗಳ ಒಬ್ಬನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಪುಟ್ಟೇನಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಗದಗ ಜಿಲ್ಲೆ ಮೂಲದ ಬಸವರಾಜು (23) ಕೊಲೆಯಾದವ.
ಕನಕಪುರ ಮೂಲದ ಅಭಿಷೇಕ್ ಎಂಬ ಆರೋಪಿ ತಲೆಮರೆಸಿಕೊಂಡಿದ್ದಾನೆ. ಆತನಿಗಾಗಿ ಶೋಧ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.
ಗದಗ ಮೂಲದ ಬಸವರಾಜ 25 ವರ್ಷಗಳಿಂದ ಕುಟುಂಬ ಸಮೇತ ಪುಟ್ಟೇನಹಳ್ಳಿಯಲ್ಲಿ ವಾಸವಾಗಿದ್ದ. ಯಾವುದೇ ಕೆಲಸಕ್ಕೆ ಹೋಗುತ್ತಿರಲಿಲ್ಲ. ಅಭಿಷೇಕ್ ಸಹ ಯಾವುದೇ ಕೆಲಸಕ್ಕೆ ಹೋಗುತ್ತಿರಲಿಲ್ಲ. ಸಣ್ಣ-ಪುಟ್ಟ ಕೆಲಸ ಮಾಡಿಕೊಂಡು ಬಂದ ಹಣದಲ್ಲಿ ಇಬ್ಬರು ಕಂಠಪೂರ್ತಿ ಮದ್ಯ ಸೇವಿಸುತ್ತಿದ್ದರು.
Related Articles
ಮಂಗಳವಾರ ರಾತ್ರಿ ಇಬ್ಬರು ಬಾರ್‌ವೊಂದರಲ್ಲಿ ಮದ್ಯ ಸೇವಿಸಿದ್ದಾರೆ. ತಡರಾತ್ರಿ 12 ಗಂಟೆ ಸುಮಾರಿಗೆ ವಾಪಸ್ ಮನೆಗೆ ಹೋಗುತ್ತಿದ್ದರು. ಸಿದ್ದಲಿಂಗೇಶ್ವರ ಚಿತ್ರಮಂದಿರ ಬಳಿಯ ಜಂಕ್ಷನ್ ಸಮೀಪ ನಡೆದು ಹೋಗುವಾಗ ಇಬ್ಬರ ನಡುವೆ ಕ್ಷುಲ್ಲಕ ವಿಚಾರಕ್ಕೆ ಜಗಳ ನಡೆದಿದೆ. ಅದು ವಿಕೋಪಕ್ಕೆ ಹೋದಾಗ ಅಭಿಷೇಕ್ ಚಾಕುವಿನಿಂದ ಬಸವರಾಜನ ಕುತ್ತಿಗೆ ಕೊಯ್ದು ಪರಾರಿಯಾಗಿದ್ದಾನೆ. ತೀವ್ರ ರಕ್ತ ಸ್ರಾವದಿಂದ ಬಸವರಾಜು ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ವಿಚಾರ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಪುಟ್ಟೇನಹಳ್ಳಿ ಪೊಲೀಸರು, ಮೃತದೇಹವನ್ನು ಕಿಮ್ಸ್‌ಗೆ ರವಾನಿಸಿದ್ದಾರೆ. ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿ ಅಭಿಷೇಕ್‌ಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದರು. ಪುಟ್ಟೇನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.