Advertisement

ಯುವಕನ ಹತ್ಯೆಗೈದು ಕೆರೆ ಬಳಿ ಶವ ಎಸೆದ ದುರುಳರು

01:30 PM Jul 12, 2023 | Team Udayavani |

ಬೆಂಗಳೂರು: ಯುವಕನನ್ನ ಅಪಹರಿಸಿ ಭೀಕರವಾಗಿ ಹತ್ಯೆ ಮಾಡಿದ ದುರುಳರು, ಶವವನ್ನು ಕೆಂಗೇರಿಯ ಕೋಣಸಂದ್ರ ಕೆರೆ ಬಳಿ ಎಸೆದು ಪರಾರಿಯಾಗಿದ್ದಾರೆ.

Advertisement

ಚಂದ್ರಲೇಔಟ್‌ ನಿವಾಸಿ ಮೊಹಮ್ಮದ್‌ ತಾಹೀರ್‌ (19) ಕೊಲೆಯಾದ ಯುವಕ.

ಚಾಮರಾಜಪೇಟೆಯ ಟಿಪ್ಪುನಗರದ ಆರೋಪಿ ನ್ಯಾಮತ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಹಿಂದೂಸ್ಥಾನ್‌ ಕಂಪನಿಯಲ್ಲಿ ಡಿಲಿವರಿ ಬಾಯ್‌ ಆಗಿ ಕೆಲಸ ಮಾಡುತ್ತಿದ್ದ ತಾಹೀರ್‌ಗೆ ಕೆಲ ದಿನಗಳ ಹಿಂದೆ ನ್ಯಾಮತ್‌ ಜತೆಗೆ ಜಗಳವಾಗಿತ್ತು. ಜುಲೈ 10ರಂದು ರಾತ್ರಿ 11 ಗಂಟೆಗೆ ತಾಹೀರ್‌ಗೆ ನ್ಯಾಮತ್‌ ಹಾಗೂ ಆತನ ಸ್ನೇಹಿತರು ಕರೆ ಮಾಡಿ ತಾವಿದ್ದಲ್ಲಿಗೆ ಬರುವಂತೆ ಸೂಚಿಸಿದ್ದರು. ಬಳಿಕ ನಾಯಂಡಹಳ್ಳಿ ಮೆಟ್ರೋ ನಿಲ್ದಾಣದ ಬಳಿ ತಾಹೀರ್‌ನನ್ನು ಭೇಟಿಯಾಗಿ ಆತನನ್ನು ಬಲವಂತವಾಗಿ ಆಟೋದಲ್ಲಿ ಅಪಹರಿಸಿಕೊಂಡು ಕೆಂಗೇರಿ ಕಡೆ ಹೋಗಿದ್ದರು. ಇತ್ತ ರಾತ್ರಿಯಾದರೂ ತಾಹೀರ್‌ ಮನೆಗೆ ಬಾರದಿದ್ದಾಗ ಆತನ ತಂದೆ ಸೈಯದ್‌ ಮೆಹಬೂಬ್‌ ಆತನಿಗೆ ಕರೆ ಮಾಡಿದ್ದರು.

ಆದರೆ ತಾಹೀರ್‌ ಕರೆ ಸ್ವೀಕರಿಸಿರಲಿಲ್ಲ. ಬಳಿಕ ನ್ಯಾಮತ್‌ ಮನೆಯ ಬಳಿ ಹೋಗಿ ಮೆಹಬೂಬ್‌ ಪುತ್ರನ ಬಗ್ಗೆ ವಿಚಾರಿಸಿದ್ದರು. ಆಗ ನ್ಯಾಮತ್‌ ತಂದೆ ಆತನಿಗೆ ಕರೆ ಮಾಡಿ ವಿಚಾರಿಸಿದಾಗ, ‘ತಾನು ಕೆಂಗೇರಿಯಲ್ಲಿದ್ದು, ತಾಹೀರ್‌ ಸಹ ತನ್ನೊಂದಿಗೆ ಇರುವುದಾಗಿ ನ್ಯಾಮತ್‌ ಹೇಳಿದ್ದ. ಕೂಡಲೇ ತಾಹೀರ್‌ನನ್ನು ಕರೆತರುವಂತೆ ನ್ಯಾಮತ್‌ ತಂದೆ ಹೇಳಿದಾಗ ನ್ಯಾಮತ್‌ ಕರೆ ಕಡಿತಗೊಳಿಸಿದ್ದ. ಆತಂಕಗೊಂಡ ತಾಹೀರ್‌ ಪಾಲಕರು ಕೆಂಗೇರಿ ಬಳಿಗೆ ಬಂದು ತಾಹೀರ್‌ಗಾಗಿ ಹುಡುಕಾಟ ನಡೆಸಿದ್ದರು. ಆದರೆ, ಎಲ್ಲೂ ಮಗ ತಾಹೀರ್‌ ಪತ್ತೆಯಾಗದಿದ್ದಾಗ ಚಂದ್ರಲೇಔಟ್‌ ಪೊಲೀಸ್‌ ಠಾಣೆಯಲ್ಲಿ ಈ ಕುರಿತು ದೂರು ನೀಡಿದ್ದರು. ಚಂದ್ರಾಲೇಔಟ್‌ ಪೊಲೀಸರು ಕೆಂಗೇರಿ ಸುತ್ತ-ಮುತ್ತ ಮಂಗಳವಾರ ಹುಡುಕಾಟ ನಡೆಸಿದಾಗ ಕೆಂಗೇರಿಯ ಕೋಣಸಂದ್ರ ಕೆರೆ ಬಳಿ ತಾಹೀರ್‌ ಶವ ಪತ್ತೆಯಾಗಿತ್ತು.

ಆರೋಪಿ ನ್ಯಾಮತ್‌ನನ್ನು ಚಂದ್ರಾಲೇಔಟ್‌ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದು, ಕೊಲೆಗೆ ನಿಖರ ಕಾರಣವೇನು ಎಂಬುದನ್ನು ಪತ್ತೆಹಚ್ಚಲಾಗುತ್ತಿದೆ. ಕೆಂಗೇರಿಯ ಕೋಣಸಂದ್ರ ಕೆರೆಯ ಬಳಿ ಪತ್ತೆಯಾದ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈಯಕ್ತಿಕ ವಿಚಾರಕ್ಕೆ ಕೊಲೆ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next